ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ತವ್ಯಕ್ಕೆ ಬಾರದ ಪಿ.ಜಿ. ವೈದ್ಯರ ಹೊರಹಾಕಿ: ಸಂಸದ ಗೋವಿಂದ ಕಾರಜೋಳ ಆಕ್ರೋಶ

ಜಿಲ್ಲಾ ಆಸ್ಪತ್ರೆಗೆ ದಿಢೀರ್‌ ಭೇಟಿ; ತಜ್ಞ ವೈದ್ಯರ ದೂರು
Published : 20 ಸೆಪ್ಟೆಂಬರ್ 2024, 15:54 IST
Last Updated : 20 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ಚಿತ್ರದುರ್ಗ: ಸಂಸದ ಗೋವಿಂದ ಕಾರಜೋಳ ಜಿಲ್ಲಾ ಆಸ್ಪತ್ರೆಗೆ ಶುಕ್ರವಾರ ದೀಢೀರ್‌ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆಗಳನ್ನು ಕಂಡು ಆಶ್ಚರ್ಯಚಕಿತರಾದರು. ಕೇಂದ್ರ ಸರ್ಕಾರದ ಡಿಎನ್‌ಬಿ (ಡಿಪ್ಲೊಮ್ಯಾಟ್‌ ನ್ಯಾಷನಲ್‌ ಬೋರ್ಡ್‌) ಅಡಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ತರಬೇತಿ ವೈದ್ಯರು ಕರ್ತವ್ಯಕ್ಕೆ ಬಾರದಿರುವುದನ್ನು ಕೇಳಿ ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ದಿನೇದಿನೇ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಬಡವರ ಸಂಖ್ಯೆಯೇ ಹೆಚ್ಚಿರುವುದರಿಂದ ಜಿಲ್ಲಾ ಆಸ್ಪತ್ರೆಯ ವೈದ್ಯರ ಮೇಲೆ ಒತ್ತಡ ತೀವ್ರಗೊಂಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಡಿಎನ್‌ಬಿ ಯೋಜನೆಯಡಿ 30 ಮಂದಿ ಕಿರಿಯ ವೈದ್ಯರು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಅವರು ಕರ್ತ್ಯವ್ಯಕ್ಕೆ ಗೈರಾಗುತ್ತಿರುವುದು ಅಕ್ಷಮ್ಯ. ಅಂಥವರ ಸ್ನಾತಕೋತ್ತರ ಪದವಿ ರದ್ದುಮಾಡಿ ಹೊರಹಾಕಲು ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್‌ ಅವರಿಗೆ ಸ್ಥಳದಲ್ಲೇ ಕರೆ ಮಾಡಿದ ಸಂಸದರು ‘ಪಿ.ಜಿ. ಕಲಿಯುತ್ತಿರುವ ವೈದ್ಯರಿಗೆ ಸರ್ಕಾರ ಸಂಬಳ ನೀಡುತ್ತಿದೆ. ನಿಯಮಾನುಸಾರ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕು. ವೈದ್ಯರಿಗೆ ಸಹಾಯ ಮಾಡಬೇಕು. ಅದನ್ನು ಬಿಟ್ಟು ಗುಂಪುಗಾರಿಕೆ ಮಾಡುತ್ತಿದ್ದಾರೆ. ಬೇಕಾದಾಗ ಬಂದುಹೋಗುತ್ತಾರೆ ಎಂಬ ದೂರುಗಳಿವೆ. ಆಸ್ಪತ್ರೆಗೆ ಬಂದು ಸಭೆ ನಡೆಸಿ ನಿರ್ಲಕ್ಷ್ಯ ತೋರಿಸುತ್ತಿರುವ ಕಿರಿಯ ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸೂಚನೆ ನೀಡಿದರು.

ಅಸಮಾಧಾನ: ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗೋವಿಂದ ಕಾರಜೋಳ ‘ನನ್ನ ಇಷ್ಟು ವರ್ಷದ ಅನುಭವದಲ್ಲಿ ಇಷ್ಟೊಂದು ಅವ್ಯವಸ್ಥೆಗಳನ್ನು ಯಾವ ಆಸ್ಪತ್ರೆಯಲ್ಲೂ ನೋಡಿಲ್ಲ. ಬಡಜನರಿಗೆ ಸಮರ್ಪಕವಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ರಕ್ತ ಪರೀಕ್ಷೆ, ಸ್ಕ್ಯಾನಿಂಗ್‌, ಎಕ್ಸ್‌ರೇ ಸೇವೆಗಳಿಗೆ ಜನ ಪರದಾಡುತ್ತಿದ್ದಾರೆ. ಆಸ್ಪತ್ರೆಗೆ ಬೇಕಾದ ಅವಶ್ಯಕತೆಗಳನ್ನು ಪಟ್ಟಿ ಮಾಡಿ ಕೊಡಿ. ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡುವ ಎಲ್ಲಾ ರೀತಿಯ ಕ್ರಮ ಕೈಗೊಳ್ಳಿ’ ಎಂದು ಸೂಚನೆ ನೀಡಿದರು.

‘ಜಿಲ್ಲಾ ಆಸ್ಪತ್ರೆ 450 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ. ಆದರೆ 650 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ ಏರಿಸುವ ಅವಶ್ಯಕತೆ ಇದೆ. ನಾನು ಕೂಡ ಈ ಬಗ್ಗೆ ಸಚಿವರು, ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಸದ್ಯ ನಿರ್ಮಾಣಗೊಳ್ಳುತ್ತಿರುವ ಆಸ್ಪತ್ರೆ, ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ತಡವಾಗಬಹುದು. ಹೀಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂಲಸೌಲಭ್ಯಗಳು ಸಿಗುವ ರೀತಿಯಲ್ಲಿ ತುರ್ತಾಗಿ ಕ್ರಮ ವಹಿಸಬೇಕಾಗಿದೆ’ ಎಂದರು.

‘ಆಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಪ್ರಯೋಗಾಲಯ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಜಿಲ್ಲಾಧಿಕಾರಿಯೇ ನೇರವಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಅಧಿಕಾರ ನೀಡಬೇಕು ಎಂದು ಕೋರಲಾಗಿದೆ. ಆಯುಷ್‌ ವೈದ್ಯರನ್ನಾದರೂ ನೇಮಕ ಮಾಡಿಕೊಂಡರೆ ಸಮಸ್ಯೆ ಕೊಂಚ ಬಗೆಹರಿಯಬಹುದು’ ಎಂದು ಕಾರಜೋಳ ಹೇಳಿದರು.

‘ಜನರು ನಗರ ಪ್ರದೇಶಕ್ಕೆ ಬಂದು ನೆಲೆಸುತ್ತಿರುವ ಕಾರಣ ಜಿಲ್ಲಾ ಆಸ್ಪತ್ರೆಗೆ ಹೊರೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿದ್ದರೂ, ಅಲ್ಲಿ ಮೂಲ ಸೌಲಭ್ಯಗಳು ದೊರೆಯುತ್ತಿದ್ದರೂ ಜನರು ಜಿಲ್ಲಾ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆ. ಇದರಿಂದ ಹೊರೆ ಮತ್ತು ಹೆಚ್ಚುತ್ತಲೇ ಇದೆ’ ಎಂದರು.

ವೈದ್ಯಕೀಯ ಕಾಲೇಜು ವಿಶೇಷಾಧಿಕಾರಿ ಡಾ.ಯುವರಾಜ್, ಆರ್‌ಎಂಒ ಡಾ.ಆನಂದ್‌ ಪ್ರಕಾಶ್‌, ವೈದ್ಯರಾದ ಡಾ.ಬಸವರಾಜಪ್ಪ, ಡಾ.ಶ್ರೀರಾಮ್, ಡಾ.ಎಚ್.ಎಸ್. ಬಸವರಾಜ್, ಡಾ.ಜಯರಾಂ, ಡಾ.ವಿಜಯಕುಮಾರ್, ಡಾ.ಪ್ರಕಾಶ್, ಡಾ.ಮೋಹನ್, ಡಾ.ದೇವರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಇದ್ದರು.

ವೈದ್ಯರಿಂದ ದೂರುಗಳ ಸುರಿಮಳೆ

ಕಿರಿಯ ವೈದ್ಯರ ವರ್ತನೆಗಳ ಬಗ್ಗೆ ಸ್ಥಳದಲ್ಲಿದ್ದ ತಜ್ಞ ವೈದ್ಯರು ದೂರುಗಳ ಮಳೆ ಸುರಿಸಿದರು. ‘ವಿವಿಧ ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುವಂತೆ ಹೇಳಿದರೆ ನಮ್ಮ ವಿರುದ್ಧವೇ ಜಗಳಕ್ಕೆ ಬರುತ್ತಾರೆ. ಈಚೆಗೆ ಕೆಲವರು ಹಲ್ಲೆಗೂ ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಅವರಿಗೆ ದೂರು ನೀಡಿದ್ದೆವು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಡಾ.ರವೀಂದ್ರ ಅವರ ಕುಮ್ಮಕ್ಕಿನಿಂದಲೇ ತರಬೇತಿ ವೈದ್ಯರು ಸೇವೆ ಮಾಡಲು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಆಸ್ಪತ್ರೆಗೆ ಚಕ್ಕರ್‌; ನರ್ಸಿಂಗ್‌ ಹೋಂಗೆ ಹಾಜರ್‌

ಸಂಸದರು ಆಸ್ಪತ್ರೆಗೆ ಬಂದಾಗ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಗೈರಾಗಿದ್ದರ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.

‘ಡಾ.ರವೀಂದ್ರ ಅವರು ನಗರದಲ್ಲಿ ಖಾಸಗಿ ನರ್ಸಿಂಗ್‌ ಹೋಂ ನಡೆಸುತ್ತಿದ್ದಾರೆ. ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಇರುವುದಕ್ಕಿಂತ ಹೆಚ್ಚಾಗಿ ನರ್ಸಿಂಗ್‌ ಹೋಂನಲ್ಲೇ ಇರುತ್ತಾರೆ. ಅವರು ಮಾತ್ರವಲ್ಲದೇ ಹಲವು ವೈದ್ಯರು ಜಿಲ್ಲಾ ಆಸ್ಪತ್ರೆಗೆ ಆಸ್ಪತ್ರೆಗೆ ಬಾರದೇ ಖಾಸಗಿ ಸೇವೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ‘ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್‌ ಜೊತೆ ಮಾತನಾಡಿದ್ದು ಜಿಲ್ಲಾ ಆಸ್ಪತ್ರೆಗೆ ಬಾರದೇ ಖಾಸಗಿಯಾಗಿ ತೊಡಗಿಸಿಕೊಂಡಿರುವ ವೈದ್ಯರ ವಿರುದ್ಧ ಕ್ರಮ ಜರುಗಿಸಲಾಗುವುದು. ಆದಿತ್ಯ ಅವರು ಹಿಂದೆ ಈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಕೆಲಸಗಳ್ಳ ವೈದ್ಯರಿಗೆ ಅವರು ಸರಿಯಾಗಿ ಬುದ್ಧಿ ಕಲಿಸುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT