ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿಕಟ್ಟುವ ಹುನ್ನಾರಕ್ಕೆ ಸಿಗದ ಫಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ
Last Updated 26 ಮಾರ್ಚ್ 2021, 16:33 IST
ಅಕ್ಷರ ಗಾತ್ರ

ಚಿತ್ರದುರ್ಗ: ಪಂಚಮಸಾಲಿ ಸಮುದಾಯದ ಹೋರಾಟವನ್ನು ದಮನಿಸಲು ಸಣ್ಣ ಸಮುದಾಯಗಳನ್ನು ಎತ್ತಿಕಟ್ಟುವ ಹುನ್ನಾರವನ್ನು ಕೆಲ ರಾಜಕಾರಣಿಗಳು ಮಾಡಿದರು. ಆದರೆ, ಅದು ಫಲನೀಡಲಿಲ್ಲ. ಅಂತಹ ಸಣ್ಣ ಸಮುದಾಯಗಳೇ ಹೋರಾಟವನ್ನು ಬೆಂಬಲಿಸುತ್ತಿವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಸಂಖ್ಯೆಯಲ್ಲಿ ಪ್ರಬಲರಾದರೂ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ಇದೇ ಆಧಾರದ ಮೇರೆಗೆ ಮೀಸಲಾತಿ ಸೌಲಭ್ಯ ಕೇಳುತ್ತಿದ್ದೇವೆ. ಇದನ್ನು ತಪ್ಪಾಗಿ ಅರ್ಥೈಸಿದ ಕೆಲವರು ಕೆಲ ಜಾತಿಗಳನ್ನು ಎತ್ತಿಕೊಟ್ಟುವ ಕೆಲಸ ಮಾಡಿದರು’ ಎಂದು ಹೇಳಿದರು.

‘ಉಪಚುನಾವಣೆ ಎದುರಾಗಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಚುನಾವಣಾ ರಾಜಕಾರಣಕ್ಕೂ ಮೀಸಲಾತಿ ಹೋರಾಟಕ್ಕೂ ಸಂಬಂಧವಿಲ್ಲ. ರಾಜಕಾರಣ ಹಾಗೂ ಹೋರಾಟಕ್ಕೆ ಸಂಬಂಧ ಕಲ್ಪಿಸುವ ಪ್ರಯತ್ನ ಸಲ್ಲದು. ಪಕ್ಷ ನಿಷ್ಠೆ ಹಾಗೂ ರಾಜಕಾರಣ ವ್ಯಕ್ತಿಗತವಾದದು’ ಎಂದು ವಿವರಣೆ ನೀಡಿದರು.

‘ರಾಜ್ಯ ಸರ್ಕಾರ ಆಶ್ವಾಸನೆ ನೀಡಿದ್ದರಿಂದ ಧರಣಿಯನ್ನು ಹಿಂಪಡೆಯಲಾಗಿದೆ. ಸರ್ಕಾರಕ್ಕೆ ನೀಡಿದ ಆರು ತಿಂಗಳ ಗಡುವು ಸೆ.15ಕ್ಕೆ ಕೊನೆಯಾಗಲಿದೆ. ಸರ್ಕಾರ ಪೂರಕವಾಗಿ ಸ್ಪಂದಿಸದೇ ಇದ್ದರೆ ಅ.15ರಿಂದ ಧರಣಿ ಆರಂಭಿಸುತ್ತೇವೆ. ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಹಾಗೂ ಸಂಘಟಿಸುವ ಕಾರ್ಯವನ್ನು ಮುಂದುವರಿಸುತ್ತೇವೆ’ ಎಂದರು.

‘ಕೂಡಲಸಂಗಮದಿಂದ ಬೆಂಗಳೂರಿನವರೆಗೆ ನಡೆಸಿದ ಪಾದಯಾತ್ರೆಗೆ ಮೊದಲ ಹಂತದ ಯಶಸ್ಸು ಸಿಕ್ಕಿದೆ. ವಿಧಾನಮಂಡಲದ ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚೆ ನಡೆದಿದೆ. ಲಿಂಗಾಯತ ಸಮುದಾಯದ ಇತರ ಒಳಪಂಡಗಳ ಬೆಂಬಲ ಸಿಕ್ಕಿದೆ. ಸಮುದಾಯದ ಜನರು ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ನಮೂದಿಸಬೇಕು’ ಎಂಬ ಸೂಚನೆ ನೀಡಿದರು.

ಏ.11ಕ್ಕೆ ಕೂಡಲಸಂಗಮ

‘ಶರಣಾರ್ಥಿ ಸಂದೇಶ ಜಾಥಾ’ ಮಾರ್ಚ್‌ 23ರಂದು ಬೆಂಗಳೂರಿನಿಂದ ಹೊರಟು ಚಿತ್ರದುರ್ಗ ಪ್ರವೇಶಿಸಿದೆ. ಏ.11ರಂದು ಕೂಡಲಸಂಗಮ ತಲುಪಲಿದೆ.

‘ಮೀಸಲಾತಿ ಆದೇಶ ಪ್ರತಿ ಹಿಡಿದೇ ಹಿಂದಿರುಗಬೇಕು ಎಂಬ ಸಂಕಲ್ಪ ಮಾಡಿದ್ದೆವು. ಕಾನೂನಾತ್ಮಕ ತೊಡಕು ಎದುರಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಮೀಸಲಾತಿ ಸೌಲಭ್ಯ ಪಡೆಯುವ ವಿಶ್ವಾಸವಿದೆ. ಶನಿವಾರ ದಾವಣಗೆರೆ ಜಿಲ್ಲೆಯಲ್ಲಿ ಜಾಥಾ ಸಾಗಲಿದೆ’ ಎಂದು ಸ್ವಾಮೀಜಿ ಹೇಳಿದರು.

‘ಮುರುಗೇಶ ನಿರಾಣಿ ಅವರು ಸರ್ಕಾರದ ಪ್ರತಿನಿಧಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೋರಾಟದ ಮೂಲಕ ಸಮುದಾಯದಲ್ಲಿ ಒಗ್ಗಟ್ಟು ಮೂಡಿದೆ. ಸಮುದಾಯದ ಮುಖಂಡರು ಹಾಗೂ ಪೀಠಾಧ್ಯಕ್ಷರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಎಂ.ತಿಪ್ಪೇಸ್ವಾಮಿ, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ಮುಖಂಡರಾದ ಜಿತೇಂದ್ರ ಎನ್. ಹುಲಿಕುಂಟೆ, ಮಂಜುನಾಥ್, ಪರಮೇಶ್, ಯೋಗೇಶ್ ಇದ್ದರು.

* ಮೀಸಲಾತಿ ನೀಡುವ ಬಗ್ಗೆ ಸರ್ಕಾರದ ಮೇಲೆ ವಿಶ್ವಾಸವಿದೆ. ಕಾಲಮಿತಿಯ ಒಳಗೆ ಸೌಲಭ್ಯ ಕಲ್ಪಿಸುವ ಭರವಸೆ ಸಿಕ್ಕಿದೆ. ಸರ್ಕಾರ ಮಾತಿಗೆ ತಪ್ಪಿದರೆ ಹೋರಾಟ ಮುಂದುವರಿಯಲಿದೆ.

–ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ, ಕೂಡಲಸಂಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT