ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಮೆರವಣಿಗೆಗೆ ಮೆರುಗು ನೀಡಿದ ಜನಪದ ಕಲಾವಿದರು * ಕವಿಗಳ ಭಾವಚಿತ್ರದೊಂದಿಗೆ ಸಂಭ್ರಮಿಸಿದ ವಿದ್ಯಾರ್ಥಿಗಳು
Last Updated 29 ಜೂನ್ 2019, 12:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋಟೆನಾಡಿನಲ್ಲಿ ನಡೆಯುತ್ತಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ಸಮ್ಮೇಳನಾಧ್ಯಕ್ಷ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರ ಮೆರವಣಿಗೆ ಪ್ರಮುಖ ರಸ್ತೆ ಮಾರ್ಗದಲ್ಲಿ ಸಂಚರಿಸಿತು.

ವಿಶೇಷವಾಗಿ ಸಿಂಗರಿಸಿದ್ದ ಬೆಳ್ಳಿ ವರ್ಣದ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರು ಆಸೀನರಾಗುತ್ತಿದ್ದಂತೆ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರು ಹೂವಿನ ಹಾರವನ್ನಾಕಿ ಗೌರವಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ಅಧ್ಯಕ್ಷರ ಕೈಗೆ ನಾಡಧ್ವಜ ನೀಡುವ ಮೂಲಕ ಸಾಂಪ್ರದಾಯಿಕ ಮೆರವಣಿಗೆಗೆ ಚಾಲನೆ ನೀಡಿದರು. ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಶುಭ ಕೋರಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಮೆರವಣಿಗೆ ಗಾಂಧಿ ವೃತ್ತ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ, ಅಂಬೇಡ್ಕರ್ ವೃತ್ತ,ಮದಕರಿನಾಯಕ ವೃತ್ತ ಮಾರ್ಗವಾಗಿ ಸಂಚರಿಸಿ ಸಭಾ ಕಾರ್ಯಕ್ರಮ ನಡೆಯುವ ಸ್ಥಳವಾದ ತರಾಸು ರಂಗಮಂದಿರ ತಲುಪಿತು. ಅದಕ್ಕೂ ಮುನ್ನ ರಸ್ತೆ ಮಾರ್ಗದಲ್ಲಿ ಮೆರವಣಿಗೆ ಸಾಗುವಾಗ ಡಾ.ಬಿ.ಆರ್.ಅಂಬೇಡ್ಕರ್,ಮದಕರಿನಾಯಕರ ಪ್ರತಿಮೆಗೆ ಸಮ್ಮೇಳನಾಧ್ಯಕ್ಷ ಮೀರಾಸಾಬಿಹಳ್ಳಿ ಶಿವಣ್ಣ ಅವರು ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಕೋಲಾಟ, ಕಹಳೆ, ಉರುಮೆ, ತಮಟೆ ಹಾಗೂ ಡೊಳ್ಳು ಕುಣಿತ ಸೇರಿ ಇತರೆ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಕನ್ನಡ ಬಾವುಟದ ಜತೆಗೆ 100 ಕನ್ನಡದ ಕವಿಗಳ ಭಾವಚಿತ್ರಗಳನ್ನಿಡಿದು ರಸ್ತೆ ಮಾರ್ಗಗಳಲ್ಲಿ ಸಂಭ್ರಮಿಸಿದರು.

ಕನ್ನಡ ಧ್ವಜದ ಶಾಲುಗಳನ್ನು ಧರಿಸಿದ ಬಹುತೇಕರು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯು ಸಾಗಿದ ಕೆಲ ಮಾರ್ಗಗಳಲ್ಲಿ ಜನರತ್ತ ಸಮ್ಮೇಳನಾಧ್ಯಕ್ಷರು ಕೈಬೀಸಿ ಹರ್ಷ ವ್ಯಕ್ತಪಡಿಸಿದರು. ರಂಗಮಂದಿರದ ಸಮೀಪಕ್ಕೆ ಮೆರವಣಿಗೆ ಬಂದಾಗ ಕೆಲವರು ಸಮ್ಮೇಳನಾಧ್ಯಕ್ಷರ ಜೊತೆ ಸೆಲ್ಫಿ ತೆಗೆದುಕೊಂಡರು.

ಸಮ್ಮೇಳನಾಧ್ಯಕ್ಷರು ಆಸೀನರಾಗಿದ್ದ ರಥದಲ್ಲಿ ಅವರೊಂದಿಗೆ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಇದ್ದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅನೇಕರು ಸಾಥ್ ನೀಡಿದರು.

ಮೆರವಣಿಗೆಯಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್.ದಾಸೇಗೌಡ, ಸಾಹಿತಿಗಳಾದ ಎಸ್.ಆರ್.ಗುರುನಾಥ್, ಶರೀಫಾಬಿ, ಮೋಕ್ಷ ರುದ್ರಸ್ವಾಮಿ ಸೇರಿ ಪರಿಷತ್‌ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT