ಚಿತ್ರದುರ್ಗ: ನಗರದಲ್ಲಿ ₹ 90 ಕೋಟಿ ವೆಚ್ಚದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಒಂದು ವರ್ಷದೊಳಗೆ ಬಸ್ ನಿಲ್ದಾಣ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಚಿತ್ರದುರ್ಗ ನಗರದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣದ ಶಂಕುಸ್ಥಾಪನಾ ಸಮಾರಂಭ ಹಾಗೂ ವಿನೂತನ ವಿದ್ಯುತ್ ಚಾಲಿತ ಬಸ್, ಅಂಬಾರಿ ಉತ್ಸವ್ ಸ್ಲೀಪರ್ ಬಸ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಹಳ್ಳಿಯಿಂದ ನಗರಕ್ಕೆ ಬರುವ ಕಾರ್ಮಿಕರಿಗೆ ಹಾಗೂ ನೌಕರರಿಗೆ ಇನ್ನೂ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಆರು ಎಕರೆ ವಿಸ್ತೀರ್ಣದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ₹ 45 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಒಟ್ಟು ₹ 90 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವುದು’ ಎಂದರು.
‘ಕೋವಿಡ್ ಸಂದರ್ಭದಲ್ಲಿ ಸಾವಿರಾರೂ ಕೋಟಿ ರೂಪಾಯಿ ನಷ್ಟ ಉಂಟಾದರೂ ನಾಲ್ಕು ವರ್ಷಗಳ ಹಿಂದೆ ನಿಗದಿಪಡಿಸಿದ ಬಸ್ ದರವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ರಾಜ್ಯಾದ್ಯಂತ ವಿನೂತನ ಮಾದರಿಯ ವಿದ್ಯುತ್ ಚಾಲಿತ 350 ಬಸ್ ಹಾಗೂ 650ಕ್ಕೂ ಹೆಚ್ಚಿನ ಹೊಸ ಬಸ್‍ಗಳನ್ನು ಖರೀದಿ ಮಾಡಲಾಗಿದೆ. ಸಂಸ್ಥೆ ಕಷ್ಟದಲ್ಲಿದ್ದರೂ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಗೆ ಅವಕಾಶ ಮಾಡಿಕೊಡಲಾಗುತ್ತಿದೆ’ ಎಂದು ಹೇಳಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ‘ನಗರದಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿವೆ. ಇದರಿಂದ ಹೈಟೆಕ್ ಬಸ್ ನಿಲ್ದಾಣದ ಅವಶ್ಯಕತೆ ಇತ್ತು. ಈ ಬಸ್ ನಿಲ್ದಾಣದಿಂದ ಬೆಂಗಳೂರು, ಹೊಸಪೇಟೆ, ಬಳ್ಳಾರಿ, ಚಳ್ಳಕೆರೆ ಕಡೆಯಿಂದ ಬರುವ ಬಸ್‍ಗಳಿಗೆ ಅನುಕೂಲವಾಗಲಿದೆ. ನೂತನ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣದಿಂದ ಸಾರಿಗೆ ಸಂಸ್ಥೆಗೆ ಹೆಚ್ಚು ಆದಾಯ ಬರಲಿದೆ’ ಎಂದು ಅಭಿಪ್ರಾಯಪಟ್ಟರು.
‘ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಶ್ರಮದ ಫಲವಾಗಿ ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಪರ ನಿಲುವಿನಿಂದಾಗಿ ಭಾರತ ವಿದೇಶದಲ್ಲಿ ಗೌರವಯುತ ಸ್ಥಾನ ಪಡೆದುಕೊಂಡಿದೆ. ಅಭಿವೃದ್ಧಿ ಪಥದಲ್ಲಿ ಭಾರತ ಮುಂಚೂಣಿಯಲ್ಲಿದೆ’
ಎಂದರು.
ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ನಗರಸಭೆ ಸದಸ್ಯೆ ತಾರಕೇಶ್ವರಿ, ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ನಿರ್ದೇಶಕ ಪಿ.ರುದ್ರೇಶ್, ಆರುಂಡಿ ನಾಗರಾಜ್, ರಾಜು ವಿಠಲಸ ಜರತಾರಘರ, ವೀರೇಂದ್ರ ಶೆಟ್ಟರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ್
ಇದ್ದರು.
.........
ಕಾಣದ ಫೋಟೊ: ತಿಪ್ಪಾರೆಡ್ಡಿ ಕಿಡಿ
ಕಾರ್ಯಕ್ರಮಕ್ಕೆ ಅಳವಡಿಸಿದ ಬ್ಯಾನರ್‌ನಲ್ಲಿ ತಮ್ಮ ಭಾವಚಿತ್ರ ಇರದಿರುವುದನ್ನು ಗಮನಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ್ ವಿರುದ್ಧ ಅಸಮಾಧಾನ ಹೊರಹಾಕಿದರು. ಮಧ್ಯಪ್ರವೇಶಿಸಿದ ಎಂ. ಚಂದ್ರಪ್ಪ ಅವರು ಸಿದ್ದೇಶ್ವರ ಅಮಾನತುಗೊಳಿಸುವಂತೆ ಮೌಖಿಕ ಸೂಚನೆ ನೀಡಿದರು.
‘ನಾನು ಸ್ಥಳೀಯ ಶಾಸಕ. ನನ್ನ ಭಾವಚಿತ್ರ ಅಳವಡಿಸದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಗಲಿಬಿಲಿಗೊಂಡ ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು. ಇದು ಶಾಸಕರನ್ನು ಇನ್ನಷ್ಟು ಕೆರಳಿಸಿತು. ಶಿಷ್ಟಾಚಾರ ಲೋಪದ ಪ್ರಮಾದಕ್ಕೆ ಎಂ. ಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.
............
ವೇದಿಕೆ ಇಳಿದ ‘ಕುಡಾ’ ಅಧ್ಯಕ್ಷ
ಶಿಷ್ಟಾಚಾರ ಪಾಲನೆಯಲ್ಲಿ ಲೋಪ ಉಂಟಾಗಿದ್ದರಿಂದ ಬೇಸರಗೊಂಡ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷ ಜಿ.ಟಿ. ಸುರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವೇದಿಕೆಯಿಂದ ಕೆಳಗೆ ಇಳಿದು ಕಾರ್ಯಕ್ರಮದಿಂದ ನಿರ್ಗಮಿಸಿದ ಪ್ರಸಂಗ ನಡೆಯಿತು.
ಶಂಕುಸ್ಥಾಪನೆಗೆ ‘ಕುಡಾ’ ಅಧ್ಯಕ್ಷರನ್ನು ಆಹ್ವಾನಿಸಿ, ನಾಮಫಲಕದಲ್ಲಿ ಹೆಸರು ಉಲ್ಲೇಖಿಸುವುದು ಶಿಷ್ಟಾಚಾರ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೂ ಅವರ ಹೆಸರು ಮಾತ್ರ ಶಿಲಾನ್ಯಾಸ ಫಲಕದಲ್ಲಿ ಇರಲಿಲ್ಲ. ಇದು ಸುರೇಶ್ ಅವರಲ್ಲಿ ಅಸಮಾಧಾನ ಮೂಡಿಸಿತು.
‘ಶಿಷ್ಟಾಚಾರ ಪಾಲನೆಯಲ್ಲಿ ಲೋಪ ಉಂಟಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವಮಾನಿಸಲಾಗಿದೆ’ ಎಂದು ಸುರೇಶ್ ಬೇಸರ ಹೊರಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.