ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕನಿಷ್ಠ ವೇತನ ಜಾರಿಗೆ ಆಗ್ರಹ

ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ತಯಾರಕರ ಪ್ರತಿಭಟನೆ
Last Updated 11 ಅಕ್ಟೋಬರ್ 2021, 13:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಲಹಾಬಾದ್‌ ಹೈಕೋರ್ಟ್ ನಿರ್ದೇಶನದಂತೆ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬಿಸಿಯೂಟ ತಯಾರಕರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಜೂನ್‌ನಿಂದ ಈವರೆಗೆ ಬಾಕಿ ಇರುವ ವೇತನ ಪಾವತಿಗೆ ಒತ್ತಾಯಿಸಿದರು.

ಬಿಸಿಯೂಟ ತಯಾರಕರಾಗಿ ಕಳೆದ 19 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನೀಡುವ ಗೌರವಧನದಲ್ಲಿ ಬದುಕು ಸಾಗಿಸುವುದು ಕಷ್ಟವಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಈ ದಿನಗಳಲ್ಲಿ ಜೀವನ ನಿರ್ವಹಣೆ ದುಸ್ತರವಾಗುತ್ತಿದೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿ ಶೋಷಣೆಗೆ ಒಳಗಾಗುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಸಿಯೂಟ ತಯಾರಕರಿಗೆ ಸರ್ಕಾರ ಅತ್ಯಂತ ಕಡಿಮೆ ಸಂಭಾವನೆ ನಿಗದಿ ಮಾಡಿದೆ. 60 ವರ್ಷ ಮೇಲ್ಪಟ್ಟವರನ್ನು ಸೇವೆಯಿಂದ ಕೈಬಿಡುತ್ತಿದೆ. ಜೀವನಕ್ಕೆ ಆಧಾರವಾಗಿರುವ ಈ ಉದ್ಯೋಗ ಕಳೆದುಕೊಂಡು ಅನೇಕರು ಬೀದಿಪಾಲು ಆಗುತ್ತಿದ್ದಾರೆ. ಬಿಸಿಯೂಟ ತಯಾರಿಕೆಗೆ ಕೇಂದ್ರೀಕೃತ ಯೋಜನೆ ರೂಪಿಸಿ ಗ್ರಾಮೀಣ ಪ್ರದೇಶದ ಜನರ ಉದ್ಯೋಗ ಕಸಿಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಹುನ್ನಾರಗಳನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಕೋವಿಡ್‌ ಲಾಕ್‌ಡೌನ್‌ ಪರಿಹಾರವಾಗಿ ಅಸಂಘಟಿತ ಕಾರ್ಮಿಕರಂತೆ ಬಿಸಿಯೂಟ ತಯಾರಕರಿಗೂ ₹ 5 ಸಾವಿರ ಪರಿಹಾರ ನೀಡಬೇಕು. ಪ್ರತಿ ಶಾಲೆಯಲ್ಲಿ ಅಡುಗೆ ತಯಾರಿಸಲು ಕನಿಷ್ಠ ಇಬ್ಬರನ್ನು ನೇಮಕ ಮಾಡಬೇಕು. ಸಿಬ್ಬಂದಿಯ ಮೇಲ್ವಿಚಾರಣೆಯ ಹೊಣೆಯನ್ನು ಎಸ್‌ಡಿಎಂಸಿ ಬದಲು ಶಿಕ್ಷಣ ಇಲಾಖೆಗೆ ವಹಿಸಬೇಕು. ಸಿಬ್ಬಂದಿಯ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿ ಮಾಡಿದರು.

ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶಬಾಬು, ಜಿಲ್ಲಾ ಸಂಚಾಲಕ ದೊಡ್ಡಉಳ್ಳಾರ್ತಿ ಕರಿಯಣ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT