ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ದುರ್ಬಳಕೆ: ಎಫ್‌ಐಆರ್ ದಾಖಲಿಸಿ

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀರ್ಮಾನ * ಮದ್ಯದಂಗಡಿ ಸ್ಥಳಾಂತರಕ್ಕೆ ಜನಪ್ರತಿನಿಧಿಗಳ ಆಕ್ರೋಶ
Last Updated 16 ಜನವರಿ 2021, 15:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಪಿಎಫ್‌ ಹಾಗೂ ಇಎಸ್‌ಐ ಪಾವತಿಸದೇ ಯಾರೇ ವಂಚಿಸಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ತೀರ್ಮಾನಿಸಿತು.

‘ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಪಿಎಫ್‌ ಹಾಗೂ ಇಎಸ್‌ಐ ನೀಡದೇ ಜಿಲ್ಲೆಯಲ್ಲಿ ಕಳೆದ 6-7 ವರ್ಷಗಳಿಂದ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ. ತಪ್ಪಿತಸ್ಥರನ್ನು ಒಂದೇ ಗಂಟೆಯೊಳಗೆ ಬಂಧಿಸಲು ಅವಕಾಶವಿದೆ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

‘ಇದೇ ವಿಚಾರವಾಗಿ ಹಣ ದುರುಪಯೋಗದ ಆರೋಪ ಎದುರಿಸುತ್ತಿರುವ ರಶ್ಮಿ ಕಂಪ್ಯೂಟರ್ ಮಾಲೀಕರ ವಿರುದ್ಧದ ತನಿಖೆ ಯಾವ ಹಂತದಲ್ಲಿದೆ’ ಎಂದು ಶ್ರೀರಾಮುಲು ಪ್ರಶ್ನಿಸಿದರು. ‘ಆರೋಪಿತರ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದು, ಎಡಿಪಿ ಅವರ ಪರಿಶೀಲನೆಗೆ ಸಲ್ಲಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ ಉತ್ತರಿಸಿದರು.

ಮದ್ಯದಂಗಡಿಗಳ ಸ್ಥಳಾಂತರಕ್ಕೆ ಕೆಂಡಾಮಂಡಲ: ‘ಆಂಧ್ರಕ್ಕೆ ಹೊಂದಿಕೊಂಡಿರುವ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳ ವ್ಯಾಪ್ತಿಯ ಯಾವುದೇ ಗ್ರಾಮದಲ್ಲೂ ಹೊಸದಾಗಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಡಿ’ ಎಂದು ಶ್ರೀರಾಮುಲು ಸೂಚಿಸಿದರು.

‘ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಮದ್ಯದಂಗಡಿ ಸ್ಥಳಾಂತರಿಸದಂತೆ ಸೂಚನೆ ನೀಡಿದ್ದರೂ ಸಚಿವರ ಮಾತಿಗೆ ಕಿಮ್ಮತ್ತು ನೀಡಿಲ್ಲ. ಪ್ರತಿ ಗ್ರಾಮದಲ್ಲೂ 2-3 ಮದ್ಯದಂಗಡಿ ತೆರೆಯಲಾಗಿದೆ. ನಾಗರಿಕರು ವಿರೋಧಿಸಿದರೂ ಅನುಮತಿ ಕೊಟ್ಟಿರುವುದು ಏಕೆ’ ಎಂದು ಗರಂ ಆದರು.

‘ಲಾಕ್‌ಡೌನ್‌ಗೂ ಮುನ್ನ ಹಾಗೂ ಲಾಕ್‌ಡೌನ್‌ ತೆರವಾದ ಬಳಿಕ ಮದ್ಯ ದಾಸ್ತಾನಿನಲ್ಲಿ ಉಂಟಾಗಿರುವ ಭಾರಿ ವ್ಯತ್ಯಾಸದ ಕುರಿತು ಹಿಂದಿನ ಸಭೆಯಲ್ಲಿ ಪ್ರಶ್ನಿಸಿದ್ದೆ. ಅಕ್ರಮ ಮದ್ಯ ವಹಿವಾಟು ಹಾಗೂ ಪತ್ತೆಯಾದ ಪ್ರಕರಣಗಳ ಕುರಿತು ಹೊಳಲ್ಕೆರೆ ಶಾಸಕರು ಸಭೆಯ ಗಮನ ಸೆಳೆದಿದ್ದರು. ಎಷ್ಟು ಪ್ರಕರಣ ದಾಖಲಿಸಿದ್ದೀರಿ’ ಎಂದು ಅಬಕಾರಿ ಅಧಿಕಾರಿಯನ್ನು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್‌ಗೂ ಹೋಗಬಲ್ಲೆ: ‘ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನ ದುರ್ಗದಲ್ಲೂ ಇದೇ ರೀತಿಯಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಮದ್ಯ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ದುರುದ್ದೇಶದಿಂದ ವಿರೋಧಿಸುತ್ತಿದ್ದಾರೆ ಎಂದು ನನ್ನ ವಿರುದ್ಧವೇ ಅಪನಂಬಿಕೆ ಬರುವಂತೆ ನೋಟಿಸ್‌ ನೀಡಿದ್ದಾರೆ. ಬೇಡ ಎಂದಿದ್ದಕ್ಕೆ ಕೋರ್ಟ್‌ ಮೆಟ್ಟಿಲೇರಬೇಕೆ’ ಎಂದು ಶಾಸಕ ಟಿ. ರಘುಮೂರ್ತಿ ಅಧಿಕಾರಿ ವಿರುದ್ಧ ಕಿಡಿಕಾರಿದರು.

‘ಶಾಸಕನಾದ ಬಳಿಕ 2013ರಿಂದ ಈವರೆಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಮದ್ಯದಂಗಡಿ ತೆರೆಯಲು ಬಿಟ್ಟಿಲ್ಲ. ಎಂಎಸ್‌ಐಎಲ್‌ಗೂ ಅವಕಾಶ ನೀಡಿಲ್ಲ. ಒಂದು ಮದ್ಯದಂಗಡಿ ತಡೆಯಲು ಸಾಧ್ಯವಿಲ್ಲ ಎಂದರೆ ಶಾಸಕನಾಗಿ ಏಕೆ ಇರಬೇಕು. ಹೈಕೋರ್ಟ್‌, ಸುಪ್ರೀಂ ಕೋರ್ಟ್‌ವರೆಗೂ ಹೋಗುತ್ತೇನೆ’ ಎಂದರು.

ಸಂಸದ ಎ. ನಾರಾಯಣಸ್ವಾಮಿ, ‘ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದ ಮದ್ಯ ಅಕ್ರಮ ಮಾರಾಟದ ತನಿಖೆಯ ಹೊಣೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಭೆ ನೀಡಿತ್ತು. ತನಿಖೆ ಎಲ್ಲಿಗೆ ಬಂದಿದೆ ಎಂದು ಪ್ರಶ್ನಿಸಿದರು. ಎಸಿಬಿಗೆ ಸೂಚಿಸಲು ನಮಗೆ ಅಧಿಕಾರವಿಲ್ಲ. ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ನಂದಗಾವಿ ತಿಳಿಸಿದರು. ಕೆಡಿಪಿಯಲ್ಲಿ ತೀರ್ಮಾನಿಸುವುದು ಜಿಲ್ಲಾ ಮಟ್ಟದ ಸರ್ಕಾರದ ನಿರ್ಣಯವಿದ್ದಂತೆ. ಇದಕ್ಕೆ ಅನುಮತಿ ಅಗತ್ಯವಿಲ್ಲ’ ಎಂದರು.

ಅಬಕಾರಿ ಇಲಾಖೆಯ ಡಿವೈಎಸ್‌ಪಿ ಅಸಮರ್ಪಕ ಉತ್ತರಕ್ಕೆ ಜನಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮದ್ಯದಂಗಡಿ ತೆರೆಯಲು ಹೊಸದಾಗಿ 35 ಅರ್ಜಿ ಸಲ್ಲಿಸಿದ್ದು, ಅವಕಾಶ ನೀಡಬೇಡಿ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಕ್ರಮದ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಯಿತು.

ದೇಗುಲಕ್ಕಿಂತ ಶಾಲೆ ಚೆಂದಗೊಳಿಸಿ: ‘ನರೇಗಾ, ಡಿಎಂಎಫ್‌ ಸೇರಿ ಸಾಧ್ಯವಿರುವ ಅನುದಾನ ಬಳಸಿಕೊಂಡು ಜಿಲ್ಲೆಯ 350 ಗ್ರಾಮಗಳ ಸರ್ಕಾರಿ ಶಾಲೆಗಳಿಗೂ ತಡೆಗೋಡೆ ನಿರ್ಮಿಸಲು ಸೂಚಿಸಿದ್ದೇನೆ. ದೇಗುಲಗಳಿಗಿಂತಲೂ ಸರ್ಕಾರಿ ಶಾಲೆ ಚೆಂದ ಕಾಣಬೇಕು. ಆದರೆ, ಕಾರ್ಯಗತವಾಗಿಲ್ಲ. ಈ ರೀತಿಯಾದರೆ ಸಭೆ ಏಕೆ ನಡೆಸಬೇಕು’ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

ಅಷ್ಟು ಪ್ರಮಾಣದ ಅನುದಾನ ಲಭ್ಯವಿಲ್ಲ ಎಂದು ಡಿಡಿಪಿಐ ರವಿಶಂಕರ್‌ರೆಡ್ಡಿ ಹೇಳಿದರು. ಉಪಕಾರ್ಯದರ್ಶಿ ಕೂಡ ಅನುದಾನದ ಕೊರತೆ ಇದೆ ಎಂದರು. ಇದಕ್ಕೆ ಸಂಸದರು ಕೆಂಡಾಮಂಡಲವಾದರು.

ಬಡವರಿಗೆ ಮನೆ ಹಂಚಿ:ಕಂದಾಯ ಗ್ರಾಮಗಳಲ್ಲಿನ ಬಡವರಿಗೆ ಸರ್ಕಾರಿ ಜಾಗದಲ್ಲಿ ವಸತಿ ಸೌಲಭ್ಯ ಕಲ್ಪಿಸಬೇಕಾದ್ದು, ಅಧಿಕಾರಿಗಳ ಕರ್ತವ್ಯ. ಆದರೆ, ನಿರ್ಲಕ್ಷ್ಯದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಗೊಲ್ಲರಹಟ್ಟಿಗಳಲ್ಲೂ ಇದೇ ಪರಿಸ್ಥಿತಿ ಇದೆ. ಖಾಸಗಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರೂ ಅದನ್ನು ಸಕ್ರಮಗೊಳಿಸಿ ಹಂಚಲು ಮುಂದಾಗಬೇಕು ಎಂದು ನಾರಾಯಣಸ್ವಾಮಿ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT