ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಬಕ್ರೀದ್ ಸರಳ ಆಚರಣೆ

ಮಸೀದಿಗಳಲ್ಲಿ ಅಂತರದೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಇಸ್ಲಾಂ ಧರ್ಮೀಯರು
Last Updated 1 ಆಗಸ್ಟ್ 2020, 14:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಸ್ಲಾಂ ಧರ್ಮೀಯರ ತ್ಯಾಗ–ಬಲಿದಾನದ ಸಂಕೇತವಾಗಿರುವ ‘ಬಕ್ರೀದ್’ ಹಬ್ಬವೂ ಜಿಲ್ಲೆಯಾದ್ಯಂತ ಶನಿವಾರ ಸರಳವಾಗಿ ನೆರವೇರಿತು. ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಜನರನ್ನು ನಿಯಂತ್ರಿಸಲು ಜಿಲ್ಲೆಯಲ್ಲಿನ ಎಲ್ಲಾ ಮಸೀದಿಗಳಲ್ಲೂ ಬೆಳಿಗ್ಗೆ 7 ಮತ್ತು 8 ಗಂಟೆಗೆ ಪ್ರತ್ಯೇಕವಾಗಿ ಎರಡು ಬಾರಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಸೇರದೆ, ಅಂತರ ಕಾಯ್ದುಕೊಳ್ಳುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಹಿರಿಯರು, ಮಕ್ಕಳು ಮಸೀದಿಗಳಿಗೆ ಬಂದಿರಲಿಲ್ಲ. ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಮಸೀದಿಯೊಳಗೆ ಮುಸ್ಲಿಮರು ಪರಸ್ಪರ ದೂರದಿಂದಲೇ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಪ್ರತಿ ವರ್ಷ ಮೆರುಗು ಪಡೆಯುತ್ತಿದ್ದ ಈದ್ಗಾ ಮೈದಾನ ಮೌನಕ್ಕೆ ಶರಣಾಗಿತ್ತು.

ಈ ಹಬ್ಬದಲ್ಲಿ ಶ್ವೇತವಸ್ತ್ರ ಧರಿಸಿ, ರಂಗು ರಂಗಿನ ಟೋಪಿಗಳನ್ನು ತೊಟ್ಟು ಸಾವಿರಾರು ಜನರು ಏಕಕಾಲಕ್ಕೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಮೌಲ್ವಿ, ಧರ್ಮ ಗುರುಗಳ ಉಪದೇಶ ಆಲಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಕೊರೊನಾ ಸೋಂಕಿನ ಕಾರಣಕ್ಕೆ ಸಾಮೂಹಿಕ ಪ್ರಾರ್ಥನೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಧಾರ್ಮಿಕ ವಿಧಾನಗಳನ್ನು ಮಸೀದಿಗಳಲ್ಲೇ ಪೂರೈಸಿಕೊಳ್ಳಲು ಮುಂದಾದರು.

ಹೊಸ ಬಟ್ಟೆ ಧರಿಸಿ, ಓರೆಗೆಯವರನ್ನು ಆಲಿಂಗಿಸಿ ಸಂಭ್ರಮಿಸುವಂಥ ಹಬ್ಬದ ವಾತಾವರಣ ಈ ಬಾರಿ ಕಂಡು ಬರಲಿಲ್ಲ.ಹಬ್ಬದ ಆಚರಣೆಗೆ ಸರ್ಕಾರ ರೂಪಿಸಿದ್ದ ನಿಯಮಾವಳಿ ಪಾಲಿಸಿದರು. ‘ಕೋವಿಡ್‌-19’ ನಿವಾರಣೆಗೆ ದೇವರಲ್ಲಿ ಮೊರೆ ಇಟ್ಟರು.

‘ವಿಶ್ವವೇ ಸಂಕಷ್ಟದಲ್ಲಿ ಇರುವಾಗ ಸಂಭ್ರಮಪಡಬಾರದು’ ಎಂದು ಜಾಮೀಯಾ ಮಸೀದಿಯ ಧಾರ್ಮಿಕ ಗುರುಗಳು ಹಾಗೂ ವಕ್ಫ್ ಮಂಡಳಿ ಅಧ್ಯಕ್ಷರು ಮುಂಚೆಯೇ ಸೂಚನೆ ನೀಡಿದ್ದರು. ಧರ್ಮಗುರು, ಮೌಲ್ವಿ, ಪೇಶ್‌ಇಮಾಮ್‌, ಮೌಝಿನ್‌, ಸಿಬ್ಬಂದಿ ಹಾಗೂ ಸಮುದಾಯದ ಹತ್ತಾರು ಜನ ಸೇರಿ ಶ್ರದ್ಧಾ–ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

‘ಬಕ್ರೀದ್ ಹಬ್ಬದ ಸಂಭ್ರಮ ಹಿಂದಿನ ವರ್ಷದಂತೆ ಇರಲಿಲ್ಲ. ಆದರೆ, ಸಂಪ್ರದಾಯಗಳು ಎಂದಿನಂತೆ ನೆರವೇರಿದವು. ಮಸೀದಿಯಲ್ಲಿ ಹೆಚ್ಚು ಜನರು ಪ್ರಾರ್ಥನೆ ಮಾಡಲಿಲ್ಲ’ ಎಂದು ಜಾಮೀಯಾ ಮಸೀದಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ತಿಳಿಸಿದರು.

‘ಪ್ರಾರ್ಥನೆ ಮುಗಿದ ನಂತರ ಹಬ್ಬ ಕಳೆಗಟ್ಟಿತು. ಸಮುದಾಯದವರು ಮಧ್ಯಾಹ್ನ ಹಬ್ಬದ ಊಟ ಸವಿದರು. ಹಬ್ಬವನ್ನು ಸಡಗರದ ಬದಲಿಗೆ ಸಾಂಪ್ರದಾಯಿಕವಾಗಿ ಆಚರಿಸಿದ್ದೇವೆ. ಹಬ್ಬದ ದಿನ ಪ್ರತಿಯೊಬ್ಬರು ಧರ್ಮಗುರುಗಳ ಸಂದೇಶವನ್ನು ಪಾಲಿಸಿದ್ದಾರೆ’ ಎಂದು ತಿಳಿಸಿದರು.

ಹಬ್ಬದ ಅಂಗವಾಗಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು. ಪ್ರಮುಖ ಮಸೀದಿ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT