ಚಿತ್ರದುರ್ಗ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲೆಯಾದ್ಯಂತ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಖಾಸಗಿ ಶಾಲೆಗಳಲ್ಲೇ ಮಕ್ಕಳನ್ನು ಓದಿಸಬೇಕೆಂಬ ಕನಸು ಕಟ್ಟಿಕೊಂಡಿರುವ ಪೋಷಕರು ಶುಲ್ಕ ಪಾವತಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ವರ್ಷವರ್ಷವೂ ಕುಸಿಯುತ್ತಲೇ ಇದೆ. ಫಲಿತಾಂಶ ಕುಸಿತದಲ್ಲಿ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲೂ ಇದೆ. ಆದರೂ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶುಲ್ಕ ಹೆಚ್ಚಳ ಮಾಡಿ ಪೋಷಕರ ಹೊರೆ ಹೆಚ್ಚಿಸುತ್ತಿವೆ. ಎಸ್.ಸಿ, ಎಸ್ಟಿ ಸಮುದಾಯಗಳು ಹೆಚ್ಚಿರುವ ಜಿಲ್ಲೆಯಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು ಏಕೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಯಾವುದೇ ಶಾಲೆ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ವಸೂಲಿ ಮಾಡಬಾರದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಕುರಿತಂತೆ ಪ್ರತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ತಾಲ್ಲೂಕುಗಳ ಖಾಸಗಿ ಶಾಲೆಗಳ ಪ್ರಾಂಶುಪಾಲರು, ಮುಖ್ಯಶಿಕ್ಷಕರ ಸಭೆ ಕರೆದು ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಪ್ರತಿ ವಿದ್ಯಾರ್ಥಿಯಿಂದ ಕಳೆದ ವರ್ಷಕ್ಕಿಂತಲೂ ಹೆಚ್ಚು ಶುಲ್ಕ ನಿಗದಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಿಯಮಾನುಸಾರ ಬೋಧನಾ ಶುಲ್ಕ, ಅವಧಿ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕ ಹೊರತುಪಡಿಸಿ ಬೇರೆ ಯಾವ ಶುಲ್ಕವನ್ನೂ ಪಡೆಯುವಂತಿಲ್ಲ. ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೆ ಮಾತ್ರ ವಿಶೇಷ ಅಭಿವೃದ್ಧಿ ಶುಲ್ಕ ಪಡೆಯಬೇಕು. ಆದರೆ, ವರ್ಷಪೂರ್ತಿ ಕಟ್ಟಡ ಕಾಮಗಾರಿ ತೋರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಅಭಿವೃದ್ಧಿ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಕೆಲವು ಪೋಷಕರು ಆರೋಪಿಸಿದ್ದಾರೆ.

‘ಖಾಸಗಿ ಶಾಲೆಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ನಡೆಯದಿದ್ದರೂ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಡೊನೇಷನ್ ವಸೂಲಿ ಮಾಡುತ್ತಿದ್ದಾರೆ. ಡೊನೇಷನ್ ಎನ್ನುವ ಬದಲಿಗೆ ಅದಕ್ಕೆ ಒಂದು ಬಾರಿಯ ಶುಲ್ಕ (ಒನ್ ಟೈಂ ಫೀ) ಎಂದು ನಾಮಕರಣ ಮಾಡಿದ್ದಾರೆ. ಆ ಮೂಲಕ ಬಡವರ ಶೋಷಣೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ. ಇದರ ವಿರುದ್ಧ ನಾವು ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ. ಜಿಲ್ಲಾಧಿಕಾರಿಗಳು ಹೆಚ್ಚುವರಿ ಶುಲ್ಕ ವಸೂಲಾತಿಗೆ ಕಡಿವಾಣ ಹಾಕಬೇಕು’ ಎಂದು ವಕೀಲ ಸಿ.ಮಂಜುನಾಥ್ ಒತ್ತಾಯಿಸಿದರು.

ಫಲಿತಾಂಶ ತಡೆದ ಶಾಲೆಗಳು:

ಕಳೆದ ಶೈಕ್ಷಣಿಕ ವರ್ಷ ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳಿಗೆ ಹಲವು ಶಾಲೆಗಳು ವಾರ್ಷಿಕ ಪರೀಕ್ಷೆ ವೇಳೆ ದಾಖಲಾತಿ ಚೀಟಿಯನ್ನೇ ನೀಡಿಲ್ಲ. ಪರೀಕ್ಷೆಗೆ ಅವಕಾಶ ನೀಡಿದರೂ ಹಾಲ್ ಟಿಕೆಟ್ ನೀಡಿಲ್ಲ. ನಂತರ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಇದರಿಂದ ಗೊಂದಲಕ್ಕೆ ಒಳಗಾಗಿರುವ ಹಲವು ಪೋಷಕರು ಡಿಡಿಪಿಐ, ಬಿಇಒ ಕಚೇರಿಗಳಿಗೆ ದೂರು ನೀಡಿದ್ದಾರೆ.

‘ಕೇವಲ ₹ 5,000 ಶುಲ್ಕ ಬಾಕಿ ಉಳಿಸಿಕೊಂಡಿದ್ದಕ್ಕೆ ನನ್ನ ಮಗನಿಗೆ ಪರೀಕ್ಷೆಯ ಹಾಲ್ ಟಿಕೆಟ್ ನೀಡಲಿಲ್ಲ. ಈಗ ಫಲಿತಾಂಶ ತಡೆಹಿಡಿದಿದ್ದು ಆತ ಮುಂದಿನ ತರಗತಿಗೆ ಹೋಗಿದ್ದಾನೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಬಾಕಿ ಕಟ್ಟುವವರೆಗೂ ಫಲಿತಾಂಶ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಈಗಾಗಲೇ ₹ 80,000 ಶುಲ್ಕ ಕಟ್ಟಿದ್ದೇನೆ. ಕೇವಲ ₹ 5,000ಕ್ಕೆ ಮಗುವಿನ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ವಿದ್ಯಾರ್ಥಿಯೊಬ್ಬನ ಪಾಲಕರೂ ಆಗಿರುವ ಆಟೊ ಚಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.