ಮಂಗಳವಾರ, ಜನವರಿ 25, 2022
24 °C
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು

ಕೆರೆ ತುಂಬಿಸುವ ಪ್ರಯತ್ನಕ್ಕೆ ನೆರವು: ಶಿವಮೂರ್ತಿ ಮುರುಘಾ ಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬುರುಜನರೊಪ್ಪ (ಹಿರಿಯೂರು): ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚಿಕ್ಕಸಿದ್ದವ್ವನಹಳ್ಳಿ ಕೆರೆ ತುಂಬಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಶ್ವಾಸನೆ ನೀಡಿದರು.

ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮದಲ್ಲಿ ಅಮೆರಿಕದ ಎಂಜಿನಿಯರ್‌ ಎಂ.ಭರತ್‌ಕುಮಾರ್‌ ಅವರು ಹಮ್ಮಿಕೊಂಡಿರುವ ‘ಬುರುಜನರೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಅಭಿಯಾನ’ಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕೆರೆ ತುಂಬಿಸುವ ವಿಚಾರದಲ್ಲಿ ಭರತ್‌ಕುಮಾರ್‌ ಅವರಿಗೆ ಕಾಳಜಿ ಇದೆ. ಗ್ರಾಮಾಭಿವೃದ್ಧಿ ಮಾಡಿ ಜನರ ಕೈಗೆ ಕೆಲಸ ಕೊಡುವ ಅಧಮ್ಯ ಉತ್ಸಾಹವಿದೆ. ಮುಂಬರುವ ದಿನಗಳಲ್ಲಿ ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡಲಾಗುವುದು. ಊರಿನ ಉದ್ದಾರಕ್ಕೆ ಮಠವೂ ಕೈಜೋಡಿಸಲಿದೆ’ ಎಂದು ಹೇಳಿದರು.

‘ಸರ್ಕಾರ ಮಲಗಿರುವಾಗ ನಾವು ಎಚ್ಚರಿಸಬೇಕು. ಈ ಕಾರ್ಯವನ್ನು ಮುರುಘಾ ಮಠ ನಿರಂತರವಾಗಿ ಮಾಡುತ್ತಿದೆ. ಜಿಲ್ಲೆಯ ಸಾವಿರಾರು ಯುವಕರಿಗೆ ಕೆಲಸ ಕೊಡುವ ಕೈಗಾರಿಕಾ ಕಾರಿಡಾರ್‌ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ’ ಎಂದರು.

‘ಯುವಕರು ದುಶ್ಚಟಗಳಿಗೆ ದಾಸರಾಗಬಾರದು. ಆರೋಗ್ಯ ಹಾಳಾದರೆ ಬದುಕು ನಾಶವಾಗುತ್ತದೆ. ಮದ್ಯಪಾನ, ಧೂಮಪಾನದಿಂದ ದೂರ ಇರಬೇಕು. ಚಿಕ್ಕ ವಯಸ್ಸಿನಲ್ಲಿ ಗುಟುಕಾ ತಿಂದರೆ ಆರೋಗ್ಯ ಹಾಳಾಗುತ್ತದೆ. ಇಂತಹ ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ. ಇದಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ ಮಾಡಲಾಗುವುದು’ ಎಂದು ಹೇಳಿದರು.

ಯೂಥ್ ಫಾರ್ ಸೇವಾ ಸಂಸ್ಥೆಯ ತಿಪ್ಪೇಸ್ವಾಮಿ, ‘ಯುವ ಸಮೂಹಕ್ಕಾಗಿ ಹಾಗೂ ಗ್ರಾಮಾಭಿಮೃದ್ಧಿಗೆ ನಮ್ಮ ಸಂಸ್ಥೆ ಕೂಡಾ ಕೈಜೋಡಿಸಿದೆ. ಎಂಟು ಹಳ್ಳಿಯಲ್ಲಿ ಸಮೃದ್ಧಿ ಎಂಬ ಸಂಸ್ಥೆ ವತಿಯಿಂದ ಹಲವು ರೀತಿಯ ಕಾರ್ಯಕ್ರಮ ರೂಪಿಸಲಾಗಿದೆ. ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸು ಮಾಡಲು ಕಾಳಜಿಯಿಂದ ಕೆಲಸ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದರು.

‘ದೇಶದಲ್ಲಿ ಯುವ ಸಮೂಹ ಹೆಚ್ಚಾಗಿದೆ. ಕೋವಿಡ್‌ ಬಳಿಕ ದುಡಿಯುವ ಕೈಗಳಿಗೆ ಕೆಲಸವಿಲ್ಲ. ಪ್ರತಿಯೊಬ್ಬರು ಮೊದಲು ತಮ್ಮೂರ ಬದಲಾವಣೆಗೆ ಶ್ರಮಿಸಬೇಕು. ಹಣವಿಲ್ಲದೆಯೂ ಜನಸೇವೆ ಮಾಡಲು ಅವಕಾಶಗಳಿವೆ. ರಸಗೊಬ್ಬರ ಹಾಗೂ ಕೀಟನಾಶಕ ಬಳಕೆಯಿಂದ ಮಣ್ಣಿನ ಜೀವಂತಿಕೆ ಹಾಳಾಗಿದೆ. ಇದನ್ನು ನಾವೇ ಉಳಿಸಿಕೊಳ್ಳಬೇಕು. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸೋಣ’ ಎಂದು ಹೇಳಿದರು.

ಭರತ್‌ಕುಮಾರ್‌, ವೀರಭದ್ರಪ್ಪ ಇದ್ದರು. ಅಭಿಯಾನದ ಅಂಗವಾಗಿ ಶಾರದಾದೇವಿ ಪ್ರೌಢ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕ್ರಿಕೆಟ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.

***

ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಕಾಯಿಲೆ ಬಂದಾಗ ಗುಣಮುಖ ಆಗುವುದಕ್ಕಿಂತ ಕಾಯಿಲೆ ಬರದೇ ಇರುವಂತೆ ನೋಡಿಕೊಳ್ಳಬೇಕು.

ಡಾ.ರವಿಕುಮಾರ್, ವೈದ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.