ನಾನು ಬಿಜೆಪಿ ಸಿದ್ಧಾಂತದ ಪ್ರತಿನಿಧಿ: ಎ.ನಾರಾಯಣಸ್ವಾಮಿ

ಮಂಗಳವಾರ, ಏಪ್ರಿಲ್ 23, 2019
31 °C
ಬಿಜೆಪಿ ಅಭ್ಯರ್ಥಿ

ನಾನು ಬಿಜೆಪಿ ಸಿದ್ಧಾಂತದ ಪ್ರತಿನಿಧಿ: ಎ.ನಾರಾಯಣಸ್ವಾಮಿ

Published:
Updated:

*ಆನೆಕಲ್‌ ತಾಲ್ಲೂಕಿನ ನೀವು ಲೋಕಸಭಾ ಚುನಾವಣೆಗೆ ಚಿತ್ರದುರ್ಗವನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ?

ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಚಿತ್ರದುರ್ಗ ಕ್ಷೇತ್ರವನ್ನು ನಾನು ಆಯ್ಕೆ ಮಾಡಿಕೊಂಡಿಲ್ಲ. ಇಲ್ಲಿಗೆ ಬರಬೇಕು ಎಂಬ ಅಪೇಕ್ಷೆಯೂ ಇರಲಿಲ್ಲ. ಇಲ್ಲೇ ಸ್ಪರ್ಧಿಸಬೇಕು ಎಂಬುದು ಸಂಘಪರಿವಾರ ಹಾಗೂ ಪಕ್ಷದ ಸೂಚನೆ. ಇದು ನನ್ನ ಆಯ್ಕೆ ಅಲ್ಲ, ಪಕ್ಷದ ತೀರ್ಮಾನ.

* ಟಿಕೆಟ್‌ಗೆ ಬಿಜೆಪಿಯಲ್ಲಿ ಭಾರಿ ಪೈಪೋಟಿ ಇತ್ತು. ಅಂತಿಮವಾಗಿ ನೀವು ಅವಕಾಶ ಪಡೆದಿದ್ದು ಹೇಗೆ?

25 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದೇನೆ. ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಮಂತ್ರಿಯಾಗಿದ್ದಾಗ ಇಡೀ ಕರ್ನಾಟಕವನ್ನು ಸುತ್ತಿದ್ದೇನೆ. ಚಿತ್ರದುರ್ಗ ಸೇರಿ ಎಲ್ಲ ಜಿಲ್ಲೆಯಲ್ಲಿಯೂ ಕೆಲಸ ಮಾಡಿದ್ದೇನೆ. ಪಕ್ಷದ ಸೂಚನೆಯನ್ನು ನಿಷ್ಠೆಯಿಂದ ಪಾಲಿಸಿದ್ದೇನೆ. ನಿಷ್ಠೆಯನ್ನು ಪರಿಗಣಿಸಿ ಪಕ್ಷ ನನ್ನನ್ನು ಗುರುತಿಸಿದೆ. 

* ಪ್ರಬಲ ಟಿಕೆಟ್‌ ಆಕಾಂಕ್ಷಿಗಳೂ ಸೇರಿದಂತೆ ಇಡೀ ಭೋವಿ ಸಮುದಾಯ ನಿಮ್ಮೊಂದಿಗೆ ಮುನಿಸಿಕೊಂಡಂತೆ ಕಾಣುತ್ತಿದೆ..

ಬಿಜೆಪಿಯ ಸಕ್ರಿಯ ಕಾರ್ಯಕರ್ತನಿಗೆ ಜಾತಿ ಇಲ್ಲ. ಸಂಘಪರಿವಾರ, ಬಿಜೆಪಿ ಕಾರ್ಯಕರ್ತರು ಸಿದ್ಧಾಂತ ನೋಡಿ ಕೆಲಸ ಮಾಡುತ್ತಾರೆ. ಭೋವಿ ಸಮುದಾಯದ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ನಮ್ಮೊಂದಿಗೆ ಇದ್ದಾರೆ. ಭೋವಿ ಗುರುಪೀಠದ ಸ್ವಾಮೀಜಿ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಶಾಸಕರು, ಮುಖಂಡರು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ.

* ಮೋದಿ ಅವರಿಗೆ ವೋಟು ಕೇಳುತ್ತಿದ್ದೀರಿ. ಅಭ್ಯರ್ಥಿಯಾಗಿ ನೀವು ಮುನ್ನೆಲೆಗೆ ಬರಲು ಹಿಂಜರಿಕೆ ಇದೆಯೇ?

ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಇಡೀ ವಿಶ್ವ ಮೆಚ್ಚಿದೆ. ಇದು ಪಕ್ಷದ ಸಾಧನೆ ಕೂಡ ಹೌದು. ಮೋದಿ ಅವರ ರಿಪೋರ್ಟ್‌ ಕಾರ್ಡ್‌ ಮೇಲೆ ವೋಟು ಕೇಳುತ್ತಿದ್ದೇನೆ. ಬಿಜೆಪಿ ಸಿದ್ಧಾಂತ ನೋಡಿ ಮತ ಹಾಕಿ ಎಂದು ಮನವಿ ಮಾಡುತ್ತಿದ್ದೇ. ಇದರಲ್ಲಿ ತಪ್ಪೇನಿದೆ?

* ಕ್ಷೇತ್ರದ ಜನ ನಿಮಗೇ ಏಕೆ ಮತ ಹಾಕಬೇಕು?

ನಾನು ವ್ಯಕ್ತಿಯಾಗಿ ಇಲ್ಲಿಗೆ ಬಂದಿಲ್ಲ. ಬಿಜೆಪಿಯ ಸಿದ್ಧಾಂತದ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದೇನೆ. ಸಂಘಪರಿವಾರದ ಸಿದ್ಧಾಂತವನ್ನು ವಿಶ್ವ ಮೆಚ್ಚಿದೆ. ಅಂತಹ ಪರಿವಾರದ ಪ್ರತಿನಿಧಿಯಾಗಿರುವ ಕಾರಣಕ್ಕೆ ಜನ ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ.

* ಒಳಮೀಸಲಾತಿ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದೆ. ನಿಮ್ಮ ಬಗ್ಗೆ ಕೆಲ ಸಮುದಾಯಗಳು ಅಸಮಧಾನ ಹೊರಹಾಕಿವೆ. ಇದರ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಿ?

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಒಳಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮೊದಲೇ ಸದಾಶಿವ ಆಯೋಗ ನೇಮಕ ಆಗಿತ್ತು. ಆಯೋಗ ನೀಡಿದ ವರದಿಯನ್ನು ಇಲಾಖೆಯ ಮಂತ್ರಿಯಾಗಿ ಸ್ವೀಕರಿಸಿದ್ದೆ. ನಾರಾಯಣಸ್ವಾಮಿಯೇ ವರದಿಯ ರೂವಾರಿ ಎಂಬುದು ತಪ್ಪುಕಲ್ಪನೆ. ವರದಿಯನ್ನು ಪರಿಪೂರ್ಣ ಅರಿಯದೇ ಕೆಲವರು ಆರೋಪ ಮಾಡುತ್ತಿದ್ದಾರೆ. ಜಾತಿಯೊಂದನ್ನು ಮೀಸಲಾತಿ ವ್ಯಾಪ್ತಿಗೆ ಸೇರಿಸುವ ಹಾಗೂ ಹೊರಗಿಡುವುದು ರಾಜ್ಯ ಸರ್ಕಾರದ ಕೆಲಸ ಅಲ್ಲ. ಆ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಇದರ ಬಗ್ಗೆ ಚರ್ಚೆ ಆಗಬೇಕಿದೆ.

* ಕ್ಷೇತ್ರದಲ್ಲಿ ತಲೆದೋರಿದ ಬರ, ನಿರುದ್ಯೋಗ ಸಮಸ್ಯೆ, ನೀರಾವರಿ ಯೋಜನೆ, ನೇರ ರೈಲು ಮಾರ್ಗದ ಬಗ್ಗೆ ಏನು ಹೇಳುತ್ತೀರಿ?

ಈ ನಾಲ್ಕು ವಿಚಾರಗಳ ಮೇಲೆಯೇ ಮೂರು ಚುನಾವಣೆ ನಡೆದಿವೆ. ಯಾವುದೇ ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಭದ್ರಾ ಮೇಲ್ದಂಡೆಗೆ ವರ್ಷಕ್ಕೆ ₹ 200 ಕೋಟಿ ನೀಡಿದರೆ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಸಂಸದ, ಮುಖ್ಯಮಂತ್ರಿ ವಿಶೇಷ ಗಮನ ನೀಡಬೇಕಿತ್ತು. ಪ್ರಧಾನಿಯ ಮನವೊಲಿಸಿದ್ದರೆ ಸಮಸ್ಯೆ ಪರಿಹಾರ ಆಗುತ್ತಿತ್ತು. ಈ ಕೆಲಸ ಮಾಡುವ ಬದಲು ಬಿ.ಎನ್‌.ಚಂದ್ರಪ್ಪ ಅವರು ಭದ್ರಾ ನೀರು ಕೊಟ್ಟಿರುವುದಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !