ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 45 ಕೋಟಿ ಕ್ರಿಯಾ ಯೋಜನೆಗೆ ಸಮ್ಮತಿ

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಸಭೆ, ಕಾಮಗಾರಿ ಪರಿಶೀಲನೆಗೆ ತಂಡ
Last Updated 16 ಮೇ 2022, 14:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದ ₹ 45 ಕೋಟಿ ಅನುದಾನದ ಕ್ರಿಯಾ ಯೋಜನೆ, ಕಾಮಗಾರಿ ಪರಿಶೀಲನೆಗೆ ತಂಡ ರಚನೆ, ₹ 2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲೆ ನಿರ್ಮಾಣ ಸೇರಿ ಹಲವು ಕಾರ್ಯಚಟುವಟಿಕೆಗಳಿಗೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಸರ್ವ ಸದಸ್ಯರ ಸಭೆ ಒಪ್ಪಿಗೆ ನೀಡಿತು.

ಮಂಡಳಿಯ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಜರುಗಿತು. 2021-22 ನೇ ಸಾಲಿನ ವಾರ್ಷಿಕ ಆಡಳಿತ ವರದಿ, 2022-23 ನೇ ಸಾಲಿನ ಕ್ರಿಯಾ ಯೋಜನೆ ಹಾಗೂ 2015-16 ರಿಂದ 2020-21ನೇ ಸಾಲಿನ ವರಗಿನ ವಾರ್ಷಿಕ ಲೆಕ್ಕಪತ್ರಗಳ ತಪಾಸಣಾ ವರದಿಗಳನ್ನು ಅನುಮೋದಿಸಿ ಚರ್ಚಿಸಲಾಯಿತು.

₹ 45 ಕೋಟಿ ಅನುದಾನದಲ್ಲಿ ₹ 34 ಕೋಟಿ ಬಂಡವಾಳ ವೆಚ್ಚವಾಗಿ ಬಳಕೆ ಮಾಡಲಾಗುತ್ತದೆ. ವಿಶೇಷ ಘಟಕ ಯೋಜನೆಯಡಿ ₹ 7 ಕೋಟಿ ರೂಪಾಯಿ ಹಾಗೂ ಗಿರಿಜನ ಉಪಯೋಜನೆಯಡಿ ₹ 3 ಕೋಟಿ ವೆಚ್ಚ ಮಾಡಲು ಅಧ್ಯಕ್ಷರು ಪ್ರಸ್ತಾವ ಮಂಡಿಸಿದರು. ಸಭೆಗೆ ಹಾಜರಿದ್ದ ಎಲ್ಲ ಸದಸ್ಯರು ಇದಕ್ಕೆ ಸಮ್ಮತಿ ಸೂಚಿಸಿದರು.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಾದರಿ ಶಾಲೆ ನಿರ್ಮಾಣದ ಬಗ್ಗೆ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಪ್ರಸ್ತಾಪಿಸಿದರು. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಮಾದರಿ ಶಾಲೆ ನಿರ್ಮಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವರದಿ ಪಡೆಯುವ ಸಲಹೆ ಕೇಳಿಬಂದಿತು.

‘ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗದ ಜನರು ಹೆಚ್ಚಾಗಿರುವ ಪ್ರದೇಶದಲ್ಲಿ ಮಾದರಿ ಶಾಲೆ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಮಂಡಳಿ ವ್ಯಾಪ್ತಿಯ ಎಲ್ಲ ತಾಲ್ಲೂಕಿಗೂ ಈ ಯೋಜನೆ ವಿಸ್ತರಿಸಬೇಕು’ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.

ಮಂಡಳಿ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಪರಿಶೀಲನೆಗೆ ಕಾರ್ಯದರ್ಶಿ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲು ಸಮ್ಮತಿಸಲಾಯಿತು.

ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ, ‘ಅಧ್ಯಕ್ಷರು ಒಬ್ಬರೇ ಕಾಮಗಾರಿ ಪರಿಶೀಲಿಸಲು ಸಾಧ್ಯವಿಲ್ಲ. ಮಂಡಳಿಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅಧಿಕಾರಿಗಳ ತಂಡ ರಚನೆ ಮಾಡುವುದು ಸೂಕ್ತ’ ಎಂದು ಸಲಹೆ ನೀಡಿದರು. ಕಾಮಗಾರಿ ಸ್ಥಳದಲ್ಲಿ ಅಳವಡಿಸುವ ಫಲಕದಲ್ಲಿ ಮಂಡಳಿಯ ಹೆಸರು ಕಡ್ಡಾಯವಾಗಿ ನಮೂದಿಸುವಂತೆಯೂ ಚರ್ಚೆ ನಡೆಯಿತು.

‘ಮಂಡಳಿಯ ವಾರ್ಷಿಕ ಲೆಕ್ಕಪತ್ರ ವರದಿಯನ್ನು ಆಯಾ ವರ್ಷವೇ ಪೂರ್ಣಗೊಳಿಸಬೇಕು. ಇದನ್ನು ವಾರ್ಷಿಕ ಸಭೆಯಲ್ಲಿ ಮಂಡಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಸೂಚಿಸಿದರು.

ಮಂಡಳಿ ವ್ಯಾಪ್ತಿಗೆ ಒಳಪಡುವ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಕ್ಕೆ ಮೂಲಸೌಲಭ್ಯ ಕಲ್ಪಿಸಲು ₹ 8 ಕೋಟಿ ಅನುದಾನ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ಸಭೆ ತೀರ್ಮಾನಿಸಿತು.

‘15 ದಿನಗಳಲ್ಲಿ ಸ್ಥಳಾಂತರ’

ಸುಡುಗಾಡು ಸಿದ್ದರ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಉದ್ದೇಶದಿಂದ ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀಡಿದ ಭೂಮಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, 15 ದಿನಗಳಲ್ಲಿ ಅವರು ಸ್ಥಳಾಂತರವಾಗಬಹುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

‘58 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಶೀಘ್ರವೇ ಬಡಾವಣೆ ವಿನ್ಯಾಸ ಪೂರ್ಣಗೊಳಿಸಲಾಗುವುದು. ಕುಡಿಯುವ ನೀರಿಗೆ ಎರಡು ಕೊಳವೆ ಬಾವಿ ಕೊರೆಸಬೇಕು’ ಎಂದರು.

ಮಂಡಳಿಯ ನಾಮನಿರ್ದೇಶಿತ ಸದಸ್ಯರಾದ ಶ್ಯಾಮಲಾ ಶಿವಪ್ರಕಾಶ್, ಸುಧೀರ್ ರಾಮಸಾ ಕಾಟಿಗರ್, ಕಾರ್ಯದರ್ಶಿ ಡಾ.ಶ್ರೀಧರ ಭಿ.ಭಜಂತ್ರಿ ಇದ್ದರು.

***

ನಬಾರ್ಡ್‍ನಿಂದ ಈ ಮೊದಲು ಅನುದಾನ ತರಲಾಗುತ್ತಿತ್ತು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 5 ಕೋಟಿ ಅನುದಾನವನ್ನು ನಬಾರ್ಡ್‍ನಿಂದ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು.
ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ
ಚಿತ್ರದುರ್ಗ

***

ಅನುದಾನವನ್ನು ಆಯಾ ವರ್ಷವೇ ಬಳಕೆ ಮಾಡಬೇಕು. ಕಾಮಗಾರಿ ಅನುಷ್ಠಾನ ತಡವಾದರೆ ಜನರಿಗೆ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಯೋಜನಾ ವೆಚ್ಚವೂ ಅಧಿಕವಾಗುತ್ತದೆ.
ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ
ಬ್ಯಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT