ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಕಾವಲ್ ಭೂಮಿ ಮಂಜೂರಾತಿಗೆ ಹಾದಿ ಸುಗಮ

ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿಕೆ
Last Updated 26 ಜೂನ್ 2022, 5:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಮೃತ ಮಹಲ್‌ ಕಾವಲ್‌ ಪ್ರದೇಶದಲ್ಲಿ ಸಾಗುವಳಿದಾರರಿಗೆ ಭೂ ಮಂಜೂರಾತಿ ಮಾಡಲು ಉಂಟಾಗಿದ್ದ ತಾಂತ್ರಿಕ ಅಡಚಣೆ ದೂರ ಮಾಡುವ ಸರ್ಕಾರಿ ಆದೇಶದ ಕಡತ ಲಭ್ಯವಾಗಿದೆ. ಇದರಿಂದ ಜಿಲ್ಲೆಯ 27 ಸಾವಿರ ಎಕರೆ ಸಾಗುವಳಿದಾರರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ತಿಳಿಸಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಜಿಲ್ಲೆಯ ಅಮೃತ ಮಹಲ್‌ ಕಾವಲ್‌ ಜಮೀನುಗಳ ಹಾಗೂ ಸಹಕಾರ ಸಂಘಗಳಿಗೆ ಮಂಜೂರು, ಗುತ್ತಿಗೆ ನೀಡಿರುವ ಜಮೀನುಗಳ’ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘1962ರಲ್ಲಿ ಸರ್ಕಾರ ಕಾವಲ್‌ ಭೂಮಿಯನ್ನು ಪಶು ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರಿಸಿದೆ. ಈ ಕಡತ ಇದೀಗ ದೊರೆತಿರುವುದರಿಂದ ಭೂ ಮಂಜೂರಾತಿ ಹಾದಿ ಸುಗಮವಾಗಿದೆ’ ಎಂದರು.

‘ಕಾವಲ್ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದ ಸಾಗುವಳಿದಾರರು, ಸಾಗುವಳಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ಈ ಪ್ರದೇಶ ಪಶುಸಂಗೋಪನೆ ಇಲಾಖೆಗೆ ಒಳಪಟ್ಟ ಕಾರಣ ಮಂಜೂರಾತಿ ಮಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಅರ್ಜಿಗಳು ತಿರಸ್ಕೃತವಾಗುತ್ತಿದ್ದವು’ ಎಂದರು.

‘ಸಹಕಾರಿ ಕೃಷಿ ನಡೆಸಲು ಕಾವಲು ಪ್ರದೇಶಗಳನ್ನು ಸಹಕಾರಿ ಸಂಘಗಳಿಗೆ 1960ರಲ್ಲಿ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಕುರಿತು ಭೂಮಿಯನ್ನು ಪಡೆದ ಸಹಕಾರಿ ಸಂಘ ಸಂಸ್ಥೆಗಳ ಸಭೆ ನಡೆಸಲಾಯಿತು. ಇದರಲ್ಲಿ ಹಲವು ಸಹಕಾರಿ ಸಂಘ–ಸಂಸ್ಥೆಗಳು ಮುಚ್ಚಿಹೋಗಿದ್ದವು’ ಎಂದು ತಿಳಿಸಿದರು.

‘ಅಮೃತ ಮಹಲ್ ಕಾವಲು ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಮಂಜೂರಾತಿ ನೀಡಲು ಬೆಂಗಳೂರಿನಲ್ಲಿ ಕಂದಾಯ, ಸಹಕಾರ, ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ರಾಜ್ಯ ಮಟ್ಟದ ಜಂಟಿ ಸಭೆ ನಡೆಸಲಾಯಿತು. ಸರಿಯಾದ ದಾಖಲೆಗಳು ಇಲ್ಲದೇ ಭೂಮಿ ಮಂಜೂರು ಮಾಡಲು ಬರುವುದಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಸುಗ್ರೀವಾಜ್ಞೆ ಹೊರಡಿಸಬೇಕಾಗುತ್ತದೆ. ಹೊಸ ಕಾನೂನು ರಚನೆ ಮಾಡಬೇಕಾಗುತ್ತಿದೆ.ಈ ಕುರಿತು ಸಮಗ್ರ ವರದಿ ತಯಾರು ಮಾಡಲು ಕಂದಾಯ ಇಲಾಖೆ ಸಚಿವ ಆರ್. ಅಶೋಕ್‌ ತಿಳಿಸಿದ್ದರು’ ಎಂದರು.

‘ಆ ವೇಳೆ ಅಧಿಕಾರಿಗಳು ಚಾಮರಾಜನಗರ, ಮೈಸೂರು, ತುಮಕೂರು, ದಾವಣಗೆರೆ, ಧಾರವಾಡ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಸಹಕಾರಿ ಸಂಘ ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡಲು ತೊಡಕಿದೆ. ಇದನ್ನು ಪರಿಹರಿಸುವಂತೆ ಗಮನಕ್ಕೆ ತಂದರು. ಪಶು ಇಲಾಖೆಯ ಕಾವಲು ಭೂಮಿಯನ್ನು ಅನ್ಯ ಕಾರ್ಯಗಳಿಗೆ ಮಂಜೂರು ಮಾಡದಂತೆ ನ್ಯಾಯಾಲಯ ಆದೇಶ ನೀಡಿದೆ. ಈ ಸಮಸ್ಯೆ ಬಗೆಹರಿಸಲು ಕಚೇರಿಗಳಲ್ಲಿಯ ಅಗತ್ಯ ಕಡತಗಳನ್ನು ಹುಡುಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆ. ಜಿಲ್ಲೆಯ 27,000 ಎಕರೆ ಕಾವಲ್‌ ಜಮೀನನ್ನು ಕಂದಾಯ ಇಲಾಖೆಗೆ ಬಿಡುಗಡೆ ಮಾಡಿ ಸರ್ಕಾರ 1962ರಲ್ಲಿ ಆದೇಶ ನೀಡಿದೆ. ಈ ಕಡತ ಈಗ ಲಭಿಸಿದೆ. ಇದರ ಬಗ್ಗೆ ಅರಿವಿಲ್ಲದೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದ ಬರ್ಕಾಸ್ತ್‌ ಸಮಿತಿಗಳು ಭೂ ಮಂಜೂರು ಮಾಡದೇ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದವು’ ಎಂದು ತಿಳಿಸಿದರು.

‘ಈ ಆದೇಶದಿಂದ ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೇ ಚಿಕ್ಕಮಗಳೂರು, ಹಾಸನ, ಮಂಡ್ಯ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಕಾವಲು ಪ್ರದೇಶವು ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿದೆ. 60 ವರ್ಷಗಳ ಹಿಂದಿನ ಈ ಕಡತವನ್ನು ಹುಡುಕಲಾಗಿದ್ದು, ಈ ಆದೇಶದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 27 ಸಾವಿರ ಎಕರೆ ಹಕ್ಕುಪತ್ರ ವಿತರಣೆ ಮಾಡಬಹುದಾಗಿದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ’ ಎಂದರು. ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ, ತಹಶೀಲ್ದಾರ್‌ಗಳಾದ ಸತ್ಯನಾರಾಯಣ, ಸುರೇಶಾಚಾರಿ, ಸುರೇಶ್, ಮಲ್ಲಿಕಾರ್ಜುನಪ್ಪ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT