ಶನಿವಾರ, ಮೇ 28, 2022
27 °C
ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್‌ಗೆ ಘೋಷಣೆಯಾದ ಚುನಾವಣೆ

ಚಿತ್ರದುರ್ಗ: ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ನಡೆಯುತ್ತಿದೆ ಕಸರತ್ತು

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಚುನಾವಣೆ ನಿಗದಿಯಾಗಿದ್ದು, ಚಿತ್ರದುರ್ಗ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸು ಪಡೆದಿವೆ. ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷದಲ್ಲಿ ಕಸರತ್ತು ನಡೆಯುತ್ತಿದೆ.

ಚಿತ್ರದುರ್ಗ ಕ್ಷೇತ್ರವನ್ನು ಕಾಂಗ್ರೆಸ್‌ನ ರಘು ಆಚಾರ್‌ ಪ್ರತಿನಿಧಿಸುತ್ತಿದ್ದರು. ಇವರ ಅಧಿಕಾರಾವಧಿ 2022ರ ಜ.5ರಂದು ಕೊನೆಗೊಳ್ಳಲಿದೆ. ಈ ಸ್ಥಾನವೂ ಸೇರಿ ರಾಜ್ಯದ ಒಟ್ಟು 25 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಡಿ.10ರಂದು ಮತದಾನ ನಡೆಯಲಿದೆ.

2016ರಲ್ಲಿ ನಡೆದ ಚುನಾವಣೆಯಲ್ಲಿ ಜಿ.ರಘು ಆಚಾರ್‌ ಹಾಗೂ ಬಿಜೆಪಿಯ ಕೆ.ಎಸ್‌.ನವೀನ್‌ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ರಘು ಆಚಾರ್‌ ವಿರುದ್ಧ ನವೀನ್‌ ಪರಾಭವಗೊಂಡಿದ್ದರು. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಈ ಇಬ್ಬರೂ ಕಣಕ್ಕೆ ಇಳಿಯಬಹುದು ಎಂಬ ನಿರೀಕ್ಷೆ ಇದೆ. ರಘು ಆಚಾರ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಈಗಾಗಲೇ ಘೋಷಿಸಿದ್ದರಿಂದ ಕುತೂಹಲ ಹೆಚ್ಚಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು ಸಿದ್ಧವಾಗಿದೆ. ಬಹುಬೇಗ ಚುನಾವಣೆ ಸಿದ್ಧತೆ ಆರಂಭಿಸಿದ್ದ ಬಿಜೆಪಿ, ಅಭ್ಯರ್ಥಿ ಆಯ್ಕೆಯ ಕೊನೆ ಘಟ್ಟವನ್ನು ತಲುಪಿದೆ. ಶಾಸಕರು, ಸಂಸದರು ಹಾಗೂ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಪಕ್ಷದ ವರಿಷ್ಠರು ವರದಿ ಪಡೆದಿದ್ದಾರೆ. ಮೂರು ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ. ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ಒಬಿಸಿ ಮೋರ್ಚಾದ ಉಪಾಧ್ಯಕ್ಷ ಸಿದ್ದೇಶ್‌ ಯಾದವ ಹಾಗೂ ಹೊಸದುರ್ಗದ ಹೆಬ್ಬಳ್ಳಿ ಮಲ್ಲಿಕಾರ್ಜುನ ಅವರ ಹೆಸರುಗಳೂ ಕೇಳಿಬರುತ್ತಿವೆ.

ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ವಿಧಾನಪರಿಷತ್‌ ಸದಸ್ಯ ರಘು ಆಚಾರ್ ಘೋಷಣೆ ಮಾಡಿದ್ದಾರೆ. ಪಕ್ಷದ ನಾಯಕರಿಗೆ ಅಥವಾ ಹೊಸಬರಿಗೆ ಅವಕಾಶ ನೀಡುವಂತೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ನಡುವೆ ಆಕಾಂಕ್ಷಿಗಳಿಂದ ಕಾಂಗ್ರೆಸ್‌ ಅರ್ಜಿ ಆಹ್ವಾನಿಸಿದ್ದು, ಹಿರಿಯೂರು ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಜಿ.ಮಂಜುನಾಥ್‌ ಹಾಗೂ ಬೆಂಗಳೂರಿನ ನಿವಾಸಿ ಸೋಮಶೇಖರ್‌ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಉಮಾಪತಿ, ಎಸ್‌ಎಂಎಲ್‌ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್‌ ಅರ್ಜಿ ಪಡೆದಿದ್ದಾರೆ.

ಜೆಡಿಎಸ್‌ ಪಕ್ಷದಲ್ಲಿ ಇಂತಹ ಯಾವುದೇ ತಯಾರಿಗಳು ಮೇಲ್ನೋಟಕ್ಕೆ ಕಾಣುತ್ತಿಲ್ಲ. ಪಕ್ಷದ ವರಿಷ್ಠರು ಇದೇ 13ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಂದೇ ಅಭ್ಯರ್ಥಿ ಆಯ್ಕೆ ಹೊರಬೀಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಎರಡು ಜಿಲ್ಲಾ ವ್ಯಾಪ್ತಿ

ಅವಿಭಜಿತ ಚಿತ್ರದುರ್ಗ ಜಿಲ್ಲೆಯನ್ನು ಕ್ಷೇತ್ರ ಒಳಗೊಂಡಿದೆ. ಚಿತ್ರದುರ್ಗದ ಆರು ತಾಲ್ಲೂಕುಗಳು ಹಾಗೂ ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲ್ಲೂಕು ವ್ಯಾಪ್ತಿಯನ್ನು ಕ್ಷೇತ್ರ ಹೊಂದಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 11 ವಿಧಾನಸಭಾ ಸದಸ್ಯರಿದ್ದಾರೆ.

2016ರಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳಿಂದ 5,348 ಮತದಾರರಿದ್ದರು. ಈ ಬಾರಿ ಇನ್ನೂ ಮತದಾರರ ಪಟ್ಟಿ ಪ್ರಕಟವಾಗಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯರ ಅಧಿಕಾರವಧಿ ಮುಗಿದಿದೆ. ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ 5,300 ಜನರು ಮತದಾನದ ಹಕ್ಕು ಪಡೆಯಬಹುದು ಎಂದು ರಾಜಕೀಯ ಪಕ್ಷಗಳು ಅಂದಾಜಿಸಿವೆ.

 

ರಘು ಆಚಾರ್‌ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ನ.14ರ ಬಳಿಕ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ.
–ಎಂ.ಕೆ.ತಾಜ್‌ಪೀರ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಪಕ್ಷದ ನಾಯಕರ ಸಭೆ ನಡೆದಿದ್ದು, ನಾಲ್ವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಒಬ್ಬರ ಹೆಸರು ಆಯ್ಕೆ ಆಗಲಿದೆ. ಮೂರು ದಿನದಲ್ಲಿ ಅಭ್ಯರ್ಥಿ ಘೋಷಣೆ ಆಗಲಿದೆ.
–ಎ.ಮುರುಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಚುನಾವಣೆಗೆ ಸ್ಪರ್ಧಿಸಲು ಅನೇಕರು ಆಸಕ್ತಿ ತೋರಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಸಭೆ ನ.13ರಂದು ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಅಭ್ಯರ್ಥಿ ಆಯ್ಕೆ ನಡೆಯಲಿದೆ.
–ಯಶೋಧರ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು