ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಜಿ ನೀಟ್: ಸಾಧನೆಗೆ ಅಡ್ಡಿಯಾಗದ ಬಡತನ

ಹಿರಿಯೂರಿನ ಭುವನಾಗೆ 38ನೇ ರ್‍ಯಾಂಕ್‌
Last Updated 3 ಅಕ್ಟೋಬರ್ 2021, 4:01 IST
ಅಕ್ಷರ ಗಾತ್ರ

ಹಿರಿಯೂರು: ಈ ಯುವತಿಗೆ ಪ್ರತಿಭೆ ಎಂಬುದು ಹುಟ್ಟಿನ ಜೊತೆ ಬಂದ ಕೊಡುಗೆ. ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳಲು ಬಡತನದ ಅಡ್ಡಿ. ಸ್ವಾಭಿಮಾನಿ ಯುವತಿಯನ್ನು ಕೈಹಿಡಿದದ್ದು ಆಕೆಯ ಆತ್ಮಸ್ಥೈರ್ಯ. ಹೀಗಾಗಿ 2020–21ನೇ ಸಾಲಿನ ಅಖಿಲ ಭಾರತಮಟ್ಟದ ಪಿ.ಜಿ. ನೀಟ್ ಪರೀಕ್ಷೆಯಲ್ಲಿ 38ನೇ ರ್‍ಯಾಂಕ್ ಪಡೆಯುವ ಮೂಲಕ, ತಮ್ಮ ಪ್ರತಿಭೆಯ ಅನಾವರಣ ಮಾಡಿದ್ದಾರೆ.

ಹಿರಿಯೂರಿನ ವೇದಾವತಿ ಬಡಾವಣೆಯ ವಿ.ಎಸ್. ನಾಗೇಶ್ ಹಾಗೂ ವಿ. ಹೇಮಲತಾ ದಂಪತಿಯ ಪುತ್ರಿ ಎನ್. ಭುವನಾ ಅಂತಹ ಸಾಧಕಿ. ಮೂಲತಃ ಐಮಂಗಲ ಗ್ರಾಮದ ನಾಗೇಶ್ ಸಂಸಾರ ನಿರ್ವಹಣೆಗೆಂದು 35 ವರ್ಷಗಳ ಹಿಂದೆ ಹಿರಿಯೂರಿಗೆ ಬಂದು ಉದ್ಯಮಿ ಆನಂದ ಶೆಟ್ಟಿ ಅವರ ಮಿಲ್‌ನಲ್ಲಿ ಗುಮಾಸ್ತರಾಗಿ ಸೇರಿಕೊಂಡಿದ್ದರು. ಪತ್ನಿ, ಪುತ್ರಿ ಹಾಗೂ ಒಬ್ಬ ಪುತ್ರನನ್ನು ಒಳಗೊಂಡ ಚಿಕ್ಕ ಕುಟುಂಬ. ಹೇಳಿಕೊಳ್ಳುವಂತಹ ಆದಾಯ ಕುಟುಂಬಕ್ಕೆ ಇರದಿದ್ದರೂ ಮಕ್ಕಳನ್ನು ಓದಿಸುವ ವಿಚಾರದಲ್ಲಿ ಅವರು ರಾಜಿ ಮಾಡಿಕೊಂಡಿರಲಿಲ್ಲ.

ಹಿರಿಯೂರಿನ ಗಿರೀಶ ವಿದ್ಯಾಸಂಸ್ಥೆಯಲ್ಲಿ 1ರಿಂದ 5ನೇ ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಓದಿದ್ದ ಭುವನಾ, ಆರನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಅದೇ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ 97.60 ಅಂಕ ಪಡೆದಿದ್ದರು. ಪಿಯು ವ್ಯಾಸಂಗಕ್ಕೆ ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಸೇರಿ, ಶೇ 95 ಅಂಕ ಗಳಿಸಿದ್ದರು. (ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನದಲ್ಲಿ ಶೇ 100, ಗಣಿತದಲ್ಲಿ 98 ಅಂಕ). ಸಿಇಟಿಯಲ್ಲಿ 954ನೇ ರ್‍ಯಾಂಕ್ ಪಡೆದು ಕಲಬುರ್ಗಿಯ ಇಎಸ್ಐಸಿ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದಾರೆ. ಅಲ್ಲಿಯೂ ಮೊದಲ ವರ್ಷ ನಾಲ್ಕನೇ ರ್‍ಯಾಂಕ್, ಮೂರನೇ ವರ್ಷ ಏಳನೇ ರ್‍ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕನಸು ಕಾಣುವ ಸ್ಥಿತಿಯಲ್ಲಿ ಇರಲಿಲ್ಲ: ‘ನನ್ನ ಜೊತೆಯಲ್ಲಿ ಓದುತ್ತಿದ್ದವರೆಲ್ಲ, ಭವಿಷ್ಯದಲ್ಲಿ ತಾವು ಏನಾಗಬೇಕೆಂದು ನಿತ್ಯ ಚರ್ಚೆ ನಡೆಸುತ್ತಿದ್ದರು. ನನಗೆ ಕನಸು ಕಾಣಲು ಬಡತನ ಅಡ್ಡಿಯಾಗಿತ್ತು. ತಂದೆಗೆ ಹೊರೆಯಾಗುತ್ತದೆ ಎಂದು ಮೌನವಾಗಿರುತ್ತಿದ್ದೆ. ಉಜಿರೆಯಲ್ಲಿ ಪ್ರಥಮ ಪಿಯು ಓದುವಾಗ ವೈದ್ಯಳಾಗಬೇಕೆಂಬ ಬಯಕೆ ಚಿಗುರಿತು. ಶಿಕ್ಷಕರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ, ಏನಾದರೂ ಸಾಧಿಸಬೇಕೆಂಬ ಹಠ ನನ್ನನ್ನು ಗಂಭೀರವಾದ ಅಧ್ಯಯನದಲ್ಲಿ ತೊಡಗುವಂತೆ ಮಾಡಿತು. ಎಂಬಿಬಿಎಸ್ ನಂತರ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಕಷ್ಟಪಟ್ಟು ಓದಿದೆ. ಪರಿಶ್ರಮಕ್ಕೆ ಫಲ ಸಿಕ್ಕಿದೆ. ರೇಡಿಯಾಲಜಿ ಅಥವಾ ಪೀಡಿಯಾಟ್ರಿಕ್ಸ್ ವಿಷಯ ಆಯ್ಕೆ ಮಾಡಿಕೊಳ್ಳಲು ಬಯಸಿದ್ದೇನೆ’ ಎಂದು ಭುವನಾ ಹೇಳುತ್ತಾರೆ.

ಹೇಳಲಾಗದ ಖುಷಿ
‘ಮಗಳ ಓದಿಗೆ ನಾನು ಕೆಲಸ ಮಾಡುತ್ತಿದ್ದ ಮಿಲ್ ಮಾಲೀಕ ಆನಂದಶೆಟ್ಟರು ಸಾಕಷ್ಟು ನೆರವು, ಪ್ರೋತ್ಸಾಹ ನೀಡಿದ್ದಾರೆ. ನನ್ನಿಂದ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ಕೆಲಸ ಬಿಟ್ಟಿದ್ದೇನೆ. ಬಿ.ಕಾಂ ಮುಗಿಸಿರುವ ಕಿರಿಯ ಮಗ ನಂದನ್ ಏರ್‌ಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದ ನಿರ್ವಹಣೆ ಮಾಡುತ್ತಿದ್ದಾನೆ. ಮಗಳ ಸಾಧನೆ ಹೇಳತೀರದ ಆನಂದ ತಂದಿದೆ’ ಎನ್ನುತ್ತಾರೆ ಭುವನಾ ಅವರ ತಂದೆ ನಾಗೇಶ್.

ವಿಶ್ವಾಸ ಹುಸಿಯಾಗಲಿಲ್ಲ
‘ಮಗಳು ಡಾಕ್ಟರ್‌ ಆಗಿದ್ದಾಳೆ ಎಂಬುದನ್ನು ನಂಬಲು ಆಗುತ್ತಿಲ್ಲ. ಚಿಕ್ಕವಳಾಗಿದ್ದಾಗಿನಿಂದ ಓದಿನಲ್ಲಿದ್ದ ಆಕೆಯ ಆಸಕ್ತಿ ನೋಡಿ ಹೆಮ್ಮೆ ಅನಿಸುತ್ತಿತ್ತು. ಏನಾದರೂ ಸಾಧನೆ ಮಾಡಿಯೇ ಮಾಡುತ್ತಾಳೆ ಎಂಬ ವಿಶ್ವಾಸ ಹುಸಿಯಾಗಲಿಲ್ಲ’ ಎನ್ನುತ್ತಾರೆ ತಾಯಿ ಹೇಮಲತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT