ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಪ್ಪಿಂಗ್‌ ಕಂಪನಿ ಭೂಮಿ ಹಿಂಪಡೆಯುವ ಸಾಧ್ಯತೆ

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌ ಹೇಳಿಕೆ
Last Updated 18 ನವೆಂಬರ್ 2020, 13:41 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನಲ್ಲಿ ಖಾಸಗಿ ಶಿಪ್ಪಿಂಗ್‌ ಕಂಪನಿಗೆ ನೀಡಿದ 900 ಎಕರೆ ಭೂಮಿಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಸ್ಥಳಕ್ಕೆ ಭೇಟಿ ನೀಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯೂರು ಸಮೀಪ ಸಮುದ್ರ ಇಲ್ಲದಿದ್ದರೂ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಅವಧಿಯಲ್ಲಿ ಖಾಸಗಿ ಶಿಪ್ಪಿಂಗ್‌ ಕಂಪನಿಗೆ ಭೂಮಿ ನೀಡಲಾಗಿತ್ತು. ದಶಕ ಕಳೆದರೂ ಉದ್ದೇಶಿತ ಸ್ಥಳದಲ್ಲಿ ಯಾವುದೇ ಚಟುವಟಿಕೆ ಆರಂಭವಾಗಿಲ್ಲ’ ಎಂದು ಆರೋಪಿಸಿದರು.

‘ಹಿರಿಯೂರು ಮತ್ತು ಹುಳಿಯಾರು ರಸ್ತೆಯಲ್ಲಿ ಈ ಭೂಮಿ ಇದೆ. ಹಿರಿಯೂರಿನಿಂದ ಏಳು ಕಿ.ಮೀ ದೂರದಲ್ಲಿರುವ ಭೂಮಿ ನೀಡುವಲ್ಲಿ ಕಾಂಗ್ರೆಸ್‌ ಕೈವಾಡವಿದೆ. ಅಧಿಕಾರದಲ್ಲಿದ್ದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಯತ್ತ ಗಮನಹರಿಸುವ ಬದಲು ಖಾಸಗಿ ಕಂಪನಿಗೆ ಲಾಭ ಮಾಡುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ’ ಎಂದು ದೂರಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲು ಜನಪ್ರತಿನಿಧಿಗಳ ನಿಯೋಗ ದೆಹಲಿಗೆ ತೆರಳಲಿದೆ’ ಎಂದು ಮಾಹಿತಿ ನೀಡಿದರು.

‘ನೇರ ರೈಲು ಮಾರ್ಗದ ಅರ್ಧ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುವುದಾಗಿ ಒಪ್ಪಂದವಾಗಿತ್ತು. ಹತ್ತು ವರ್ಷ ಕಳೆದರೂ ಯೋಜನೆ ಅನುಷ್ಠಾನಗೊಳ್ಳದಿರುವುದರಿಂದ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಕೋವಿಡ್ ಆವರಿಸಿಕೊಂಡು ಸಮಸ್ಯೆ ಉಂಟಾಗಿದ್ದರಿಂದ ರಾಜ್ಯ ಸರ್ಕಾರಕ್ಕೆ ಯೋಜನಾ ವೆಚ್ಚ ಭರಿಸಲು ಕಷ್ಟವಾಗುತ್ತದೆ. ಈ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ’ ಎಂದು ವಿವರಿಸಿದರು.

‘ಹಿರಿಯೂರಿನ ವಾಣಿವಿಲಾಸ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಸಕ್ಕರೆ ಕಾರ್ಖಾನೆ ಪುನರರಾಂಭಗೊಂಡರೆ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಕಾರ್ಖಾನೆಯ ಸ್ಥಿತಿ, ಸಾಲದ ಹೊರೆ ಸೇರಿ ಹಲವು ಮಾಹಿತಿಯನ್ನು ಸಂಗ್ರಹಿಸಿ ಸಕ್ಕರೆ ಸಚಿವರ ಗಮನ ಸೆಳೆಯಲಾಗುತ್ತಿದೆ. ಮದಕರಿ ನಾಯಕ ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ರೂಪುರೇಷ ಸಿದ್ಧವಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್‌, ಶಿವಣ್ಣಾಚಾರ್‌, ಸಂಪತ್‌ಕುಮಾರ್‌, ದಗ್ಗೆ ಶಿವಪ್ರಕಾಶ್‌, ಬೇದ್ರೆ ನಾಗರಾಜ್‌ ಇದ್ದರು.

***

ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯ ಕಾಗದದಲ್ಲಿ ಉಳಿದಿಲ್ಲ. ನಿರ್ಣಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಲಾಗುತ್ತಿದೆ.

–ಎ.ಮುರುಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT