ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಗಮನ ಸೆಳೆದ ‘ಸೂನ್ಯದ ಮಾರಮ್ಮ’ನ ಜಾತ್ರೆ

Last Updated 11 ಫೆಬ್ರುವರಿ 2021, 1:50 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾರದ ದೇವರಹಟ್ಟಿ ಹಾಗೂ ಬಂಡೆಹಟ್ಟಿ ಗ್ರಾಮದ ಬಯಲು ಪ್ರದೇಶದಲ್ಲಿ ಬುಧವಾರ ಜರುಗಿದ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ‘ಸೂನ್ಯದ ಮಾರಮ್ಮ’ನ ವಿಶಿಷ್ಟ ಜಾತ್ರಾ ಆಚರಣೆ ಗಮನ ಸೆಳೆಯಿತು.

ಗೂಡಿನಲ್ಲಿದ್ದ ಆರಾಧ್ಯ ದೈವಗಳ ದನಗಳ ಮೈ ತೊಳೆದು ಹೂವಿನಿಂದ ಸಿಂಗರಿಸಲಾಯಿತು. ನೂರಾರು ಹಸುಗಳನ್ನು ಕಿಲಾರಿಗಳು ಜಾತ್ರಾ ಸ್ಥಳಕ್ಕೆ ಕರೆದುಕೊಂಡು ಬಂದು ಅವುಗಳನ್ನು ಉತ್ತರ–ದಕ್ಷಿಣ ಮುಖವಾಗಿ ಭಕ್ತರ ಎದುರಿನಲ್ಲಿ ಮೆರೆಸಿದರು.

ನಂತರ ಹಸಿರು ಹುಲ್ಲಿನ ಗುಬ್ಬದಲ್ಲಿ ಸೂನ್ಯದ ಮಾರಿದೇವತೆ ಮೆರೆ ಮೂರ್ತಿಯನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.

ಹೂವು, ಬಾಳೆಹಣ್ಣು, ತೆಂಗಿನಕಾಯಿ, ಬೆಲ್ಲ, ಮಂಡಕ್ಕಿ ದೇವಿಗೆ ಅರ್ಪಿಸಿದರು. ಮತ್ತು ಮಂಡಕ್ಕಿ, ಬಾಳೆಹಣ್ಣು ಮತ್ತು ಬೆಲ್ಲದ ಚೂರನ್ನು ದೇವಿಯ ಉತ್ಸವಮೂರ್ತಿ ಹಾಗೂ ದೇವರ ದನಗಳ ಮೇಲೆ ಎಸೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ದೊರೆಗಳು, ಪೂಜಾರಿಗಳು, ಕಿಲಾರಿಗಳು ಹಾಗೂ ದಾಸಯ್ಯಗಳು ಸೇರಿ ಜನರು ಹುಲ್ಲಿನ ಗುಬ್ಬವನ್ನು ಹೊತ್ತು ಮೆರವಣಿಗೆ ನಡೆಸಿದರು. ನಂತರ ಗುಬ್ಬದ ಮೇಲಿನ ಮೀಸಲು ಹುಲ್ಲನ್ನು ತಮ್ಮ ಇಚ್ಛಾನುಸಾರ ಕಿತ್ತುಕೊಂಡು ಮನೆಗೆ ಸಾಗಿಸಿದರು.

ಮಾಗಿಯ ಉಕ್ಕಿಯಲ್ಲಿ (ಮಣ್ಣಿನಲ್ಲಿಯೇ) ಬಾಳೆಹಣ್ಣು, ಕಾಯಿಚೂರು ಹಾಗೂ ಬೆಲ್ಲವನ್ನು ಸಾಲಾಗಿ ಇಟ್ಟು ಉರುಮೆ ವಾದ್ಯದ ನಾದಕ್ಕೆ ಹೆಜ್ಜೆ ಹಾಕುತ್ತ ಪೂಜಾರಿ, ಕಿಲಾರಿ ಹಾಗೂ ದಾಸಯ್ಯಗಳು ಕುಣಿಯುತ್ತ ಮೂರು ಬಾರಿ ಕಾಸು ಮಣೇವು ತಿರುಗಿದರು.

ಭಕ್ತರು ಬಾಡೂಟವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.

ಕರೆಕಾಟ್ಲಹಟ್ಟಿ, ಬೋಸೆದೇವರಹಟ್ಟಿ, ಗಡ್ಡದಾರಹಟ್ಟಿ, ಪೆತ್ತಮನವರಹಟ್ಟಿ, ಪೇಲಾರಹಟ್ಟಿ, ಚಿಕ್ಕಕಾಟ್ಲಹಟ್ಟಿ, ಬಂಗಾರ ದೇವರಹಟ್ಟಿ, ಬಂಡೆಹಟ್ಟಿ, ಕುರಿನಿಂಗಯ್ಯನಹಟ್ಟಿ, ದೊರೆಹಟ್ಟಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಹಟ್ಟಿಗಳ ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT