ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರ ಚಿಕಿತ್ಸೆಗಾಗಿ ತೆರೆದಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರದ ಕಾರ್ಯವೈಖರಿ ಹಾಗೂ ಆರೋಗ್ಯ ಇಲಾಖೆ ಜನರಿಗೆ ಸ್ಪಂದಿಸಿದ ರೀತಿಯನ್ನು ಕಂಡು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ತಾತ್ಕಾಲಿಕ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ ನೀಡಿದಾಗ ವೈದ್ಯರು ಕಾಣಲಿಲ್ಲ. ಶುಶ್ರೂಷಕರು ಮಾತ್ರ ಇರುವುದನ್ನು ಕಂಡು ಅಸಮಾಧಾನ ಹೊರಹಾಕಿದರು. ಜನರಿಗೆ ವೈದ್ಯಕೀಯ ಸೇವೆಯನ್ನು ಸರಿಯಾಗಿ ಒದಗಿಸುವಂತೆ ಸೂಚನೆ ನೀಡಿದರು. ವೈದ್ಯರು ಧಾವಿಸಿ ಕಾರ್ಯವೈಖರಿಯನ್ನು ವಿವರಿಸಿದ ಬಳಿಕ ಮೆಚ್ಚುಗೆ ಸೂಚಿಸಿದರು.
‘ತಾತ್ಕಾಲಿಕ ಆಸ್ಪತ್ರೆಯಲ್ಲಿ ಅಗತ್ಯ ಔಷಧ ಹಾಗೂ ಚಿಕಿತ್ಸೆ ದೊರಕುತ್ತಿದೆ. ದಿನದ 24 ಗಂಟೆಯೂ ಚಿಕಿತ್ಸಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಅಸ್ವಸ್ಥರನ್ನು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ಜಿಲ್ಲಾ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ, ಸಾರ್ವಜನಿಕರ ಆರೋಗ್ಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು ಸಲಹೆ ನೀಡುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಂಗನಾಥ್ ಅವರು ಲೋಕಾಯುಕ್ತರಿಗೆ ಮಾಹಿತಿ ನೀಡಿದರು.
ವೈದ್ಯ ಡಾ.ಯಶಸ್ ಅವರು, ಪ್ರತಿ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯ ಸ್ಥಿತಿಗತಿ ಕುರಿತು ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂಬುದಾಗಿ ಧೈರ್ಯ ಹೇಳಲಾಗುತ್ತಿದೆ. ವೈಯಕ್ತಿಕ ಸ್ವಚ್ಛತೆ ಹಾಗೂ ಶುಚಿತ್ವದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.