ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಭಿವೃದ್ಧಿಗಾಗಿ ತೆರಿಗೆ ಪಾವತಿಸಿ: ಬಿ.ಆರ್.ಬಾಲಕೃಷ್ಣನ್

ಆಯಕರ್ ಸೇವಾ ಕೇಂದ್ರಕ್ಕೆ ಚಾಲನೆ
Last Updated 15 ಮೇ 2019, 14:29 IST
ಅಕ್ಷರ ಗಾತ್ರ

ಚಿತ್ರದುರ್ಗ: ನಾಗರಿಕರು ಆರ್ಥಿಕ ಅಭಿವೃದ್ಧಿ ಹೊಂದುವುದರ ಜೊತೆಗೆ ದೇಶದ ಅಭಿವೃದ್ಧಿಗೂ ಕಾನೂನಾತ್ಮಕವಾಗಿ ತೆರಿಗೆ ಪಾವತಿಸಬೇಕು ಎಂದು ಕರ್ನಾಟಕ, ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್.ಬಾಲಕೃಷ್ಣನ್ ಹೇಳಿದರು.

ತಮಟಕಲ್ಲು ರಸ್ತೆ ಮಾರ್ಗದ ಆದಾಯ ತೆರಿಗೆ ಇಲಾಖೆ ಆವರಣದಲ್ಲಿ ಬುಧವಾರ ನೂತನವಾಗಿ ಆರಂಭವಾದ ‘ಆಯಕರ್’ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆದಾಯ ತೆರಿಗೆ ಇಲಾಖೆಯು ದೇಶದ ಆರ್ಥಿಕ ಭದ್ರತೆ ಹಾಗೂ ಅಭಿವೃದ್ಧಿಯ ಉದ್ದೇಶದೊಂದಿಗೆ ಕರ ಸಂಗ್ರಹಿಸುವ ಮಹತ್ವಪೂರ್ಣ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ತೆರಿಗೆಯನ್ನು ಸಮರ್ಪಕವಾಗಿ ಪಾವತಿಸುವುದು, ಸಮಾಜದಲ್ಲಿ ಗೌರವಯುತ ಕಾರ್ಯವಾಗಿದೆ’ ಎಂದು ತಿಳಿಸಿದರು.

‘ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಆದಾಯ ತೆರಿಗೆ ಪಾವತಿ ಮತ್ತು ರಿಟರ್ನ್ಸ್ ಫೈಲ್ ಮಾಡುವುದು, ನಿಯಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರಕ್ರಿಯೆಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತಿದೆ’ ಎಂದು ಹೇಳಿದರು.

‘ರಾಜ್ಯದ ಅನೇಕ ಶಿಕ್ಷಣ ಸಂಸ್ಥೆಗಳು, ಶಾಲಾ, ಕಾಲೇಜುಗಳು, ಸಣ್ಣ ತೆರಿಗೆದಾರರು, ವೇತನ ಆಧಾರಿತ ತೆರಿಗೆ ಕಡಿತಗೊಳಿಸುವವರು ಸೇರಿ ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದರು.

‘ತೆರಿಗೆ ಪಾವತಿ ಮತ್ತು ರಿಟರ್ನ್ಸ್ ಫೈಲ್ ಮಾಡಲು ಈ ಮುಂಚೆ ಅನೇಕರಿಗೆ ತೊಂದರೆ ಉಂಟಾಗುತ್ತಿತ್ತು. ಅಲ್ಲದೆ, ನಿರೀಕ್ಷಿತ ಮಟ್ಟದಲ್ಲಿ ರಿಟರ್ನ್ಸ್ ಫೈಲ್ ಆಗುತ್ತಿರಲಿಲ್ಲ. ಹೀಗಾಗಿ ಸುಲಭ ರೀತಿಯಲ್ಲಿ ವಿವಿಧ ಸೇವೆಯನ್ನು ಮೊಬೈಲ್ ಮೂಲಕವೇ ಒದಗಿಸುವ ಉದ್ದೇಶದಿಂದ ಆ್ಯಪ್‌ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

‘ತೆರಿಗೆ ವಂಚಿಸಿ, ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಹಣ ಗಳಿಸುವವರನ್ನು ಮಟ್ಟಹಾಕಿ, ಅವರ ಮುಖವಾಡ ಕಳಚಿ ಬೀಳಿಸುವ ಸಾಮರ್ಥ್ಯ ಆದಾಯ ತೆರಿಗೆ ಇಲಾಖೆಗಿದೆ’ ಎಂದು ಹೇಳಿದರು.

‘ಪ್ರಭಾವಿ ಅಲ್ಲದವರ ಮೇಲೆ ಮಾತ್ರ ಇಲಾಖೆ ದಾಳಿ ಮಾಡಲಾಗುತ್ತದೆ ಎಂಬ ಆರೋಪವನ್ನು ದೂರ ಮಾಡಲಾಗಿದೆ. ಬೇನಾಮಿ ಆಸ್ತಿ ಹೊಂದಿದ ಪ್ರಭಾವಿಗಳ ವಿರುದ್ಧವೂ ಅಧಿಕಾರಿಗಳು ನಿರ್ಭಯವಾಗಿ ದಾಳಿ ನಡೆಸುತ್ತಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ’ ಎಂದು ತಿಳಿಸಿದರು.

‘ಕರ್ನಾಟಕ, ಗೋವಾ ವಲಯಕ್ಕೆ ಸಂಬಂಧಿಸಿದಂತೆ 2018ರಲ್ಲಿ ಒಟ್ಟು ₹ 1.21 ಲಕ್ಷ ಕೋಟಿ ಆದಾಯ ತೆರಿಗೆಯನ್ನು ಇಲಾಖೆ ಸಂಗ್ರಹಿಸಿದೆ. ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಶೇ 17ರಷ್ಟು ಹೆಚ್ಚಿನ ಆದಾಯ ತೆರಿಗೆ ಸಂಗ್ರಹಿಸಲಾಗಿದ್ದು, ದೇಶದಲ್ಲಿ ಮುಂಬೈ ಮತ್ತು ದೆಹಲಿ ನಂತರ ಮೂರನೇ ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹಿಸಿದ ವಲಯ ಇದಾಗಿದೆ. ರಾಜ್ಯದಲ್ಲಿ ಒಟ್ಟು 18 ಆಯಕರ್ ಸೇವಾ ಕೇಂದ್ರ ಪ್ರಾರಂಭಿಸಲಾಗಿದೆ’ ಎಂದರು.

ದಾವಣಗೆರೆಯ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಗೋಲಿ ಶ್ರೀನಿವಾಸರಾವ್, ‘2018ರಲ್ಲಿ ಜಿಲ್ಲೆಯ 35 ಸಾವಿರ ತೆರಿಗೆ ಪಾವತಿದಾರರಿಂದ ₹ 23 ಕೋಟಿ ತೆರಿಗೆ ಸಂಗ್ರಹವಾಗಿದೆ’ ಎಂದರು.

ದಾವಣಗೆರೆಯ ಹೆಚ್ಚುವರಿ ಆಯುಕ್ತ ಸುನಿಲ್ ಕುಮಾರ್ ಅಗರವಾಲ್, ‘ಸಾರ್ವಜನಿಕ ಸೇವೆಯಲ್ಲಿ ಇಲಾಖೆಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಹೇಳಿದರು.

‘ಆದಾಯ ತೆರಿಗೆ ಪಾವತಿದಾರರಿಗೆ ಒಂದೇ ಸೂರಿನಡಿ ಎಲ್ಲ ಸೇವೆ ಲಭ್ಯವಾಗುವಂತೆ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಆಯಕರ್ ಸೇವಾ ಕೇಂದ್ರ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯಾಗಿದೆ’ ಎಂದರು.

ಚಿತ್ರದುರ್ಗದ ಆದಾಯ ತೆರಿಗೆ ಇಲಾಖೆ ಅಧಿಕಾರಿ ವರಪ್ರಸಾದ್, ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ, ಲಕ್ಷ್ಮಿಕಾಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT