ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದ ಸೇತುವೆ ನಿರ್ಮಾಣ ಕಾಮಗಾರಿ

ವಿಳಂಬ ಧೋರಣೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು
Last Updated 22 ಸೆಪ್ಟೆಂಬರ್ 2021, 4:50 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಪಟ್ಟಣದಲ್ಲಿ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಸಮುದಾಯ ಭವನದ ಎದುರು ಹಾದು ಹೋಗಿರುವ ರಾಜ್ಯಹೆದ್ದಾರಿ-45ರಲ್ಲಿ ಚಿಕ್ಕಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದ ಪರಿಣಾಮವಾಗಿ ವಾಹನ ಸವಾರರು ಜೀವಭಯದಲ್ಲಿ ವಾಹನ ಸವಾರಿ ಮಾಡುವ ಪರಿಸ್ಥಿತಿ ಎದುರಾಗಿದೆ.

ನಾಯಕನಹಟ್ಟಿಯಿಂದ ಜಿಲ್ಲಾ ಹೆದ್ದಾರಿಯ ಮೂಲಕ ಹಾಯ್ಕಲ್, ಬೆಳಗಟ್ಟ, ಚಿತ್ರದುರ್ಗ ನಗರವನ್ನು ಮತ್ತು ರಾಷ್ಟ್ರೀಯ ಹೆದ್ದಾರಿ–150ಎ ಮಾರ್ಗದಲ್ಲಿರುವ ಚಳ್ಳಕೆರೆ, ಹಿರಿಯೂರು, ಬೆಂಗಳೂರು ಸಂಪರ್ಕಿಸಲು ಈ ರಸ್ತೆ ಪ್ರಮುಖವಾಗಿದೆ. ಚಳ್ಳಕೆರೆಯಿಂದ ದಾವಣಗೆರೆ ಭಾಗಕ್ಕೂ ಇದೇ ರಸ್ತೆಯಲ್ಲಿಯೇ ಸಂಪರ್ಕ ಕಲ್ಪಿಸುತ್ತದೆ. ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ
ಹೆದ್ದಾರಿ- 45ರಲ್ಲಿ ನಿತ್ಯ ನೂರಾರು ವಾಹನಗಳು, ಬಸ್‌ಗಳು, ಖಾಸಗಿ ವಾಹನಗಳು ಸಂಚರಿಸುತ್ತವೆ. ರಾಜ್ಯ ಹೆದ್ದಾರಿ-45ರಲ್ಲಿ ನಾಯಕನಹಟ್ಟಿಯ ದೊಡ್ಡಕೆರೆ ಮತ್ತು ಚಿಕ್ಕಕೆರೆಯ ಕಾಲುವೆಗಳು, ಹಳ್ಳಗಳು ಹಾದು ಹೋಗುತ್ತವೆ. ಇದೇ ಹೆದ್ದಾರಿಯಲ್ಲಿ ಪಟ್ಟಣದ ಅನತಿ ದೂರದಲ್ಲೇ ದೊಡ್ಡಹಳ್ಳ ಇದ್ದು, ಇವಕ್ಕೆ 8 ಕಣ್ಣಿನ ಬೃಹತ್ ಸೇತುವೆ ನಿರ್ಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಆದರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗುರುತಿಪ್ಪೇರುದ್ರ
ಸ್ವಾಮಿ ಸಮುದಾಯ ಭವನದ ಪಕ್ಕದಲ್ಲಿ ಹಾದು ಹೋಗಿರುವ ಚಿಕ್ಕಹಳ್ಳಕ್ಕೆ ಯಾವುದೇ ಸೇತುವೆಗಳಿಲ್ಲ. ಪರಿಣಾಮವಾಗಿ ಮಳೆಗಾಲದಲ್ಲಿ ಚಿಕ್ಕಹಳ್ಳದಿಂದ ಹರಿದು ಬರುವ ನೀರು ರಾಜ್ಯ ಹೆದ್ದಾರಿಯ ಮೇಲೆ ನಿಲ್ಲುತ್ತದೆ. ಇದರಿಂದ ಬೃಹತ್‌ ಪ್ರಮಾಣದ ಕಂದಕಗಳು ಸೃಷ್ಟಿಯಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಪಟ್ಟಣದಲ್ಲಿ ನಡೆಯುವ ವಾರ್ಷಿಕ ಜಾತ್ರೆಯ ಸಮಯದಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿತ್ತು. ಆದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಂದಕ ಸೃಷ್ಟಿಯಾದ ನಂತರ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ತಾತ್ಕಾಲಿಕ ಪರಿಹಾರ ನೀಡುತ್ತಿದ್ದರು. ಇಂತಹ ಅಪಾಯಕಾರಿ ಸಮಸ್ಯೆ ಇದ್ದರೂ ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಚಿಕ್ಕಹಳ್ಳಕ್ಕೆ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿಲ್ಲ.

ಆದರೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಚಿಕ್ಕಹಳ್ಳದ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಂಡು ತಾವೇ ಸೇತುವೆ ನಿರ್ಮಾಣ ಕಾಮಗಾರಿಗೆ ಯೋಜನೆ ತಯಾರಿಸಿದರು. ಇದೇ ವರ್ಷದ ಫೆಬ್ರುವರಿ ತಿಂಗಳಲ್ಲಿ ಚಿಕ್ಕಹಳ್ಳಕ್ಕೆ ಸುಸಜ್ಜಿತ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಅಗೆದು ಪಕ್ಕದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ತಾತ್ಕಾಲಿಕ ರಸ್ತೆ ಸಹ ಹದಗೆಟ್ಟು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನಗಳಲ್ಲಿ
ಸವಾರಿ ಮಾಡುತ್ತಿದ್ದಾರೆ. ಮಳೆ ಬಂದ ದಿನ ಇಡೀ ಪ್ರದೇಶ ಕೆಸರುಗದ್ದೆಯಾಗುತ್ತದೆ. ಹೀಗಾಗಿ 7 ತಿಂಗಳು ಕಳೆದರೂ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗುವ ಮನ್ಸೂಚನೆ ಕಾಣುತ್ತಿಲ್ಲ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಅಧಿಕಾರಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹಲವರಿಗೆ ಗಾಯ

ಫೆಬ್ರುವರಿ ತಿಂಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಕಾರಾಣಾಂತರಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪರಿಣಾಮವಾಗಿ ಕತ್ತಲಲ್ಲಿ ಹಲವು ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿಗೆ ಚಾಲನೆ ನೀಡಬೇಕು. ಇಲ್ಲವಾದರೆ ಅಪಘಾತಗಳಿಗೆ ದಾರಿಕೊಟ್ಟಂತಾಗುತ್ತದೆ.

– ದಳವಾಯಿ ರುದ್ರಮುನಿ,ಗ್ರಾಮಸ್ಥ

10– 15 ದಿನಗಳೊಳಗೆ ಆರಂಭ

ಸೇತುವೆ ನಿರ್ಮಾಣಕ್ಕೆ ₹ 1.50 ಕೋಟಿ ಅನುದಾನ ಸಿದ್ಧವಿದೆ. ಜೊತೆಗೆ ಸೇತುವೆ ಕಾಮಗಾರಿ ನಿರ್ಮಾಣಕ್ಕಿದ್ದ ಎಲ್ಲ ತಾಂತ್ರಿಕ ಸಮಸ್ಯೆಗಳೂ ಬಗೆಹರಿದಿವೆ. ಇನ್ನು 10ರಿಂದ 15ದಿನಗಳೊಳಗೆ ಕಾಮಗಾರಿಯನ್ನು ಆರಂಭಿಸಲಾಗುವುದು.

– ಹಕೀಂ ಅಹಮ್ಮದ್,ಲೋಕೋಪಯೋಗಿ ಸಹಾಯಕ ಎಂಜಿನಿಯರ್, ಚಳ್ಳಕೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT