ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಂರಕ್ಷಣೆಯಲ್ಲಿ ಅಡಗಿದೆ ಅಭಿವೃದ್ಧಿ

ಯುನಿಸೆಫ್‌ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್‌ ಅಭಿಮತ
Last Updated 6 ಜುಲೈ 2018, 12:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಕ್ಕಳ ಸಂರಕ್ಷಣೆ ಹಾಗೂ ಬಾಲಕಿಯರ ಸಬಲೀಕರಣದಲ್ಲಿ ವಿಫಲರಾದ ಪರಿಣಾಮ ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದ್ದೇವೆ ಎಂದು ಯುನಿಸೆಫ್‌ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್‌ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮಕ್ಕಳ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮತ್ತು ಜವಾಬ್ದಾರಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ದೇಶದ ಒಟ್ಟು ಜನಸಂಖ್ಯೆಯಲ್ಲಿ 18 ವರ್ಷದ ಒಳಗಿನ ಮಕ್ಕಳ ಪ್ರಮಾಣ ಶೇ 41ರಷ್ಟಿದೆ. ಈ ಮಕ್ಕಳು ಬೆಳೆಯುವ ರೀತಿಯೂ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. 2015ರಲ್ಲಿ ನಡೆದ ಗ್ರಾಮ ಪಂಚಾಯಿತಿವಾರು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಚಿತ್ರದುರ್ಗ ಜಿಲ್ಲೆ ಹಿಂದುಳಿದಿರುವುದು ಬೆಳಕಿಗೆ ಬಂದಿದೆ. ಸೂಚ್ಯಂಕದಲ್ಲಿ ಶೇ 50ಕ್ಕಿಂತ ಮೇಲೇರಲು ಸಾಧ್ಯವಾಗದಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯುದ್ಧ ಹಾಗೂ ಪ್ರಕೃತಿ ವಿಕೋಪಕ್ಕೆ ಬಲಿಯಾದವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಲೈಂಗಿಕ ದೌರ್ಜನ್ಯ ಸಂತ್ರಸ್ತರಲ್ಲಿ ಶೇ 32ರಷ್ಟು ಮಕ್ಕಳಿದ್ದಾರೆ. ಮಕ್ಕಳ ಸಂರಕ್ಷಣೆಯ ಉದ್ದೇಶದಿಂದ ವಿಶ್ವಸಂಸ್ಥೆ ರೂಪಿಸಿದ ಮಕ್ಕಳ ಒಡಂಬಡಿಕೆಗೆ ಭಾರತವೂ ಸಹಿ ಹಾಕಿದೆ. ಇದರಿಂದ 22 ಕಾನೂನು ಮಕ್ಕಳ ಸ್ನೇಹಿಯಾಗಿ ತಿದ್ದುಪಡಿಗೊಂಡಿವೆ’ ಎಂದು ವಿವರಿಸಿದರು.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಜಾರಿಯಾದ ಬಳಿಕ ಬೆಳಕಿಗೆ ಬರುವ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದ ಜೈಲುಗಳಲ್ಲಿ ಪೋಕ್ಸೊ ಆರೋಪಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಉಡುಪು ಕಾರಣವಲ್ಲ’ ಎಂದರು.

‘ಭಿಕ್ಷಾಟನೆಗೆ ಮಕ್ಕಳನ್ನು ಬಿಡುವುದರ ಹಿಂದೆ ದೊಡ್ಡ ಮಾಫಿಯಾದ ಕೈವಾಡವಿದೆ. ಗ್ರಾಮೀಣ ಪ್ರದೇಶದಲ್ಲಿ ಮಾನವ ಕಳ್ಳ ಸಾಗಣೆ ಹೆಚ್ಚಾಗುತ್ತಿದೆ. ಕಳ್ಳಸಾಗಣೆ ತಡೆಯುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಕಾವಲು ಸಮಿತಿ ರಚಿಸಬೇಕು ಎಂಬ ನಿಯಮವಿದೆ. ಆದರೆ ಇದು ಪಾಲನೆ ಆಗುತ್ತಿಲ್ಲ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎನ್. ರವೀಂದ್ರ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್‌ ಬಾಬು, ಮಾಜಿ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಧನಂಜಯಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆರ್‌.ಪ್ರಭಾಕರ್‌,ಸದಸ್ಯ ಬಸವರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಸ್‌.ರಾಜಾನಾಯಕ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜೆ.ವೈಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT