ಗುರುವಾರ , ಫೆಬ್ರವರಿ 27, 2020
19 °C
‘ರಫೇಲ್‌’ ಖರೀದಿ ಬಗ್ಗೆ ಅಪಪ್ರಚಾರ–ಬಿಜೆಪಿ ಆರೋಪ

ರಾಹುಲ್‌ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಫೇಲ್‌ ಯುದ್ಧ ವಿಮಾನ ಖರೀದಿಯನ್ನು ಹಗರಣವೆಂದು ಅಪಪ್ರಚಾರ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ದೇಶದ ಜನರಲ್ಲಿ ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

‘ರಫೇಲ್‌ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದೆ. ಯುದ್ಧ ವಿಮಾನ ಖರೀದಿಯ ವಿಷಯವನ್ನು ಪ್ರಸ್ತಾಪಿಸಿ ಸುಳ್ಳು ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳ್ಳ ಎಂದು ಟೀಕಿಸಿದ ರಾಹುಲ್‌ ಗಾಂಧಿ ಬಹಿರಂಗವಾಗಿ ಕ್ಷಮೆ ಕೋರಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌, ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ರಫೇಲ್‌ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ 2001ರಲ್ಲಿ ಆರಂಭವಾಯಿತು. ದೇಶದ ಭದ್ರತೆಯ ದೃಷ್ಟಿಯಿಂದ ಇದು ತೀರಾ ಅಗತ್ಯ ಎಂಬುದು ಎನ್‌ಡಿಎ ನೇತೃತ್ವದ ಸರ್ಕಾರಕ್ಕೆ ಮನವರಿಕೆಯಾಗಿತ್ತು. 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2014ರವರೆಗೂ ಈ ಪ್ರಕ್ರಿಯೆಯನ್ನು ತಡೆಹಿಡಿದಿತ್ತು. ದೇಶದ ಭದ್ರತೆಯ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇಲ್ಲ ಎಂಬುದಕ್ಕೆ ಇದೊಂದು ನಿದರ್ಶನ’ ಎಂದು ಆರೋಪಿಸಿದರು.

‘ರಫೇಲ್‌ ಖರೀದಿಯ ಬಗ್ಗೆ ರಾಹುಲ್‌ ಗಾಂಧಿ ಅವರಿಗೆ ಸಂಸತ್ತಿನಲ್ಲಿ ಚರ್ಚೆ ಮಾಡುವ ಅವಕಾಶವಿತ್ತು. ಸಂಸತ್ತಿನ ಬದಲು ಬಹಿರಂಗ ವೇದಿಕೆಗಳಲ್ಲಿ, ಮಾಧ್ಯಮಗಳ ಎದುರು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣದ ಬಗ್ಗೆ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚನೆಗೆ ಆಕ್ಷೇಪ ವ್ಯಕ್ತಪಡಿಸಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಬೇಕು. ರಫೇಲ್‌ ವಾಸ್ತವಾಂಶಗಳನ್ನು ಅವರೇ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

‘ದೇಶದ ರಕ್ಷಣೆಗೆ ಸಂಬಂಧಿಸಿದ ವಿಷಯಗಳು ಶತ್ರು ರಾಷ್ಟ್ರಗಳಿಗೆ ತಲುಪುತ್ತಿವೆ. ಪಾಕಿಸ್ತಾನ ಹಾಗೂ ಚೀನಾಗೆ ಇದರಿಂದ ಅನುಕೂಲವಾಗಿದೆ. ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ವಿದೇಶಗಳೊಂದಿಗೆ ಹಂಚಿಕೊಂಡಿದ್ದಾರೆ. ರಫೇಲ್‌ ಗುತ್ತಿಗೆ ಸಿಗದ ಕಂಪನಿಗಳಿಂದ ಸುಳ್ಳು ಮಾಹಿತಿ ಪಡೆದು ದೇಶದ ಜನರ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕೂವರೆ ವರ್ಷಗಳಲ್ಲಿ ಹಗರಣ ಮುಕ್ತ ಆಡಳಿತ ನಡೆಸಿದೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ಆಧಾರ ರಹಿತ ಆರೋಪ ಮಾಡುತ್ತಿದೆ. ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸದೇ ಇದ್ದರೆ ರಾಹುಲ್‌ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಬಿಜೆಪಿ ಸಹ ಪ್ರಭಾರಿ ಸುರೇಶ್‌, ಮುಖಂಡರಾದ ನರೇಂದ್ರ, ಮಲ್ಲಿಕಾರ್ಜುನ, ಸಿದ್ದೇಶ್‌ ಯಾದವ್‌, ನಾಗರಾಜ ಬೇದ್ರೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು