ಹಿರಿಯೂರು: ಕೇವಲ ₨ 2 ಕೋಟಿ ಅಂದಾಜು ವೆಚ್ಚದ ಕಾಮಗಾರಿಯೊಂದು ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ 13 ವರ್ಷ ಕಳೆದರೂ ಮುಗಿದಿಲ್ಲ ಎಂದರೆ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿ ಮುಗಿಯುತ್ತದೆಯೇ ಎಂಬ ಸಂಶಯ ತಾಲ್ಲೂಕಿನ ಜನರನ್ನು ಕಾಡತೊಡಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನೀರಾವರಿ ಸಚಿವರು 2017ರ ಒಳಗೆ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದು, ಈ ಆಶ್ವಾಸನೆ ಇಲ್ಲಿನ ಜನರನ್ನು ಹುಬ್ಬೇರಿಸುವಂತೆ ಮಾಡಿದೆ.

ಜನತೆಯ ಸಂಶಯಕ್ಕೆ ಕಾರಣವಿಷ್ಟೆ. 2003 ಜೂನ್ 16ರಂದು ತಾಲ್ಲೂಕಿನ ಹಾಲುದ್ಯಾಮೇನಹಳ್ಳಿ ಸಮೀಪವಿರುವ ಕತ್ತೆಹೊಳೆ ಎಂಬಲ್ಲಿ 1975ರಲ್ಲಿ ನಿರ್ಮಿಸಿರುವ ಸಣ್ಣ ಕೆರೆಯಿಂದ ಉಡುವಳ್ಳಿ ಕೆರೆಗೆ ಪೂರಕ ನಾಲೆ ನಿರ್ಮಾಣಕ್ಕೆ ₨ 2 ಕೋಟಿ ಮಂಜೂರಾಗಿತ್ತು.
ಸದರಿ ಕಾಮಗಾರಿಗೆ ಅಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಸೌಭಾಗ್ಯ ಬಸವರಾಜನ್ ಗುದ್ದಲಿ ಪೂಜೆ ನೆರವೇರಿಸಿದ್ದರು.
ಆರಂಭದಲ್ಲಿ ಬೃಹತ್ ಗಾತ್ರದ ಯಂತ್ರಗಳನ್ನು ತಂದು ಕಾಮಗಾರಿ ನಡೆದ ವೇಗ ನೋಡಿದ ಸುತ್ತಮುತ್ತಲ ಗ್ರಾಮಗಳ ರೈತರು ಒಂದೇ ವರ್ಷದಲ್ಲಿ ಪೂರಕ ನಾಲೆಯಲ್ಲಿ ನೀರು ಹರಿದು ಉಡುವಳ್ಳಿ ಕೆರೆಗೆ ಸೇರುತ್ತದೆ, ತಮ್ಮ ಬದುಕು ಹಸನಾಗುತ್ತದೆ ಎಂದು ಕನಸು ಕಂಡಿದ್ದರು.
ಆದರೆ, ಈಗಿನ ಸ್ಥಿತಿ ನೋಡಿದರೆ ಅಗೆದಿರುವ ಕಾಲುವೆಯೂ ಮುಚ್ಚಿ ಹೋಗುತ್ತದೇನೋ ಎಂಬ ಭೀತಿ ಜನರನ್ನು ಕಾಡುತ್ತಿದೆ.

ಕತ್ತೆಹೊಳೆ ಕೆರೆಯಿಂದ ಪೂರಕ ನಾಲೆ ನಿರ್ಮಿಸಿದರೆ ಉಡುವಳ್ಳಿ ಕೆರೆ ಸದಾ ತುಂಬಿರುತ್ತದೆ. ಹಿರಿಯೂರು ನಗರದವರೆಗೂ ಅಂತರ್ಜಲ ವೃದ್ಧಿಸುತ್ತದೆ. ಉಡುವಳ್ಳಿ, ಹುಲುಗಲಕುಂಟೆ, ಸೋಮೇರಹಳ್ಳಿ, ಗಾಂಧಿನಗರ, ಸೋಮೇರಹಳ್ಳಿ ತಾಂಡಾ ಸೇರಿದಂತೆ ಬಹುತೇಕ
ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಸ್ಥಳೀಯರು ಒತ್ತಡ ಹೇರಿದ್ದರು. ಇದರಿಂದ 1994ರಲ್ಲಿ ಯೋಜನೆಯ ರೂಪುರೇಷೆ ಸಿದ್ಧಗೊಂಡರೂ, ಅರಣ್ಯ ಪ್ರದೇಶದಲ್ಲಿ ನಾಲೆ ಹಾದು ಹೋಗುತ್ತದೆ ಎಂಬ ಕಾರಣಕ್ಕೆ ಕೇಂದ್ರ
ಸರ್ಕಾರದ ನಿರಾಕ್ಷೇಪಣ ಪತ್ರ ದೊರೆಯುವುದು ವಿಳಂಬವಾಯಿತು.

ಸ್ಥಳೀಯರು ಜನಪ್ರತಿನಿಧಿಗಳ ಮೇಲೆ ಪದೇ ಪದೇ ಒತ್ತಡ ಹಾಕಿದ್ದರಿಂದ 1999ರಲ್ಲಿ ಯೋಜನೆಯ ಕಡತಕ್ಕೆ ಮತ್ತೆ ಚಾಲನೆ ದೊರೆತು, ಸಂಬಂಧಿಸಿದ ಎಲ್ಲಾ ಇಲಾಖೆಗಳ ಅನುಮೋದನೆ ಪಡೆದು, ಹಣ ಬಿಡುಗಡೆಯಾಯಿತು. ಇದರಿಂದ 2003ರಲ್ಲಿ ಕಾಮಗಾರಿ ಆರಂಭವಾಯಿತು. 7.5 ಕಿ.ಮೀ. ನಾಲೆ ನಿರ್ಮಿಸುವ ಕಡೆ 5.5 ಕಿ.ಮೀ. ನಿರ್ಮಾಣಗೊಂಡ ನಂತರ ಸ್ಥಗಿತಗೊಂಡ ಕಾಮಗಾರಿ, 10 ವರ್ಷ ಕಳೆದರೂ ಆರಂಭವಾಗಲೇ ಇಲ್ಲ. ಕಾಮಗಾರಿಯ ಗುತ್ತಿಗೆ ಕೆ.ಆರ್.ಪೇಟೆ ಮೂಲದ ವ್ಯಕ್ತಿಯೊಬ್ಬರಿಗೆ ಸಿಕ್ಕಿತ್ತು. ಕೆಲವು ಕಡೆ ನಾಲೆಯನ್ನು 30 ಅಡಿ ಅಗಲ, 51 ಅಡಿ ಆಳ ತೆಗೆಯಬೇಕಿತ್ತು. ಬೃಹತ್ ಗಾತ್ರದ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿ ಮಾಡದ ಕಾರಣ ಕಾಮಗಾರಿ ಸ್ಥಗಿತಗೊಂಡಿತು ಎಂದು ಸ್ಥಳೀಯರು ಆರೋಪಿಸುತ್ತಾರೆ.

ತದನಂತರ ₨ 2 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ₨ 4 ಕೋಟಿ ಬೇಕಾಗುತ್ತದೆಂದು 11ನೇ ಹಣಕಾಸು ಆಯೋಗಕ್ಕೆ ವರದಿ ಸಲ್ಲಿಸಿದ ನಂತರ ಹಣವೂ ಮಂಜೂರಾಯಿತು. ಆದರೆ, ಅದೇ ವೇಳೆಗೆ ಸರ್ಕಾರ ಬದಲಾದ ಕಾರಣ ಮಂಜೂರಾಗಿದ್ದ ಹಣ ಬಿಡುಗಡೆ ಆಗಲೇ ಇಲ್ಲ. ಹೀಗಾಗಿ ಕಾಮಗಾರಿಗೆ ಮತ್ತೊಮ್ಮೆ ಗ್ರಹಣ ಹಿಡಿಯಿತು ಎಂದು ಸೋಮೇರಹಳ್ಳಿಯ ಎ.ಎಂ.ಅಮೃತೇಶ್ವರ್ ಹೇಳುತ್ತಾರೆ.
ಇದುವರೆಗೂ ಕಾಮಗಾರಿಗೆ ಎಷ್ಟು ವೆಚ್ಚವಾಗಿದೆ? ಬಿಡುಗಡೆಯಾಗಿರುವ ಹಣ, ಬೇಕಿರುವ ಮೊತ್ತದ ಲೆಕ್ಕಾಚಾರ ಹಾಕಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದರೆ ಉಡುವಳ್ಳಿ ಕೆರೆ ಪ್ರತೀ ವರ್ಷ ತುಂಬುತ್ತದೆ. ಸುಮಾರು 800 ಎಕರೆ ಪ್ರದೇಶಕ್ಕೆ ನೀರು ಉಣಿಸಬಹುದಾಗಿದೆ ಎನ್ನುವುದು ಸೀಗೆಹಟ್ಟಿಯ ದಾಸಪ್ಪ ಅವರ ಅಭಿಪ್ರಾಯ.

ಮುಖ್ಯಾಂಶಗಳು
*1994ರಲ್ಲಿ ಯೋಜನೆಯ ರೂಪುರೇಷೆ ಸಿದ್ಧ
*2003, ಜೂನ್ 16ರಂದು ಮಂಜೂರು
*ಅಂದು ಕಾಮಗಾರಿಗೆ ₨ 2 ಕೋಟಿ ಬಿಡುಗಡೆ
*800 ಎಕರೆ ಪ್ರದೇಶಕ್ಕೆ ನೀರಾವರಿ ಸಾಧ್ಯತೆ
*7.5 ಕಿ.ಮೀ. ನಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.