ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೆರೆ: ಚನ್ನಬಸಪ್ಪನವರ ಬದುಕು ಚೆಂದವಾಗಿಸಿದ ಎಲಕೋಸು

ಅಲ್ಪಾವಧಿ, ಬಹುಬೆಳೆಯಿಂದ ಹೆಚ್ಚಿನ ಲಾಭ
Last Updated 26 ಜನವರಿ 2022, 3:34 IST
ಅಕ್ಷರ ಗಾತ್ರ

ಸಿರಿಗೆರೆ: ದೀರ್ಘಾವಧಿ ಬೆಳೆಗಳಿಗೆ ಹೆಚ್ಚಿನ ಬಂಡವಾಳ ತೊಡಗಿಸಿಕೊಂಡರೂ ಕೆಲವು ರೈತರು ನಷ್ಟ ಅನುಭವಿಸುವುದನ್ನು ನಾವು ನೋಡಿದ್ದೇವೆ. ಆದರೆ ಸಮೀಪದ ಸೀಗೆಹಳ್ಳಿ ಗ್ರಾಮದ ಬಸಪ್ಪ ಅವರ ಮಗ ಚನ್ನಬಸಪ್ಪ ಕಡಿಮೆ ಬಂಡವಾಳದಲ್ಲೇ ಲಾಭದಾಯಕ ಬೆಳೆ ತೆಗೆದು ಮಾದರಿಯಾಗಿದ್ದಾರೆ.

‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂದು ಸ್ವಾವಲಂಬಿ ಜೀವನ ನಡೆಸುತ್ತಾ ಬಂದಿರುವ ಚನ್ನಬಸಪ್ಪ 65ರ ಹರೆಯದಲ್ಲೂ ಜಮೀನಿನಲ್ಲಿ ಕ್ರಿಯಾಶೀಲತೆಯಿಂದ ದುಡಿಯುತ್ತಿದ್ದಾರೆ. ಗ್ರಾಮದಲ್ಲಿ ‘ಶ್ರಮದ ಕೃಷಿಕ’ ಹೆಗ್ಗಳಿಕೆಯೂ ಇದೆ. ಕಡಿಮೆ ಬಂಡವಾಳ ತೊಡಗಿಸಿ ಕಡಿಮೆ ಅವಧಿಯಲ್ಲಿ ಫಲ ನೀಡುವ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಹಿಂದೆ ಅವರ ಜಮೀನಿನಲ್ಲಿ 220 ಕ್ವಿಂಟಲ್ ಬಳ್ಳಿ ಬೀನ್ಸ್ ಬೆಳೆದು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿದ್ದರು.

ಕೋಸು ಬೆಳೆಯುವುದಕ್ಕಿಂತ ಮುಂಚೆ ಬದನೆ ಬೆಳೆದು ಕೈಸುಟ್ಟುಕೊಂಡರೂ ಇವರು ಧೃತಿಗೆಡಲಿಲ್ಲ. ಗುಜರಾತ್ ಮಾದರಿಯನ್ನು ಅನುಸರಿಸಿ ಟೊಮೊಟೊ, ನಾಟಿ ಬೀನ್ಸ್, ಸೌತೆಕಾಯಿ ಬೆಳೆದು ಲಾಭ ಕಂಡುಕೊಂಡರು. ಒಮ್ಮೆ ಬೆಳೆದ ಬೆಳೆಯನ್ನು ಪುನರಾವರ್ತನೆ ಮಾಡದೇ ಚನ್ನಬಸಪ್ಪ ಬಹುಬೆಳೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ನವೆಂಬರ್‌ ತಿಂಗಳಲ್ಲಿ ಕಪ್ಪು ಮಿಶ್ರಿತ ಮಣ್ಣಿನ ಜಮೀನನ್ನು ಮೃದುವಾಗಿ ಇರುವಂತೆ ಹದಮಾಡಿಕೊಂಡು ಸಮೀಪದ ಆನಗೋಡು ಫಾರಂನಲ್ಲಿ ‘ಸೈಂಟ್’ ತಳಿಯ ಕೋಸು ಸಸಿ ತಂದು ನಾಟಿ ಮಾಡಿದ್ದೇನೆ. ಸಸಿ ನಾಟಿ ಮಾಡಲು ಅಡಿಗೊಂದರಂತೆ ಸಾಲು ಮಾಡಿ, ಗಿಡದಿಂದ ಗಿಡಕ್ಕೆ ಎಂಟು 8ರಿಂದ 10 ಇಂಚಿನವರೆಗೆ ನಾಟಿ ಮಾಡಿದೆ. ಎಕರೆಗೆ 40 ಸಾವಿರದಂತೆ ಒಂದು ಕಾಲು ಎಕರೆಗೆ 50 ಸಾವಿರ ಸಸಿ ನಾಟಿ ಮಾಡಿದ್ದೇನೆ. ಒಂದು ಸಸಿಗೆ 50 ಪೈಸೆಯಂತೆ ₹ 28 ಸಾವಿರ,ಟ್ರ್ಯಾಕ್ಟರ್ ಬಾಡಿಗೆ ಕೂಲಿ ವೆಚ್ಚ, ಸಸಿ ನಾಟಿ, ಕಳೆ ತೆಗೆಯುವ ಖರ್ಚು ಹಾಗೂ ಗೊಬ್ಬರದ ಒಟ್ಟು ಖರ್ಚು ಸೇರಿ ₹ 1.10 ಲಕ್ಷ ಖರ್ಚಾಗಿದೆ’ ಎಂದು ಚನ್ನಬಸಪ್ಪ ವಿವರಿಸಿದರು.

‘ನಾಟಿ ಮಾಡಿದ ಸಸಿ 8ರಿಂದ 10 ದಿನದೊಳಗೆ ಮೊದಲ ಬಾರಿಗೆ ಅಸಿಟೋಮೋ ಫ್ರೈಡ್ ಹಾಗೂ ಕ್ಲೋರೊ ಪ್ಯಾರಿಪಾಸ್ ಔಷಧ ಸಿಂಪಡಣೆ ಮಾಡಿದ್ದೇನೆ. 10 ದಿನಗಳ ನಂತರ ಎರಡು ಮತ್ತು ಮೂರನೇ ಬಾರಿಗೆ ಬೆನಿಮಿಯಾ ಮತ್ತು ಅಸಿಪೇಟ್ ಔಷಧ ಸಿಂಡಿಸಿದ್ದೇನೆ. 8.21.21 ನಾಲ್ಕು ಪ್ಯಾಕೆಟ್ ಸಾವಯವ ಅಂಶ ಹೆಚ್ಚು ಇರುವ ಗೊಬ್ಬರ ಮತ್ತು ನ್ಯೂಟ್ರೋ ಮ್ಯಾಕ್ಸ್ ಬಳಸಿದ್ದರಿಂದ ಉತ್ತಮ ಫಸಲು ಬಂದಿದೆ. ಒಂದು ಕೋಸು ಒಂದು ಕಾಲು ಕೆಜಿಯಿಂದ ಒಂದೂವರೆ ಕೆಜಿ ತೂಕ ಇವೆ’ ಎಂದು ಖುಷಿಯಿಂದ ಹೇಳಿದರು.

‘ನೀರಿಗಾಗಿ ಎರಡು ಕೊಳವೆ ಬಾವಿ ಕೊರೆಸಿದ್ದೇನೆ. ಹನಿ ನೀರಾವರಿ ಪದ್ಧತಿಯಿಂದ ನೀರುಣಿಸಿದ್ದೇನೆ. ಇದು ನೀರಿನ ಮಿತ ಬಳಕೆ ಸಹಕಾರಿಯಾಗಿದೆ. ಒಂದು ಕಾಲು ಎಕರೆ ಜಮೀನಿನಲ್ಲಿ 30 ಟನ್‍ ಕೋಸು ಬೆಳೆದಿದ್ದು, ಬೆಳಗಾವಿಯ ಖರೀದಾರರಿಗೆ ಒಂದು ಕೆ.ಜಿಗೆ
₹ 24ರಂತೆ ಮಾರಾಟ ಮಾಡಿದ್ದೇನೆ. ಖರ್ಚು ಕಳೆದು ₹ 4 ಲಕ್ಷ ಲಾಭ ಪಡೆದಿದ್ದೇನೆ’ ಎಂದು ಚನ್ನಬಸಪ್ಪ ಹೇಳುತ್ತಾರೆ.

ಕೀಟ ಬಾಧೆ ತಡೆಗೆ ಎರಡು ಮಾದರಿ
ಚನ್ನಬಸಪ್ಪ ಅವರು ಕೀಟಗಳ ಬಾಧೆ ತಡೆಯಲು ಎರಡು ಮಾದರಿಗಳನ್ನು ಅಳವಡಿಸಿದ್ದಾರೆ. ಮೊದಲನೆಯದು ಬೆಳಕಿನ ಸೆಳೆತ. ಎರಡನೆಯದು ಗಮ್ ಪೇಸ್ಟ್‌ ಮಾದರಿ.

ವಿದ್ಯುತ್ ಬಲ್ಬ್ ಸಹಾಯದಿಂದ ಬೆಳೆಗೆ ಬೆಳಕು ಹರಿಸಿದಾಗ ಕೀಟಗಳು ದಾಳಿ ಮಾಡಲು ಬರುತ್ತವೆ.
ಆ ವೇಳೆ ಬೆಳಕಿನ ಸೆಳೆತಕ್ಕೆ ಒಳಗಾಗಿ ಬಲೆಗೆ ಬೀಳುವಂತೆ ಪ್ಲಾಸ್ಟಿಕ್ ಬಾಣಲೆಯಲ್ಲಿ ನೀರನ್ನು ಇಟ್ಟಿದ್ದು, ಬೆಳಕಿನಲ್ಲಿ ಹಾರಾಡಿದ ಕೀಟ ಕೊನೆಗೆ ನೀರಿನಲ್ಲಿ ಬಿದ್ದು ಸಾಯುವುದು ಒಂದು ವಿಧಾನ. ಈ ವಿಧಾನದಲ್ಲಿ ಎರಡು ದಿನಗಳಿಗೊಮ್ಮೆ ಬದಲಾಯಿಸುತ್ತೇನೆ. ಜಮೀನಿನ ಐದು ಕಡೆ ಇದನ್ನು ಅಳವಡಿಸಲಾಗಿದೆ.

ಮಿಡತೆಯಂತಹ ಕೀಟಗಳನ್ನು ತಡೆಯಲು ಶೇ 80ರಷ್ಟು ಜೈವಿಕ ವಿಧಾನದ ಹಳದಿ ಮತ್ತು ನೀಲಿ ಗಮ್ ಶೀಟ್‌ಗಳನ್ನು ಅಳವಡಿಸುವುದು ಮತ್ತೊಂದು ವಿಧಾನ. ಈ ವಿಧಾನದಲ್ಲಿ ಸಂಜೆ ಹಾಗೂ ಬೆಳಿಗ್ಗೆ ಹಾರಾಡುವ ಕೀಟಗಳು ಶೀಟ್‌ಗೆ ತಾಗಿದಾಗ ಗಮ್ ಫ್ಲಾಗ್‌ಗೆ ಅಂಟಿಕೊಂಡು ಅಲ್ಲಿಯೇ ಒದ್ದಾಡಿ ಸಾಯುತ್ತವೆ. ಮಳೆ ಬಂದರೂ ಗಮ್ ಫೇಸ್ಟ್ ಹಾಳಾಗುವುದಿಲ್ಲ.

‘ಈ ಬೆಳೆಗೆ ಕೀಟಗಳ ಬಾಧೆ ಹೆಚ್ಚು ಇದ್ದು ಪಿ.ಎಸ್. ಬಸವರಾಜು ಮತ್ತು ಲಕ್ಷ್ಮಣ ಅವರ ಮಾರ್ಗದರ್ಶನದಲ್ಲಿ ಭರಮಸಾಗರದ ಶಿವನಾರದಮುನಿ ಆಗ್ರೊ ಏಜೆನ್ಸಿಯಿಂದ ಕೀಟದ ಬಲೆಗಳನ್ನು ಜಮೀನಿನಲ್ಲಿ ಹೊಸದಾಗಿ ಅಳವಡಿಸಿದ್ದೇನೆ’
ಎಂದು ಚನ್ನಬಸಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT