ಬುಧವಾರ, ನವೆಂಬರ್ 25, 2020
21 °C

ಚಿತ್ರದುರ್ಗ: ರೈತರ ಅರಿವು ವಿಸ್ತರಿಸಿದ ಕೃಷಿ ಮತ್ತು ಕೈಗಾರಿಕಾ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ. ಉತ್ಸವಕ್ಕೆ ಬರುವವರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಉತ್ಸವದ ಅಂಗವಾಗಿ ಆರಂಭವಾದ ಕೃಷಿ ಮತ್ತು ಕೈಗಾರಿಕಾ ಮೇಳ ಕಣ್ಮನ ಸೆಳೆಯುತ್ತಿದೆ.

ಕೃಷಿ, ತೋಟಗಾರಿಕೆ, ನೀರಾವರಿ, ರೇಷ್ಮೆ ಇಲಾಖೆ ಮಳಿಗೆಗಳು ಇಲ್ಲಿವೆ. ಜಿಲ್ಲಾ ಪಂಚಾಯಿತಿ ಯೋಜನೆಗಳ ಮಾಹಿತಿ ಇಲ್ಲಿ ಬಿತ್ತರವಾಗಿದೆ. ಕೃಷಿ ಸಂಬಂಧಿತ ಯಂತ್ರೋಪಕರಣಗಳು ಒಂದೆಡೆ ಸಿಗುತ್ತಿವೆ.

ಡ್ರೋನ್ ಬಳಸಿ ಬೆಳೆಗೆ ಕೀಟನಾಶಕ ಸಿಂಪಡಿಸುವ ಪ್ರಾತ್ಯಕ್ಷಿಕೆಯನ್ನು ಇಲ್ಲಿ ಕಾಣಬಹುದು. ಶೇಂಗಾ ಕೀಳುವ ಯಂತ್ರದ ಸುತ್ತ ರೈತರು ನೆರೆದಿದ್ದರು. ಹಸಿ ಮೆಕ್ಕೆಜೋಳವನ್ನು ಹಿಂಡಿಯಾಗಿ ಪರಿವರ್ತಿಸುವ ಯಂತ್ರ ವಿಸ್ಮಯ ಮೂಡಿಸಿತು. ಮೆಕ್ಕೆಜೋಳವನ್ನು ಜಾನುವಾರು ಆಹಾರವಾಗಿ ಪರಿವರ್ತಿಸಿ ಎಕರೆಗೆ ₹ 40 ಸಾವಿರ ಸಂಪಾದಿಸುವ ಬಗೆಯನ್ನು ರೈತರಿಗೆ ತಿಳಿಸಲಾಯಿತು.

ಭದ್ರಾ ಮೇಲ್ದಂಡೆ ಯೋಜನೆಯ ಮಳಿಗೆಯಲ್ಲಿ ನೀರಾವರಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇದೆ. ನೀರು ಎಲ್ಲಿಂದ ಬರುತ್ತದೆ, ಹೇಗೆ ಕಾಲುವೆಯಲ್ಲಿ ಹರಿಯುತ್ತದೆ ಎಂಬ ವಿವರ ಇಲ್ಲಿ ಲಭ್ಯವಾಗುತ್ತದೆ.

65ಕ್ಕೂ ಹೆಚ್ಚು ಜೋಡೆತ್ತು: ಜೋಡೆತ್ತು ಪ್ರದರ್ಶನ ಆಕರ್ಷಕವಾಗಿತ್ತು. ವಿವಿಧ ಜಿಲ್ಲೆಗಳ ವಿವಿಧ ತಳಿಗಳ 65ಕ್ಕೂ ಹೆಚ್ಚು ಜೋಡೆತ್ತುಗಳು ಭಾಗವಹಿಸಿದ್ದವು. ಹಳ್ಳಿಕೇರಿ ತಳಿ, ಸಿಂಧಿ ತಳಿ, ನಾಟಿ ತಳಿ, ಗೀರ್ ತಳಿ, ಎಮ್ಮೆ ಸಿಂಧಿ ತಳಿ, ಸಿಂಧಿ ಹಸುಗಳು ಹಾಗೂ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಒಂಟೆ, ಆನೆ ಮತ್ತು ಕುದುರೆಗಳು ಪ್ರದರ್ಶನಗೊಂಡವು.

ಕಸಾಯಿಖಾನೆಗೆ ಸಾಗಣೆ ಆಗುತ್ತಿದ್ದ ಜಾನುವಾರನ್ನು ರಕ್ಷಿಸಿ ಪ್ರದರ್ಶನಕ್ಕೆ ತರಲಾಗಿತ್ತು. ದಾವಣಗೆರೆ ಹೆಬ್ಬಾಳ ಮಠದಲ್ಲಿ ಆಶ್ರಯ ಪಡೆದ ಕಿಲಾರಿ ತಳಿಯ ಎತ್ತುಗಳು ಇಲ್ಲಿದ್ದವು.

ಜೋಡೆತ್ತು ಸ್ಪರ್ಧೆ ಫಲಿತಾಂಶ: ಹಿರಿಯೂರಿನ ರಾಘವೇಂದ್ರ ನಾಯಕ (‍‍ಪ್ರಥಮ), ಅಡವಿಗೊಲ್ಲರಹಳ್ಳಿಯ ಸಿದ್ಧಪ್ಪ (ದ್ವಿತೀಯ), ಗುಂತಕೋಲಮ್ಮನಹಳ್ಳಿಯ ವೆಂಕಟರೆಡ್ಡಿ (ತೃತೀಯ) ಅವರ ಎತ್ತುಗಳು ಸ್ಥಾನ ಗಳಿಸಿದವು. ಪ್ರಥಮ ಬಹುಮಾನ ₹ 10 ಸಾವಿರ ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನ ₹ 7 ಸಾವಿರ ಹಾಗೂ ಪಾರಿತೋಷಕ, ತೃತೀಯ ಬಹುಮಾನ ₹ 5 ಸಾವಿರ ಹಾಗೂ ಪಾರಿತೋಷಕ ನೀಡಲಾಯಿತು.

ಗಮನ ಸೆಳೆದ ಕಲಾಕೃತಿ

ಎಸ್‍ಜೆಎಂ ಚಿತ್ರಕಲಾ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ 200 ಕ್ಕೂ ಹೆಚ್ಚು ಕಲಾಕೃತಿಗಳು ಶನಿವಾರ ಪ್ರದರ್ಶನಗೊಂಡವು.

ರಾಧಾ-ಕೃಷ್ಣ, ಪ್ರಕೃತಿ ಸಂರಕ್ಷಣೆ, ಬರಗಾಲದ ತೀವ್ರತೆ ಬಿಂಬಿಸುವ ಕಲಾಕೃತಿಗಳು ಗಮನ ಸೆಳೆದವು. ಮಾನವ ಮೊಬೈಲ್ ಗೀಳಿಗೆ ಒಳಗಾಗಿರುವ ಕಲಾಕೃತಿ, ಮಹಿಳೆ ಜೀವನ ಕುರಿತಾದ ಸಾಂಪ್ರದಾಯಿಕ ಚಿತ್ರ ಕಲಾಕೃತಿಗಳು ಇಲ್ಲಿದ್ದವು.

‘ಕೊರೊನಾ ಸೋಂಕಿನ ಕಾರಣಕ್ಕೆ ವಿದ್ಯಾರ್ಥಿಗಳಿಗೆ ವಿಷಯ ನೀಡಿ ಆನ್‍ಲೈನ್ ಮೂಲಕ ಮಾರ್ಗದರ್ಶನ ನೀಡಲಾಗಿತ್ತು. ಕಲಾಕೃತಿ ರಚಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾಗಿತ್ತು’ ಎಂದು ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಕಣ್ಮೀಶ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು