ಬುಧವಾರ, ಸೆಪ್ಟೆಂಬರ್ 22, 2021
23 °C
ಕಡೂರು ಬೆಟ್ಟದಲ್ಲಿ್ದೆ ಅಪರೂಪದ ಕಲಾಕೌಶಲದ ಸ್ಮಾರಕಗಳು

ಚಿಕ್ಕಜಾಜೂರು: ಪ್ರಾಚೀನ ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

ಜೆ. ತಿಮ್ಮಪ್ಪ ಚಿಕ್ಕಜಾಜೂರು‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಇಲ್ಲಿಂದ 6 ಕಿ.ಮೀ. ದೂರದಲ್ಲಿರುವ ಕಡೂರು ಗ್ರಾಮದ ಬೆಟ್ಟದ ಮೇಲೆ ನೆಲೆಸಿರುವ ವೀರಭದ್ರಸ್ವಾಮಿ ದೇವಾಲಯಕ್ಕೆ ಶತಮಾನಗಳ ಇತಿಹಾಸ ಇದೆ. ಈ ದೇವಾಲಯದ ಬಳಿ ಹಲವು ಪ್ರಾಚೀನ ಸ್ಮಾರಕಗಳು ಇವೆ.

ಬೆಟ್ಟದ ಮೇಲೆ ಬಂಡೆಗಲ್ಲಿನ ಮೇಲೆ ಕೆತ್ತಲಾಗಿರುವ ಶಾಸನ, ಕಲ್ಲು ಕಂಬಗಳಿಂದ ನಿರ್ಮಾಣವಾಗಿರುವ ವಿಶಾಲವಾದ ಮಂಟಪ, ಕಲ್ಲಿನಿಂದ ನಿರ್ಮಿಸಲಾದ ಪುಷ್ಕರಣಿ, ತೂಗು ಉಯ್ಯಾಲೆ ಹಾಗೂ ಮಣ್ಣಿನಲ್ಲಿ ಈಗಾಗಲೇ ಹೂತು ಹೋಗಿರುವ ಪುಷ್ಕರಣಿಗಳು ಗಮನ ಸೆಳೆಯುತ್ತಿವೆ. ಆದರೆ, ಇಂತಹ ಅಪರೂಪದ ಸ್ಮಾರಕಗಳು ಕಣ್ಮರೆಯಾಗುತ್ತಿವೆ ಎಂಬುದು ಸ್ಥಳೀಯರ ದೂರು.

ಬಂಡೆಗಲ್ಲು ಶಾಸನ: ವೀರಭದ್ರಸ್ವಾಮಿ ದೇವಾಲಯದ ಗೋಪುರದ ಪಕ್ಕದಲ್ಲಿ ವಿಜಯನಗರ ಅರಸ ಎರಡನೇ ದೇವರಾಯನ ಕಾಲಕ್ಕೆ ಸೇರಿದ್ದೆಂದು ಹೇಳಲಾಗುವ ಬೃಹತ್‌ ಬಂಡೆಗಲ್ಲು ಶಾಸನವಿದೆ. 13 ಸಾಲುಗಳಲ್ಲಿ ಕೆತ್ತಲ್ಪಟ್ಟಿರುವ ಶಾಸನ ಇದು. ಇಂದು ಮಕ್ಕಳು ಆಟವಾಡುವ ಜಾರು ಬಂಡೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ಶಾಸನದ ಅಕ್ಷರಗಳು ಸವೆದು ಹೋಗುತ್ತಿವೆ. ಶಾಸನವನ್ನು ಸಂರಕ್ಷಣೆ ಮಾಡುವಂತೆ ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಯಾರೊಬ್ಬರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ತಿಪ್ಪೇಶ್‌ ದೂರುತ್ತಾರೆ.

ಕಲಾಕರ್ಷಣೆ ಕೇಂದ್ರ: ಇಲ್ಲಿ ಹಲವು ಕಲಾತ್ಮಕ ಶಿಲ್ಪ ಕಲಾಕೃತಿಗಳಿವೆ. ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ 56 ಕಂಬಗಳಿಂದ ನಿರ್ಮಾಣವಾಗಿರುವ ಮಠವಿದೆ. ಇದನ್ನು ಗ್ರಾಮಸ್ಥರು ಚಿಕ್ಕೊಡೆರಮಠ ಎಂದು ಕರೆಯುತ್ತಾರೆ. ಇಲ್ಲಿನ ಕಂಬವೊಂದರ ಮೇಲೆ ಪ್ರಾಣಿಯ ದೇಹ ಹಾಗೂ ಹೆಣ್ಣಿನ ಮುಖವಿರುವ ಹಾಗೂ ತಪಸ್ಸಿನಲ್ಲಿ ನಿರತನಾದ ಋಷಿಯ ಉಬ್ಬು ಶಿಲ್ಪಗಳು ಆಕರ್ಷಣೀಯವಾಗಿವೆ. ಮಠದ ಪಕ್ಕದಲ್ಲಿ ಚಿಕ್ಕ ಪುಷ್ಕರಣಿ ಇದೆ. ಆದರೆ, ಇದು ಈಗ ಹೂತು ಹೋಗಿದ್ದು, ಅದರ ಕುರುಹು ಮಾತ್ರ ನೋಡಬಹುದು.

ಇದರ ಸಮೀಪದಲ್ಲಿ ದುಗ್ಗಳದ ಹೊಂಡ ಎಂದು ಕರೆಯಲ್ಪಡುವ ಪುಷ್ಕರಣಿ ಇದೆ. ಜಾತ್ರೆಯ ದಿನ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೂರಿಸಿದ ಬ್ರಹ್ಮರಥವನ್ನು ಇಲ್ಲಿಗೆ ತಂದು ಗಂಗಾಪೂಜೆಯನ್ನು ನೆರವೇರಿಸಲಾಗುವುದು. ಇಲ್ಲಿನ ಮುಖದ್ವಾರದಲ್ಲಿನ ಕಂಬಗಳ ಮೇಲೆ ಕೆತ್ತಲ್ಪಟ್ಟಿರುವ ಉಬ್ಬು ಶಿಲ್ಪಗಳು ಆಕರ್ಷಣೀಯವಾಗಿವೆ. ಪುಷ್ಕರಣಿಯನ್ನು ಕಲ್ಲುಗಳಿಂದ ಸುಂದರವಾಗಿ ನಿರ್ಮಿಸಲಾಗಿದೆ.

ವೀರಭದ್ರಸ್ವಾಮಿ ದೇವಸ್ಥಾನವನ್ನೂ ಸುಂದರವಾದ ಕಲ್ಲು ಕಂಬಗಳಿಂದ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ವೀರಭದ್ರ ಸ್ವಾಮಿಯ ಉಬ್ಬು ಶಿಲ್ಪವಿದೆ. ಮುಂದೆ ಮೂರು ಅಡಿ ಎತ್ತರದ ನಂದಿ ಪ್ರತಿಮೆ, ದೇವಸ್ಥಾನದ ಬಲ ಭಾಗದಲ್ಲಿ ಕಂಬಗಳಿಂದ ನಿರ್ಮಾಣವಾಗಿರುವ ಸಭಾ ಮಂಟಪವಿದೆ. ಇಲ್ಲಿ ಶಿವಲಿಂಗ ಹಾಗೂ ಇತರ ದೇವತೆಗಳ ಮೂರ್ತಿಗಳಿವೆ. ಪಕ್ಕದಲ್ಲೇ ಕಾಳಮ್ಮ ದೇವಿಯ ವಿಗ್ರಹವಿದೆ. ದೇವಸ್ಥಾನದ ಪಕ್ಕದಲ್ಲಿ ಪಾತಾಳಗಂಗೆ ದೇವಸ್ಥಾನವಿದೆ. ಪ್ರತಿಯೊಂದೂ ಆಕರ್ಷಕವಾಗಿವೆ. ‌ಚಿತ್ರದುರ್ಗದ ಮುರುಘಾ ಮಠ ದೇವಸ್ಥಾನ ನಿರ್ವಹಣೆ ಮಾಡುತ್ತದೆ. ಪ್ರತಿ ವರ್ಷ ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಿನಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ.

ಕೋಡಗಲ್ಲು: ಬೆಟ್ಟದ ತುತ್ತ ತುದಿಯಲ್ಲಿ ಇರುವ ಮತ್ತೊಂದು ಧಾರ್ಮಿಕ ಸ್ಥಳ ಕೋಡಗಲ್ಲು. ವಿಜಯನಗರದ ಅರಸ
ಅಚ್ಯುತರಾಯ ಮಹಾ
ನವಮಿಯಂದು ಬೇಟೆಗಾಗಿ ಇಲ್ಲಿಗೆ ಬಂದಿದ್ದಾಗ ಆತ ಬಿಟ್ಟ ಬಾಣವೊಂದು ಬೆಟ್ಟದ ತುದಿಯಲ್ಲಿ ಆಡುತ್ತಿದ್ದ ಕೋಡಗಕ್ಕೆ ತಗುಲಿತು. ಅದು ಪ್ರಾಣ ಬಿಡುವಾಗ ‘ರುದ್ರ.. ರುದ್ರ..’ ಎಂದು ಮೂರು ಬಾರಿ ಕೂಗಿತೆಂದು, ಮಾತನಾಡುವ ಕೋಡಗ ಸತ್ತ ಜ್ಞಾಪಕಾರ್ಥ ಸತ್ತ ಸ್ಥಳದಲ್ಲಿ ಕಲ್ಲನ್ನು ನೆಟ್ಟು, ಪ್ರತಿ ವರ್ಷ ಮಹಾನವಮಿಯಂದು ಕೋಡಗಲ್ಲಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಮಂಡಕ್ಕಿ ಸೇವೆ ಇಲ್ಲಿನ
ವಿಶೇಷ ಎಂದು ಗ್ರಾಮದ ಹಿರಿಯರಾದ ವೀರಭದ್ರಪ್ಪ, ರುದ್ರೇಶ್‌, ಮಹಾರುದ್ರಪ್ಪ, ಟಿ.ಎನ್‌. ಯೋಗಿ ಹೇಳಿದರು.

ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿನ ಪ್ರಕೃತಿ ಸೊಬಗು ಸವಿಯುತ್ತಾರೆ. ಇಂತಹ ಸುಂದರವಾದ ಕಲಾ ಸ್ಮಾರಕಗಳನ್ನು ಅಭಿವೃದ್ಧಿಪಡಿಸಬೇಕು. ಪುರಾತತ್ವ ಇಲಾಖೆ ಇತ್ತ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.