ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಬಯಲು ಸೀಮೆಯಲ್ಲಿ ಏಲಕ್ಕಿ ಬೆಳೆದ ರೈತ!

ಏಲಕ್ಕಿ ಎಲೆಗಳಿಂದ ಅಡಿಕೆ ತೋಟಗಳಿಗೆ ಸಾರಜನಕ
Last Updated 23 ಡಿಸೆಂಬರ್ 2021, 5:01 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಬಯಲು ಸೀಮೆ, ಅರೆ ಮಲೆನಾಡು ಎಂದೇ ಹೆಸರಾದ ಹೊಳಲ್ಕೆರೆ ತಾಲ್ಲೂಕಿನಲ್ಲಿ ಮಲೆನಾಡಿನಲ್ಲಿ ಬೆಳೆಯುವ ಸಾಂಬಾರು ಬೆಳೆಯನ್ನು ಬೆಳೆಯುವ ಮೂಲಕ ಸಾಸಲು ಹಳ್ಳದ ರೈತ (ತರಳಬಾಳು ನಗರ) ಜೆ.ಓಂಕಾರಸ್ವಾಮಿ ಅವರು ಇತರರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾಗಿರುವ ಓಂಕಾರಸ್ವಾಮಿ ಅವರ ಪ್ರಾಯೋಗಿಕ ಪ್ರಯತ್ನ ಸಫಲವಾಗಿದೆ. ಅವರು ತಮ್ಮ ಮೂರೂವರೆ ಎಕರೆಯ ಅಡಿಕೆ ತೋಟದಲ್ಲಿ ಮುಕ್ಕಾಲು ಎಕರೆ ಪ್ರದೇಶದಲ್ಲಿ 500 ಏಲಕ್ಕಿ ಗಿಡಗಳನ್ನು ಬೆಳೆದಿದ್ದಾರೆ. ಈಗ ಸಸಿಗಳು ಸಮೃದ್ಧವಾಗಿ ಬೆಳೆದಿದ್ದು, ಏಳು ಅಡಿಗಳಷ್ಟು ಎತ್ತರವಾಗಿ ಬೆಳೆದಿವೆ.

2020ರ ಜನವರಿ ತಿಂಗಳಲ್ಲಿ ಶೃಂಗೇರಿ ಸಮೀಪದ ಬೆಳಗೊಳದ ಫಾರಂ ಒಂದರಿಂದ ಒಂದು ಸಸಿಗೆ ₹12ರಂತೆ ಖರೀದಿಸಿ ಅಡಿಕೆ ಮರಗಳ ಮಧ್ಯದಲ್ಲಿ ನಾಟಿ ಮಾಡಿದ್ದಾರೆ.

‘ಸಸಿ ನಾಟಿ ಮಾಡುವ ಮುನ್ನ ಗುಂಡಿ ತೆಗೆದು, ಒಂದೊಂದು ಗುಂಡಿಗೆ ಒಂದು ಬುಟ್ಟಿಯಷ್ಟು ಕೊಟ್ಟಿಗೆ ಗೊಬ್ಬರವನ್ನು ಹಾಕಿದೆ. ಅಡಿಕೆ
ಗಿಡಗಳಿಗೆ ಬಳಸಿರುವ ಹನಿ ನೀರಾವರಿ ಪದ್ಧತಿ
ಯನ್ನು ಏಲಕ್ಕಿ ಗಿಡಗಳಿಗೂ ಅಳವಡಿಸಿದ್ದೇನೆ. 10 ತಿಂಗಳಲ್ಲಿ ಗಿಡಗಳ ಬುಡದಲ್ಲಿ ಗೊನೆಗಳು ಒಡೆಯಲು ಆರಂಭವಾದವು. ಈಗ 100
ಗಿಡಗಳಲ್ಲಿ ಏಲಕ್ಕಿ ಬಿಟ್ಟಿದೆ’ ಎನ್ನುತ್ತಾರೆ ಓಂಕಾರಸ್ವಾಮಿ.

‘ಈವರಗೆ 300 ಗ್ರಾಂನಷ್ಟು ಏಲಕ್ಕಿ ಸಿಕ್ಕಿದೆ. ವರ್ಷದ ಕೊನೆಗೆ ಇನ್ನೂ ಸುಮಾರು ಮುಕ್ಕಾಲು ಕೆ.ಜಿ.ಯಷ್ಟು ಏಲಕ್ಕಿ ಸಿಗುವ ಸಾಧ್ಯತೆ ಇದೆ. ಒಂದೂವರೆ ವರ್ಷದಿಂದ ಫಸಲು ಆರಂಭವಾಗುತ್ತದೆ. ಗಿಡವೊಂದಕ್ಕೆ ವರ್ಷಕ್ಕೆ 300–350 ಗ್ರಾಂ ನಷ್ಟು ಇಳುವರಿ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘10 ಅಡಿಗಳವರೆಗೂ ಗಿಡಗಳು ಬೆಳೆಯುತ್ತವೆ. 10 ವರ್ಷಗಳವರೆಗೂ ಫಸಲು ಪಡೆಯಬಹುದು. 11ನೇ ವರ್ಷದಲ್ಲಿ ಇದೇ ಗಿಡದ ಗೆಡ್ಡೆಯನ್ನು ತೆಗೆದು ಬೇರೆ ಕಡೆ ನಾಟಿ ಮಾಡಬಹುದು. ಇದರಿಂದ ಮತ್ತೆ ಸಸಿಗಳನ್ನು ಕೊಂಡು
ಕೊಳ್ಳಲು ಬಂಡವಾಳ ಹಾಕುವಂತಿಲ್ಲ. ಇದು ರೈತರಿಗೆ ಆರ್ಥಿಕ ಹೊರೆ ಕಡಿಮೆ
ಮಾಡುತ್ತದೆ’ ಎಂದು ಓಂಕಾರಸ್ವಾಮಿ ಹೇಳುತ್ತಾರೆ.

ಪ್ರೇರಣೆ ನೀಡಿದ ಕೃಷಿ ಮೇಳ

‘2018ರಲ್ಲಿ ಶಿವಮೊಗ್ಗದಲ್ಲಿ ಏಲಕ್ಕಿ ಸಾಂಬಾರ ಮಂಡಳಿಯಿಂದ ನಡೆದ ಕೃಷಿ ಮೇಳದಲ್ಲಿ, ತಜ್ಞರು ಏಲಕ್ಕಿ ಬೆಳೆಯಿಂದ ರೈತರಿಗೆ ಆಗುವ ಬಹೂಪಯೋಗಿ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿದರು. ಏಲಕ್ಕಿ ಗಿಡದ ಎಲೆಗಳಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಸಾರಜನಕದಿಂದ ದೀರ್ಘಾವಧಿಯ ತೋಟದ ಬೆಳೆಗಳಿಗೆ ವಿಪುಲವಾದ ಸಾರಜನಕ ಕೊಡುವುದರ ಬಗ್ಗೆ ಮಾಹಿತಿ ನೀಡಿದರು. ಇದರಿಂದ ಪ್ರೇರಿತನಾಗಿ ನಾನು ಅಡಿಕೆ ತೋಟದಲ್ಲಿ ಏಲಕ್ಕಿಯನ್ನು ಬೆಳೆಯಲು ನಿರ್ಧರಿಸಿದೆ. ಒಂದು ವರ್ಷದಿಂದ ಅಡಿಕೆ ತೋಟದಲ್ಲಿ ತೇವಾಂಶ ಕಡಿಮೆಯಾಗಿಲ್ಲ. ಜತೆಗೆ, ಎಲ್ಲಾ ಅಡಿಕೆ ಮರಗಳು ಸೊಂಪಾಗಿ ಬೆಳೆದಿವೆ. ಅಡಿಕೆಯಲ್ಲಿ ಉತ್ತಮ ಇಳುವರಿ ಬಂದಿದೆ’ ಪಡೆದಿರುವೆ ಎಂದು ಅನುಭವ ಹಂಚಿಕೊಂಡರು.

‘ತೋಟದ ಪಕ್ಕದಲ್ಲಿಯೇ ಹರಿಯುವ ಹಳ್ಳದಲ್ಲಿ ಸುಮಾರು 16 ಅಡಿ ಎತ್ತರ ಹಾಗೂ 50 ಅಡಿ ಉದ್ದದ ಚೆಕ್‌ಡ್ಯಾಂ ಇದ್ದು. ಮಳೆಗಾಲದಲ್ಲಿ ಹಳ್ಳದಲ್ಲಿ ಬರುವ ನೀರು ನಿಲ್ಲುವುದರಿಂದ ವರ್ಷವಿಡೀ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಿಲ್ಲ’ ಎಂದು ಓಂಕಾರಸ್ವಾಮಿ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT