ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವರ ವಿರುದ್ಧ ಬಿಜೆಪಿ ಪ್ರತಿಭಟನೆ; ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಒತ್ತಾಯ

Last Updated 6 ಮೇ 2019, 11:43 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸುಳ್ಳು ಪ್ರಕರಣಗಳನ್ನು ಹೇರಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.

ಸಮ್ಮಿಶ್ರ ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಪ್ರಯತ್ನ ಗೃಹ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದೆ. ಇದು ಗೊತ್ತಿದ್ದೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೌನಕ್ಕೆ ಶರಣಾಗಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕಾರಣಕ್ಕೆ ಬಿಜೆಪಿ ಹಿತೈಷಿಗಳನ್ನು ಬಂಧಿಸಲಾಗಿದೆ. ಕಾರಾಗೃಹದಲ್ಲಿ ಇಟ್ಟು ಮಾನಸಿಕ ಕಿರುಕುಳ ನೀಡಲಾಗಿದೆ. ನಿರಾಧಾರ ಪ್ರಕರಣಗಳನ್ನು ದಾಖಲಿಸಿ ಚಿತ್ರಹಿಂಸೆ ನೀಡಲಾಗುತ್ತಿದೆ. ಬಿಜೆಪಿ ಬಗೆಗೆ ಒಲವು ಹೊಂದಿದವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ವೀರಶೈವ ಲಿಂಗಾಯತ ಸಮುದಾಯದ ವಿಭಜನೆಗೆ ನಡೆದ ಹುನ್ನಾರದಲ್ಲಿ ಗೃಹ ಸಚಿವರು ಶಾಮೀಲಾಗಿದ್ದರು. ಅವರು ಬರೆದಿದ್ದ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣಕ್ಕೆ ಕೆಲವರನ್ನು ಬಂಧಿಸಲಾಗಿದೆ. ಪೊಲೀಸ್‌ ಇಲಾಖೆಯನ್ನು ಸಚಿವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಐಪಿಸಿ 307 ಕಲಂ ಅಡಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ರಾಜ್ಯದಲ್ಲಿ ಹಲವು ಪ್ರಕರಣ ದಾಖಲಾಗಿವೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ರಾಜ್ಯ ಸರ್ಕಾರದ ರಾಜಕೀಯ ದ್ವೇಷಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಕರೆ ನೀಡಿದ್ದ ಕಾಂಗ್ರೆಸ್‌ ಮುಖಂಡ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ದೂರು ನೀಡಿ ತಿಂಗಳು ಕಳೆದಿವೆ. ಮಾಜಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಚಿತ್ರನಟ ಯಶ್‌ ಹಾಗೂ ದರ್ಶನ್‌ ಅವರಿಗೆ ಬೆದರಿಕೆ ಹಾಕಿದ್ದ ಜೆಡಿಎಸ್‌ ಶಾಸಕ ನಾರಾಯಣಗೌಡ ವಿರುದ್ಧವೂ ಕ್ರಮಕೈಗೊಂಡಿಲ್ಲ. ಸರ್ಕಾರ ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌, ಪ್ರಧಾನ ಕಾರ್ಯದರ್ಶಿ ರತ್ನಮ್ಮ, ಮುಖಂಡರಾದ ಮಲ್ಲಿಕಾರ್ಜುನ, ನಾಗರಾಜ ಬೇದ್ರೆ, ದಗ್ಗೆ ಶಿವಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT