ಹೊಳಲ್ಕೆರೆ: ಹನಿ ನೀರಾವರಿ ಸಹಾಯಧನವನ್ನು ಶೇ 90ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ತೋಟಗಾರಿಕೆ ಇಲಾಖೆಯ ಅಧಿಕಾರಿ ಮಧು ಅವರಿಗೆ ಮನವಿ ಸಲ್ಲಿಸಿದರು.
ಹನಿ ನೀರಾವರಿ ಸೌಲಭ್ಯ ಪಡೆಯುವ ರೈತರಿಗೆ ಇದುವರೆಗೆ ಶೇ 75 ಸಹಾಯಧನ ನೀಡಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರವು 5 ಗ್ಯಾರಂಟಿಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ಹನಿ ನೀರಾವರಿ ಸಹಾಯಧನವನ್ನು ಶೇ 55ಕ್ಕೆ ಇಳಿಸಿದೆ. ಇದರಿಂದ ರೈತರಿಗೆ ಅನ್ಯಾಯ ಆಗಿದ್ದು, ತೋಟಗಳಿಗೆ ಹನಿ ನೀರಾವರಿ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸುವ ಲ್ಯಾಟ್ರಲ್, ಪೈಪ್ ಸೇರಿದಂತೆ ಎಲ್ಲಾ ಪರಿಕರಗಳ ದರ ಹೆಚ್ಚಾಗಿದೆ. ಕೂಲಿಯ ದರವೂ ಹೆಚ್ಚಾಗಿದ್ದು, ರೈತರು ಲಕ್ಷಾಂತರ ರೂ ಖರ್ಚು ಮಾಡಿದರೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಆಗುತ್ತಿಲ್ಲ ಎಂದು ರೈತರು ದೂರಿದರು.
ಸರ್ಕಾರ ನಮ್ಮ ತಾಲ್ಲೂಕಿನಲ್ಲಿ ಕೆಲವು ಬೆಳೆಗಳಿಗೆ ಮಾತ್ರ ಹನಿ ನೀರಾವರಿಗೆ ಸಹಾಯಧನ ನೀಡುತ್ತಿದೆ. ಅಡಿಕೆ ನಮ್ಮ ತಾಲ್ಲೂಕಿನ ಪ್ರಮುಖ ಬೆಳೆಯಾಗಿದ್ದರೂ, ಸಹಾಯಧನ ನೀಡುತ್ತಿಲ್ಲ. ಪಕ್ಕದ ಚನ್ನಗಿರಿ ತಾಲ್ಲೂಕಿನಲ್ಲಿ ಅಡಿಕೆಗೆ ಹನಿ ನೀರಾವರಿ ಸಹಾಯಧನ ನೀಡುತ್ತಿದ್ದು, ನಮ್ಮ ತಾಲ್ಲೂಕಿನ ರೈತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನಮ್ಮ ರೈತರಿಗೂ ಈ ಸೌಲಭ್ಯ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ರೈತಸಂಘದ ಪಟ್ಟಣ ಶಾಖೆಯ ಅಧ್ಯಕ್ಷ ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಜಯ್, ಅಣ್ಣಪ್ಪ, ಶಿವಮೂರ್ತಿ, ಶ್ರೀಧರ್, ಪ್ರಭು, ಮಲ್ಲಿಕಾರ್ಜುನ್, ರಾಜೇಶ್, ಹಾಲೇಶ್, ವೃಷಭೇಂದ್ರಪ್ಪ, ಸಂಜೀವಪ್ಪ, ದುಕ್ಕಡ್ಲೆ ರವಿ, ದೇವೇಂದ್ರಪ್ಪ, ಕೆರೆಗುಂಡಿ ನಾಗರಾಜು ಇದ್ದರು.