ಗುರುವಾರ , ನವೆಂಬರ್ 21, 2019
21 °C

ವಲಸೆ ಹೋದಾಗ ದ್ವಿಭಾಷಿಕತೆ ಸಾಮಾನ್ಯ: ಭಾಷಾ ವಿಜ್ಞಾನಿ ಡಾ.ಕೆ.ವಿ. ನಾರಾಯಣ್

Published:
Updated:
Prajavani

ಚಿತ್ರದುರ್ಗ: ‘ಉದ್ಯೋಗಕ್ಕಾಗಿ ವಲಸೆ ಹೋಗುವುದು, ಒಂದೆಡೆಯಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ವಾಸಿಸುವ ಸಂದರ್ಭ ಎದುರಾದಾಗ ದ್ವಿಭಾಷಿಕತೆ ಉಂಟಾಗುವ ಸಂಭವ ಹೆಚ್ಚು’ ಎಂದು ಭಾಷಾ ವಿಜ್ಞಾನಿ ಡಾ.ಕೆ.ವಿ. ನಾರಾಯಣ್ ಹೇಳಿದರು.

ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ಕಾಲೇಜಿನಿಂದ ಆಯೋಜಿಸಿದ್ದ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದ್ವಿಭಾಷಿಕತೆ ವ್ಯಕ್ತಿ ಸಮಸ್ಯೆಯಲ್ಲ, ಅದು ಸಮುದಾಯದ ಸಮಸ್ಯೆ. ಈ ಶತಮಾನವನ್ನು ವಲಸೆ ಹೋಗುವವರ ಶತಮಾನ ಎಂದು ಕರೆಯಲಾಗುತ್ತಿದೆ. ವಿಶ್ವದಾದ್ಯಂತ ಜನರು ಒಂದು ಸ್ಥಳದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿರುವುದಕ್ಕೆ ಸಾಮಾಜಿಕ ಮತ್ತು ರಾಜಕೀಯ ಹಿತಾಸಕ್ತಿಯೇ ಬಹುಮುಖ್ಯ ಕಾರಣಗಳಾಗಿವೆ’ ಎಂದು ಅಭಿಪ್ರಾಯಪಟ್ಟರು.

‘ಶೇ 20ರಷ್ಟು ಮಂದಿ ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ. ಅವರಿಗೆ ಮೂಲ ದೇಶ ಎಂಬುದಿಲ್ಲ. ಆ ವಲಸೆ ಉದ್ಯೋಗ ಪಡೆಯಲಿಕ್ಕಾಗಿ ಆಗಿದ್ದು, ನಿವೃತ್ತಿ ನಂತರ ಮತ್ತೆ ಮೂಲ ಸ್ಥಾನಕ್ಕೆ ಮರುಳುವವರು ಇದ್ದಾರೆ. ಇದನ್ನು ನಮ್ಮ ಭಾಷೆಯಲ್ಲಿ ತಿರುವಲಸೆ ಎಂದು ಕರೆಯಲಾಗುತ್ತದೆ’ ಎಂದರು.

ಸ್ತ್ರೀವಾದಿ ಚಿಂತಕಿ ಡಾ. ಶ್ರೀಮತಿ, ‘ಹೆಣ್ಣನ್ನು ಸ್ತ್ರೀ, ಮಹಿಳೆ, ನಾರಿ, ಹೆಂಗಸು ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತೇವೆ. ಇದಕ್ಕೆ ಭಾಷೆಯಲ್ಲಿ ಆದ ಬದಲಾವಣೆಯೇ ಕಾರಣ. ಮಗುವೊಂದು ಜನಿಸಿದ ನಂತರ ಮನೆ, ಶಾಲೆ, ಕಾಲೇಜು, ಉದ್ಯೋಗ ಹೀಗೆ ಬೆಳೆಯುತ್ತ ಹೋದಂತೆ ಸಮಾಜದಲ್ಲಿ ಹೊಂದಿಕೊಂಡು ಹೋಗಬೇಕಾಗುತ್ತದೆ. ಅದರ ಜತೆಗೆ ನಾವು ಸಾಮಾಜಿಕ ಕಳಕಳಿಯನ್ನು ಬಿತ್ತುವ ಕೆಲಸ ಮಾಡಬೇಕಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ, ಡಾ. ಪ್ರೇಮಪಲ್ಲವಿ, ಪ್ರೊ. ರಂಗಸ್ವಾಮಿ ಅವರೂ ಇದ್ದರು.

ಪ್ರತಿಕ್ರಿಯಿಸಿ (+)