ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2023 | ಭದ್ರಾ ಮೇಲ್ದಂಡೆ ಯೋಜನೆಗೆ ‘ಕೇಂದ್ರ’ದ ಬಲ

ಆಶಾಭಾವನೆ ಮೂಡಿಸಿದ ₹ 5,300 ಕೋಟಿ ಅನುದಾನ ಘೋಷಣೆ
Last Updated 2 ಫೆಬ್ರುವರಿ 2023, 5:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ಅನುದಾನ ಘೋಷಿಸಿರುವುದು ಮಧ್ಯ ಕರ್ನಾಟಕದ ಜನರಲ್ಲಿ ಆಶಾಭಾವ ಮೂಡಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಕರ್ನಾಟಕದ ಬಯಲುಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆಗೆ ₹ 5,300 ಕೋಟಿ ಅನುದಾನದ ನೆರವು ಘೋಷಿಸಿದ್ದಾರೆ. ಇದರಿಂದ ಸುಮಾರು ₹ 21,000 ಕೋಟಿ ವೆಚ್ಚದ ಯೋಜನೆಯು ಕರ್ನಾಟಕದ ಮೊದಲ ರಾಷ್ಟ್ರೀಯ ಯೋಜನೆಯಾಗಿ ಅಧಿಕೃತವಾಗುವುದು ಬಹುತೇಕ ನಿಚ್ಚಳವಾಗಿದೆ.

ಯೋಜನೆಯ ಒಟ್ಟು ವೆಚ್ಚದ ಶೇ 60ರಷ್ಟನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಯೋಜನಾ ವೆಚ್ಚದ ಕೇಂದ್ರ ಸರ್ಕಾರ ₹ 12,500 ಕೋಟಿ ಅನುದಾನದಲ್ಲಿ ₹ 5,300 ಕೋಟಿ ನೀಡಿದಂತಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದ್ದು, ಕಾಮಗಾರಿ ವೇಗ ಪಡೆಯಲಿದೆ.

ವಾಣಿವಿಲಾಸ ಸಾಗರ ಜಲಾಶಯ ಶತಮಾನದ ಹಿಂದೆ ನಿರ್ಮಾಣವಾದರೂ ಚಿತ್ರದುರ್ಗ ಜಿಲ್ಲೆ ಬರದ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಬದಲಾದ ಹವಾಮಾನದಿಂದ ಕಾಲಕ್ಕೆ ಸರಿಯಾಗಿ ಮಳೆ ಆಗದಿರುವುದರಿಂದ ವಿ.ವಿ. ಸಾಗರ ಜಲಾಶಯದ ಒಡಲು ತುಂಬಿದ್ದು ವಿರಳ. ಮಳೆ ನಂಬಿ ಕೃಷಿ ನಡೆಸುವ ರೈತರ ಸಂಕಷ್ಟ ಕಂಡ ಬಳಿಕ ‘ಭದ್ರಾ ಮೇಲ್ದಂಡೆ’ ರೂಪುಗೊಂಡಿತು.

ಭದ್ರಾ ಜಲಾಶಯ ನಿರ್ಮಾಣವಾಗುತ್ತಿದ್ದಂತೆ ಜಲಾಶಯದಿಂದ ಚಿತ್ರದುರ್ಗಕ್ಕೆ ನೀರು ಹರಿಸಬೇಕು ಎಂಬ ಬೇಡಿಕೆಯ ಕೂಗು ಕೇಳಿ ಬಂದಿತು. ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರು ಚಿತ್ರದುರ್ಗದವರೇ ಆಗಿದ್ದ ಕಾರಣಕ್ಕೆ ಸರ್ಕಾರದ ಮೇಲೆ ಆಗ ಒತ್ತಡ ಸೃಷ್ಟಿಯಾಗಿತ್ತು.

2003ರಲ್ಲಿ ರೂಪುಗೊಂಡ ಯೋಜನೆಗೆ ₹ 2,000 ಕೋಟಿ ಮೀಸಲಿಡಲಾಗಿತ್ತು. ನೀರಾವರಿ ತಜ್ಞ ಕೆ.ಸಿ. ರೆಡ್ಡಿ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿ ಅಧ್ಯಯನ ನಡೆಸಿ 2004ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಪರಿಷ್ಕೃತ ಯೋಜನೆಗೆ ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ 2008ರಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಿತು.‌ 2015ರಲ್ಲಿ ಮತ್ತೆ ಪರಿಷ್ಕರಣೆ ಮಾಡಿ ₹ 12,340 ಕೋಟಿ ಅಂದಾಜು ವೆಚ್ಚ ತಯಾರಿಸಲಾಯಿತು. ರಾಷ್ಟ್ರೀಯ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿ ಯೋಜನಾ ವೆಚ್ಚವನ್ನು ₹ 21,000 ಕೋಟಿಗೆ ಏರಿಕೆ ಮಾಡಲಾಯಿತು.

ಕಾಮಗಾರಿಗೆ ಚಾಲನೆ ನೀಡಿ 13 ವರ್ಷ ಕಳೆದರೂ ಅರ್ಧದಷ್ಟು ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ. 2008ರಿಂದ ಈವರೆಗೆ ಶೇ 40ರಷ್ಟು ಕಾಮಗಾರಿ ಮಾತ್ರ ಮುಗಿದಿದೆ. ಯೋಜನೆ ಪ್ರಾರಂಭದ ಸ್ಥಳದಿಂದ ಒಟ್ಟು 61 ಕಿ.ಮೀ. ಮಾರ್ಗದಲ್ಲಿ ಒಟ್ಟು 52 ಕಿ.ಮೀ. ಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು, 9 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿವೆ. ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ 61.23 ಕಿ.ಮೀಯಿಂದ 134.59 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 73.36 ಕಿ.ಮೀ. ಕಾಮಗಾರಿಯ ಪೈಕಿ 39.47 ಕಿ.ಮೀ. ಮಾತ್ರ ಪೂರ್ಣಗೊಂಡಿದೆ. ಈ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸುಮಾರು 20 ಪ್ರಸ್ತಾವನೆಗಳು ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿವೆ.

ತುಮಕೂರು ಶಾಖಾ ಕಾಲುವೆಯ 108 ಕಿ.ಮೀ. ಕಾಮಗಾರಿಯ ಪೈಕಿ ಕೇವಲ 35 ಕಿ.ಮೀ. ಮಾತ್ರ ಪೂರ್ಣಗೊಂಡಿವೆ. 30 ಕಿ.ಮೀ. ಕಾಮಗಾರಿಗೆ ಸಂಬಂಧಿಸಿದಂತೆ ಅವಾರ್ಡ್ ಆಗಿ ಪರಿಹಾರ ಮೊತ್ತ ಪಾವತಿಯಾಗಿದೆ. ಇನ್ನೂ 15 ಪ್ರಸ್ತಾವನೆಗಳ ಅನುಮೋದನೆ ಬಾಕಿ ಇದೆ.

ನಾಲ್ಕು ಜಿಲ್ಲೆಯ 5.57 ಲಕ್ಷ ಎಕರೆಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಬಹುದೊಡ್ಡ ಯೋಜನೆ ಇದಾಗಿದೆ. 2,25,515 ಹೆಕ್ಟೇರ್‌ ಪ್ರದೇಶ ಹಸನಾಗಲಿದ್ದು, 367 ಕೆರೆಗಳಿಗೆ ಶೇ 50ರಷ್ಟು ನೀರು ತುಂಬಿಸ‌ಲಾಗುತ್ತದೆ. ಚಿತ್ರದುರ್ಗ ಶಾಖಾ ಕಾಲುವೆ ವ್ಯಾಪ್ತಿಯಲ್ಲಿ ಬರುವ ಚಳ್ಳಕೆರೆ ಹಾಗೂ ಮೊಳಕಾಲ್ಮರು ತಾಲ್ಲೂಕುಗಳ ಕೆರೆಗಳನ್ನು ಭರ್ತಿ ಮಾಡುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ಈವರೆಗೂ ಕಾಮಗಾರಿಗೆ ಎದುರಾಗಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗುವ ಭರವಸೆಯನ್ನು ಅನುದಾನದ ಘೋಷಣೆ ಭರವಸೆ ಮೂಡಿಸಿದೆ.

ಯೋಜನೆ ಏನು–ಎತ್ತ?
ಚಿಕ್ಕಮಗಳೂರು–ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾ ಜಲಾಶಯದಿಂದ ಮಧ್ಯ ಕರ್ನಾಟಕದ ಭಾಗಕ್ಕೆ ನೀರುಣಿಸುವುದೇ ‘ಭದ್ರಾ ಮೇಲ್ದಂಡೆ’ಯ ಉದ್ದೇಶ. ವರ್ಷಕ್ಕೆ 29.9 ಟಿಎಂಸಿ ಅಡಿ ನೀರನ್ನು ಮೇಲ್ದಂಡೆಗೆ ಮೀಸಲಿಟ್ಟು ಯೋಜನೆ ರೂಪಿಸಲಾಗಿದೆ. ಹೆಸರು ಭದ್ರಾ ಮೇಲ್ದಂಡೆ ಎಂದಿದ್ದರೂ ತುಂಗಾ ನದಿಯ ಪಾಲು ಬಹುತೇಕ ಹೆಚ್ಚಿದೆ.

ಭದ್ರಾ ಜಲಾಶಯದಿಂದ 12.5 ಟಿಎಂಸಿ ಅಡಿ ನೀರನ್ನು ‘ಭದ್ರಾ ಮೇಲ್ದಂಡೆ’ಗೆ ಹರಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ವರೆಗೆ ತುಂಗಾ ಜಲಾಶಯದಿಂದ 17.4 ಟಿಎಂಸಿ ಅಡಿ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ತರುವ ಸಾಹಸಮಯ ಕೆಲಸ ಯೋಜನೆಯ ಭಾಗವಾಗಿದೆ.

ಮಧ್ಯ ಕರ್ನಾಟಕದ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಚಿತ್ರದುರ್ಗದ ಎಲ್ಲ ಆರು ತಾಲ್ಲೂಕುಗಳು ನೀರಾವರಿ ಸೌಲಭ್ಯ ಪಡೆಯಲಿವೆ. ಚಿಕ್ಕಮಗಳೂರಿನ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲ್ಲೂಕು, ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ ಮತ್ತು ಪಾವಗಡ ತಾಲ್ಲೂಕು ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿಗೆ ನೀರು ಹರಿಯಲಿದೆ.

*

ಕೇಂದ್ರದ ಬಜೆಟ್‌ನಲ್ಲಿ ಭದ್ರಾ ಯೋಜನೆಗೆ ಅನುದಾನ ಘೋಷಿಸುವ ಮೂಲಕ ‘ರಾಷ್ಟ್ರೀಯ ಯೋಜನೆ’ ಅಧಿಕೃತವಾದಂತಾಗಿದೆ. ಯೋಜನೆಯ ಒಟ್ಟು ವೆಚ್ಚದ ಶೇ 60ರಷ್ಟರಲ್ಲಿ ಮೊದಲ ಹಂತದಲ್ಲಿ ₹5,300 ಕೋಟಿ ಅನುದಾನ ಘೋಷಿಸಿದೆ. ಕೇಂದ್ರಕ್ಕೆ ಸಲ್ಲಿಸಿದ್ದ ಯೋಜನಾ ವರದಿಯಂತೆ 2024ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.
–ಚಲುವರಾಜು, ನಿವೃತ್ತ ಮುಖ್ಯ ಎಂಜಿನಿಯರ್‌, ಭದ್ರಾ ಮೇಲ್ದಂಡೆ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT