ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ| ವಿವಿಧೆಡೆ ಹದ ಮಳೆ: ರೈತರ ಮೊಗದಲ್ಲಿ ಸಂತಸ

Published : 13 ಮೇ 2024, 15:51 IST
Last Updated : 13 ಮೇ 2024, 15:51 IST
ಫಾಲೋ ಮಾಡಿ
Comments

ಹೊಸದುರ್ಗ: ತಾಲ್ಲೂಕಿನಾದ್ಯಂತ ಒಂದೆರಡು ದಿನಗಳಿಂದ ಹದ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ.

ಭಾನುವಾರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೂ ನಿರಂತರವಾಗಿ ಮಳೆಯಾಗಿದ್ದರಿಂದ ಬಿರುಬಿಸಿಲಿನಿಂದ ಬಳಲಿದ್ದ ಇಳೆ ತಂಪಾಯಿತು.

ಮಳೆಯಿಲ್ಲದೆ ಕೊಳವೆಬಾವಿಗಳು ಬತ್ತಿ ಹೋಗಿದ್ದವು. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಮತ್ತೊಂದೆಡೆ ಅಡಿಕೆ, ತೆಂಗು ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದರು. 

‘ತಾಲ್ಲೂಕಿನ ವಿವಿಧೆಡೆ ಎರಡು ದಿನಗಳಿಂದ ಹದ ಮಳೆಯಾಗಿದ್ದು, ರೈತರಿಗೆ ತುಸು ನೆಮ್ಮದಿ ನೀಡಿದೆ. ಭೂಮಿಯನ್ನು ಉಳಲು ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಿದೆ. ಈ ವಾರದಲ್ಲಿ ಇನ್ನೊಂದು ಮಳೆಯಾಗುವ ನಿರೀಕ್ಷೆ ಇದ್ದು, ಬಿತ್ತನೆ ಕಾರ್ಯ ಆರಂಭವಾಗಲಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ ತಿಳಿಸಿದರು.

ಬಿತ್ತನೆಗೆ ಇನ್ನೂ ಹೆಚ್ಚಿನ ಮಳೆಯ ಅಗತ್ಯವಿದೆ. ಈ ವಾರದಲ್ಲಿ ಹದ ಮಳೆಯಾದರೆ ಹೆಸರು ಕಾಳು ಬಿತ್ತನೆ ಆರಂಭಿಸಲಾಗುವುದು. ದನಕರುಗಳಿಗೆ ಮೇವು ಬಿತ್ತನೆಗೂ ಅನುಕೂಲವಾಗುತ್ತದೆ. ಈ ಬಾರಿಯಾದರೂ ಉತ್ತಮ ಮಳೆಯಾದರೆ ಸಾಕು ಎಂದು ಮಳಲಿ ರೈತ ಹರೀಶ್ ಆಶಿಸಿದರು.

ಮಳೆಹಾನಿ: ಶುಕ್ರವಾರ ಸುರಿದ ಮಳೆಯಿಂದಾಗಿ ಹನುಮನಹಳ್ಳಿ, ಸಣ್ಣಕಿಟ್ಟದಹಳ್ಳಿ, ಕೆಂಕೆರೆ, ಲಕ್ಕಿಹಳ್ಳಿ, ನಾಗನಯ್ಯನಕಟ್ಟೆಯಲ್ಲಿ ಬಾಳೆ ಗಿಡಗಳು ನೆಲಕ್ಕುರುಳಿದ್ದು, ರೈತರಿಗೆ ನಷ್ಟವಾಗಿದೆ. ಭಾನುವಾರ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಮುತ್ತಾಗೊಂದಿ ಗ್ರಾಮದ ರೈತ ಭೈರಪ್ಪ ಅವರಿಗೆ ಸೇರಿದ 150 ಬಾಳೆ ಗಿಡಗಳು ನೆಲಕ್ಕುರುಳಿವೆ.

ಮಳೆ ವಿವರ: ಭಾನುವಾರ ರಾತ್ರಿ ಹೊಸದುರ್ಗ 6.4 ಮಿ.ಮೀ, ಬಾಗೂರು 10.2, ಮಾಡದಕೆರೆ 17.2, ಮತ್ತೋಡು 14.2 ಹಾಗೂ ಶ್ರೀರಾಂಪುರ 35 ಮಿ.ಮೀ ಮಳೆಯಾಗಿದೆ ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ತಿಳಿಸಿದ್ದಾರೆ.

ಬಿ.ಜಿ.ಕೆರೆ ಸುತ್ತಮುತ್ತ ಉತ್ತಮ ಮಳೆ ಮೊಳಕಾಲ್ಮುರು: ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. ತಾಲ್ಲೂಕು ಕಚೇರಿ ಮೂಲಗಳ ಪ್ರಕಾರ ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 23 ಮಿ.ಮೀ. ರಾಯಾಪುರ ಕೇಂದ್ರದಲ್ಲಿ 15.6 ಮಿ.ಮೀ. ಬಿ.ಜಿ.ಕೆರೆ ಕೇಂದ್ರದಲ್ಲಿ 37 ಮಿ.ಮೀ. ರಾಂಪುರ ಕೇಂದ್ರದಲ್ಲಿ 6 ಮಿ.ಮೀ. ಹಾಗೂ ದೇವಸಮುದ್ರ ಮಳೆಮಾಪನ ಕೇಂದ್ರದಲ್ಲಿ 2 ಮಿ.ಮೀ. ಮಳೆ ದಾಖಲಾಗಿದೆ. ಸಂಜೆ 7 ಗಂಟೆ ಸುಮಾರಿಗೆ ಗುಡುಗು ಸಿಡಿಲು ಸಹಿತ ಆರಂಭವಾದ ಮಳೆ ಒಂದು ಗಂಟೆ ಕಾಲ ಸುರಿಯಿತು. ಬಿ.ಜಿ.ಕೆರೆ ಮೊಗಲಹಳ್ಳಿ ಕೊಂಡ್ಲಹಳ್ಲಿ ಮಾರಮ್ಮನಹಳ್ಳಿ ನೇರ್ಲಹಳ್ಳಿ ಮರ್ಲಹಳ್ಳಿ ಸುತ್ತಮುತ್ತ  ರಾತ್ರಿ 12 ಗಂಟೆವರೆಗೂ ಮಳೆ ಸುರಿಯಿತು. ಮುಂಗಾರು ಬಿತ್ತನೆಗೆ ಹೊಲವನ್ನು ಸಿದ್ಧಪಡಿಸಿಕೊಳ್ಳಲು ಇದರಿಂದ ಅನುಕೂಲವಾಗಿದೆ. ಆದರೆ ಕುಡಿಯುವ ನೀರು ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಿಲ್ಲ. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರು ಮಳೆಯಿಂದ ತುಸು ನಿರಾಳವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT