ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿದೆಯೇ: ಶಾಸಕ ಟಿ. ರಘುಮೂರ್ತಿ ಪ್ರಶ್ನೆ

Last Updated 20 ಜೂನ್ 2020, 15:20 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಕಾನೂನನ್ನು ಗಾಳಿಗೆ ತೂರಲಾಗುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿಗೆ ಒಂದು, ಕಾಂಗ್ರೆಸ್‌ಗೆ ಮತ್ತೊಂದು ಕಾನೂನು ಇದೆಯೇ’ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿಜಿಲ್ಲಾಡಳಿತಕ್ಕೆ ಪ್ರಶ್ನಿಸಿದರು.

‘ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಮಗನ ಮದುವೆಯೂ ಜಿಲ್ಲಾಡಳಿತದ ಅನುಮತಿಯೊಂದಿಗೆ ಕಡಿಮೆ ಜನರನ್ನು ಸೇರಿಸಿ ನಡೆಸಲಾಯಿತು. ಫೋಟೊ ಕಾರಣಕ್ಕಾಗಿ ಮಾತ್ರ ಮಾಸ್ಕ್ ತೆಗೆದಿದ್ದೆವು. ಇದನ್ನೇ ನಿಯಮ ಉಲ್ಲಂಘನೆ ಎಂದು ಗೋವಿಂದಪ್ಪ ವಿರುದ್ಧ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿಅಸಮಾಧಾನ ವ್ಯಕ್ತಪಡಿಸಿದರು.

‘ಪರಶುರಾಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಜತೆ ಸಾವಿರಾರು ಜನ ಸೇರಿದ್ದರು. ಸಚಿವರಿಗೆ ಬೃಹತ್ ಸೇಬಿನ ಹಾರ ಹಾಕಿ, ಮೆರವಣಿಗೆ ಮಾಡಿದರು. ಅಲ್ಲಿ ಅಂತರವೂ ಇರಲಿಲ್ಲ, ಮಾಸ್ಕ್‌ ಕೂಡ ಧರಿಸಿರಲಿಲ್ಲ. ಇದು ಗೊತ್ತಿದ್ದರೂ ಆಯೋಜಕರ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಈ ರೀತಿ ಪಕ್ಷಪಾತ ಮಾಡಬಾರದು. ಇದು ನಿಜಕ್ಕೂ ಪ್ರತಿಕಾರದ ಮನೋಭಾವ. ಇದು ಹೀಗೆ ಮುಂದುವರೆದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವೇ ಇಲ್ಲದಂತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ‘ದೂರು ದಾಖಲಾಗಿರುವುದಕ್ಕೆ ವಿರೋಧವಿಲ್ಲ. ಆದರೆ, ಬಿಜೆಪಿಯವರು ಮಾಡಿದ ಬಾಗೀನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖಂಡರ ವಿರುದ್ಧ ಜರುಗಿಸಿರುವ ಕ್ರಮವೇನು’ ಎಂದು ಪ್ರಶ್ನಿಸಿದರು.

‘ಮಗನ ಮದುವೆಯನ್ನು ಕಾನೂನು ಪಾಲಿಸಿ, ಸರಳವಾಗಿ ಮಾಡಿದ್ದೇನೆ. ವಿವಾಹ ಮುಗಿದು ಎರಡು ತಿಂಗಳ ನಂತರ ದೂರು ದಾಖಲಿಸಿರುವುದರ ಹಿಂದೆ ಪ್ರಭಾವಿ ನಾಯಕರ ಒತ್ತಡವಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಜನರನ್ನು ಕಾಪಾಡುವ ಹೊಣೆ ಹೊತ್ತವರೇ ಸಾವಿರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗಬೇಕಲ್ಲವೇ’ ಎಂದು ಒತ್ತಾಯಿಸಿದರು.

ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ‘ಮಾಸ್ಕ್ ಧರಿಸದ ಕಾರಣ ನನಗೆ ಶಿಕ್ಷೆಯಾಗಲಿ. ಅದೇ ರೀತಿ ಆಡಳಿತ ಪಕ್ಷದವರಿಗೂ ಅದೇ ನಿಯಮ ಅನ್ವಯವಾಗಬೇಕು. ಸರಳ ವಿವಾಹಕ್ಕೆ ಒಂದು ಪ್ರಕರಣ ದಾಖಲಾಗಿದೆ ಎಂದರೆ, ಬಾಗಿನ ಕಾರ್ಯಕ್ರಮ ಮಾಡಿದವರ ವಿರುದ್ಧ ಕನಿಷ್ಠ 100 ಪ್ರಕರಣ ದಾಖಲಾಗಲೇಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಸದಸ್ಯರಾದ ಡಾ. ಯೋಗೀಶ್ ಬಾಬು, ಬಿ.ಪಿ. ಪ್ರಕಾಶ್‌ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT