ಒಂದು ಸ್ಕೂಟರ್‌ನಲ್ಲಿ ಮೂವರು ಕುಳಿತಿದ್ದು, ಪ್ಯಾಲೆಸ್ಟೀನ್ ಬಾವುಟ ಹಿಡಿದು ದಂಟರಮಕ್ಕಿ ಕೆರೆ ಮೇಲಿನ ರಸ್ತೆಯಲ್ಲಿ ಹನುಮಂತಪ್ಪ ವೃತ್ತದ ಕಡೆಗೆ ಬಂದಿದ್ದಾರೆ. ಮತ್ತೊಂದು ಬೈಕ್‌ನಲ್ಲಿ ಇನ್ನೂ ಮೂವರು ಕುಳಿತು ಮತ್ತೊಂದು ಬಾವುಟ ಹಿಡಿದು ಅದೇ ರಸ್ತೆಯಲ್ಲಿ ಹಿಂಬಾಲಿಸಿದ್ದಾರೆ.
ಈ ವಿಡಿಯೊ ಹರಿದಾಡುತ್ತಿದ್ದಂತೆ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ನಗರ ಠಾಣೆಗೆ ಬಳಿ ಜಮಾಯಿಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
‘ಈದ್ ಮಿಲಾದ್ ಸಂದರ್ಭದಲ್ಲಿ ರಾಷ್ಟ ವಿರೋಧಿ ಮನಸ್ಥಿತಿಯ ಯುವಕರು ಪ್ಯಾಲೆಸ್ಟೀನ್ ಧ್ವಜ ಹಿಡಿದು ಜಾಥಾ ಮಾಡಿದ್ದಾರೆ. ಈ ರೀತಿ ರಾಜಾರೋಷವಾಗಿ ದೇಶ ವಿರೋಧಿ ಚಟುವಟಿಕೆ ನಡೆಸಿರುವ ಯುವಕರನ್ನು ಕೂಡಲೇ ಬಂಧಿಸಬೇಕು’ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಒತ್ತಾಯಿಸಿದರು.
‘ನಾಗಮಂಗಲದಲ್ಲಿ ಕೋಮು ಗಲಭೆಯಾಗಿದ್ದು, ಜನ ಆತಂಕದಲ್ಲಿದ್ದಾರೆ. ನಾಳೆ ಈದ್ ಮಿಲಾದ್ ಇದೆ. ಎರಡು ದಿನಗಳಲ್ಲಿ ಗಣೇಶ ಮೆರವಣಿಗೆಗಳು ನಡೆಯಬೇಕಿದೆ. ಈ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಸಲು ಈ ರೀತಿಯ ಧ್ವಜ ಹಾರಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ, ‘ಬಾವುಟ ಹಿಡಿದು ಸಂಚರಿಸಿರುವ ಬೈಕ್ ನಂಬರ್ ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಲು ತಂಡ ರಚನೆ ಮಾಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.