ಗುರುವಾರ , ಮೇ 26, 2022
30 °C
ಪ್ರತಿ ಮನೆಗೂ ತೆರಳಿ ಲಸಿಕೆ ಹಾಕಿಸಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ

ಜಾಗೃತಿ, ಆತ್ಮೀಯತೆ ತಂದ ಲಸಿಕಾ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಪಟ್ಟಣದ 1ನೇ ವಾರ್ಡ್‌ನಲ್ಲಿ ಬುಧವಾರ ಜಿಲ್ಲಾಡಳಿತದಿಂದ ನಡೆದ ಕೋವಿಡ್ ಲಸಿಕಾ ಮೇಳದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹಲವು ಮನೆಗಳಿಗೆ ತೆರಳಿ ಗ್ರಾಮದ ಮಹಿಳೆಯರೊಂದಿಗೆ ಆತ್ಮೀಯವಾಗಿ ಬೆರೆತರು.

ಸಮೀಪದ ಜಾಗನೂರಹಟ್ಟಿ ಗ್ರಾಮದಲ್ಲಿ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಮೇರೆಗೆ ಬುಧವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಜಾಗನೂರಹಟ್ಟಿ ಗ್ರಾಮಕ್ಕೆ ತೆರಳಿತು. ಮೊದಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಶಾಲೆಯ ಪರಿಸರವನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ನಂತರ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಮನೆಯಲ್ಲಿದ್ದ ವೃದ್ಧರು, ಹೆಣ್ಣುಮಕ್ಕಳಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಿದರು.

ಚಿನ್ನಮ್ಮ ಎಂಬುವವರ ಮನೆಗೆ ಜಿಲ್ಲಾಧಿಕಾರಿ ತೆರಳಿದಾಗ ಅವರನ್ನು ಮನೆಯೊಳಗೆ ಕರೆದುಕೊಂಡು ಹೋದ ಚಿನ್ನಮ್ಮ, ಊಟ ಮಾಡಿ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಮನೆಯ ತುಂಬೆಲ್ಲಾ ಓಡಾಡಿ, ಅಡುಗೆಮನೆ ವೀಕ್ಷಿಸಿ ನಂತರ ಚಿನ್ನಮ್ಮ ತಯಾರಿಸಿದ ಹುರಿದ ಬೆಂಡೆಕಾಯಿ ಮಿಶ್ರಿತ ಕೆಂಪು ಚಟ್ನಿಯನ್ನು ಸೇವಿಸಿ ರುಚಿಕಟ್ಟಾಗಿದೆ ಎಂದು ಮೆಚ್ಚಿಕೊಂಡರು.

ಅಡುಗೆ ಸ್ಟೌವ್ ನೆಲದ ಮೇಲಿಟ್ಟು ಅಡುಗೆ ಮಾಡುವುದು ಅಪಾಯಕಾರಿ ಎಂದು ಚಿನ್ನಮ್ಮನಿಗೆ ಸಲಹೆ ನೀಡಿದರು. ಚಿನ್ನಮ್ಮ ನೀಡಿದ ಹಸಿ ಶೇಂಗಾವನ್ನು ತಿನ್ನುತ್ತಾ ಜಿಲ್ಲಾಧಿಕಾರಿ ಗ್ರಾಮದೆಲ್ಲೆಡೆ ಸಂಚರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಜನರ ಆರೋಗ್ಯದ ಹಿತದೃಷ್ಟಿಯಿಂದ ನಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೆಲವರು ಬಾಯಿಗೆ ಬಂದಂತೆ ಆರೋಗ್ಯ ಸಿಬ್ಬಂದಿಯನ್ನು ಬಯ್ಯುತ್ತಾರೆ. ಹಾಗಾಗಿ ಸಾರ್ವಜನಿಕರು ಸೌಹಾರ್ದಯುತವಾಗಿ ವರ್ತಿಸಿ ಲಸಿಕಾ ಮೇಳವನ್ನು ಯಶಸ್ವಿ
ಗೊಳಿಸಬೇಕು. ಗ್ರಾಮೀಣ ಪ್ರದೇಶದ ಜನರು ಯಾವುದೇ ಮೌಢ್ಯ, ಮಾಹಿತಿ ಕೊರತೆ, ಹಾಗೂ ಲಸಿಕೆ ಬಗ್ಗೆ ಇಲ್ಲಸಲ್ಲದ
ಊಹಾಪೋಹಗಳಿಗೆ ಕಿವಿಗೊಡ
ಬಾರದು. ಪ್ರತಿಯೊಬ್ಬರೂ ಲಸಿಕೆ ಪಡೆದು ಕೋವಿಡ್‌ ಮುಕ್ತ ಸಮಾಜ ನಿರ್ಮಾಣ ಮಾಡಬೇಕು’ ಎಂದರು.

ಜಿಲ್ಲಾ ವೈದ್ಯಾಧಿಕಾರಿ ಡಾ. ರಂಗನಾಥ್ ಮಾತನಾಡಿ, ‘ಜಿಲ್ಲೆಯಾದ್ಯಂತ ಇಲ್ಲಿಯವರೆಗೂ ಶೇ 83.5ರಷ್ಟು ಮೊದಲ ಡೋಸ್, ಶೇ 51ರಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇನ್ನೂ ಶೇ 17ರಷ್ಟು ಮೊದಲ ಡೋಸ್, ಶೇ 50ರಷ್ಟು ಎರಡನೇ ಡೋಸ್ ಲಸಿಕೆ ನೀಡುವುದು ಬಾಕಿ ಇದೆ. ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ಕ್ಷೀಣಿಸಿದೆ. ಲಸಿಕೆ ಕಡಿಮೆ ಪ್ರಮಾಣವಾಗಿರುವ ಕಡೆ ವಿಶೇಷ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಈಗ ಸುಗ್ಗಿ ಸಮಯವಾದ್ದರಿಂದ ಬಹುತೇಕರು ಹೊಲಗಳಿಗೆ ತೆರಳುತ್ತಾರೆ. ಅವರಿಗಾಗಿ 100 ಆರೋಗ್ಯ ಸಿಬ್ಬಂದಿಯ 340 ತಂಡಗಳನ್ನು ರಚಿಸಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. 18 ವರ್ಷದೊಳಗಿನವರಿಗೆ ಲಸಿಕೆ ನೀಡುವ ಸಲುವಾಗಿ ಅಂಕಿ–ಅಂಶಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿ ಬಂದ ನಂತರ ಲಸಿಕೆ ನೀಡಲಾಗುವುದು ಎಂದರು.

ತಹಶೀಲ್ದಾರ್ ಎನ್. ರಘುಮೂರ್ತಿ, ಮುಖ್ಯಾಧಿಕಾರಿ ಎನ್.ಟಿ. ಕೋಡಿಭೀಮರಾಯ, ಡಾ.ಅಶೋಕ್, ಅಫ್ರೋಜ್‌ ಬಾಷಾ, ಆರೋಗ್ಯ ನಿರೀಕ್ಷಕ ಟಿ. ರುದ್ರಮುನಿ, ಕಂದಾಯ ನಿರೀಕ್ಷಕ ಆರ್. ಚೇತನ್‌ಕುಮಾರ್, ಎಎಸ್‌ಐ ನಾಗರಾಜ್ ಇದ್ದರು.

ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾದ ಡಿಸಿ

ಪಟ್ಟಣದ ಕಾವಲು ಬಸವೇಶ್ವರ ನಗರದ ಪಾಲಮ್ಮ ಎಂಬುವವರು ಲಸಿಕೆ ಹಾಕಿಸಿಕೊಳ್ಳುವ ವಿಷಯದಲ್ಲಿ ಆರೋಗ್ಯ ಸಿಬ್ಬಂದಿಯೊಂದಿಗೆ ಹಲವು ಬಾರಿ ಜಗಳ ನಡೆಸಿದ್ದರು. ಇದನ್ನು ಮನಗಂಡ ಜಿಲ್ಲಾಧಿಕಾರಿ ಪಾಲಮ್ಮ ಅವರ ಮನೆಗೆ ತೆರಳಿ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪಾಲಮ್ಮ ಅವರ ಮಾತನ್ನು ಧಿಕ್ಕರಿಸಿ ಮನೆಯ ಬಾಗಿಲು ಮುಚ್ಚಲು ಮುಂದಾದರು. ಇದರಿಂದ ಸಿಟ್ಟಾದ ಜಿಲ್ಲಾಧಿಕಾರಿ ಬಾಗಿಲು ದೂಡಿ ಮನೆಯೊಳಗೆ ಪ್ರವೇಶಿಸಿ ಮಹಿಳೆಯೊಂದಿಗೆ ವಾಗ್ವಾದ ನಡೆಸಿ ಅವರನ್ನು ಹೊರ ಕರೆತಂದು ಲಸಿಕೆ ಹಾಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.