ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ನಗರಸಭೆ: ₹1 ಕೋಟಿ ಉಳಿತಾಯ ಬಜೆಟ್‌ ಮಂಡನೆ

ನಗರಸಭೆಯ 2022–23ನೇ ಸಾಲಿನ ಅಯವ್ಯಯ ಮಂಡನೆ
Last Updated 16 ಮಾರ್ಚ್ 2022, 10:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಐತಿಹಾಸಿಕ ನಗರಿಯ ದಿನನಿತ್ಯದ ಅವಶ್ಯಕತೆಗಳಾದ ಕುಡಿಯುವ ನೀರು, ವಿದ್ಯುತ್‌, ಬೀದಿದೀಪ, ಶೌಚಾಲಯ ಹಾಗೂ ಉದ್ಯಾನ ನಿರ್ವಹಣೆಗೆ ಆದ್ಯತೆ ನೀಡಿ ರೂಪಿಸಿದ 2022–23ನೇ ಸಾಲಿನ ₹ 1.04 ಕೋಟಿ ಉಳಿತಾಯ ಬಜೆಟ್‌ ಬುಧವಾರ ಮಂಡನೆಯಾಯಿತು.

ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌ ಪರವಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಬಜೆಟ್‌ ಮಂಡಿಸಿದರು. ಆದಾಯ ಮೂಲ ಹಾಗೂ ಖರ್ಚಿನ ವಿವರಗಳನ್ನು ಸವಿವರವಾಗಿ ನೀಡಿದರು. ಹೊಸ ಅಭಿವೃದ್ಧಿ ಕಾಮಗಾರಿ ಹಾಗೂ ಬಜೆಟ್ ಮಂಡನೆ ವೇಳೆ ವ್ಯಕ್ತವಾಗುತ್ತಿದ್ದ ಕಾಳಜಿಯನ್ನು ಗಮನಿಸಿ ಸದಸ್ಯರು ಟೇಬಲ್‌ ಬಡಿದು ಸಮ್ಮತಿ ಸೂಚಿಸಿದರು.

ತೆರಿಗೆಯಿಂದ ₹ 53.37 ಕೋಟಿ, ಸರ್ಕಾರದ ಅನುದಾನ ಸೇರಿ ಇತರ ಮೂಲಗಳಿಂದ ₹ 58.65 ಕೋಟಿ ಸಂಗ್ರಹವಾಗಲಿದೆ. ಪ್ರಾರಂಭಿಕ ಶುಲ್ಕು ₹ 32 ಕೋಟಿ ಇದೆ. ಮುಂದಿನ ಆರ್ಥಿಕ ವರ್ಷದಲ್ಲಿ ನಗರಸಭೆಗೆ ₹ 145.11 ಕೋಟಿ ಆದಾಯ ಬರಲಿದೆ. ಇದರಲ್ಲಿ ₹ 144.7 ಕೋಟಿ ವೆಚ್ಚಕ್ಕೆ ಅಂದಾಜು ಸಿದ್ಧವಾಗಿದೆ. ಇನ್ನೂ ₹ 1.04 ಕೋಟಿ ಉಳಿತಾಯವಾಗಲಿದೆ ಎಂದು ಶ್ರೀನಿವಾಸ್‌ ಅಂಕಿ–ಅಂಶಗಳ ಸಹಿತ ಮಾಹಿತಿ ನೀಡಿದರು.

ಕುಡಿಯುವ ನೀರಿನ ಸೌಲಭ್ಯಕ್ಕೆ ₹ 4.5 ಕೋಟಿ ಅನುದಾನ ಮೀಸಲಿಡಲಾಗಿದೆ. ಕೊಳವೆ ಮಾರ್ಗ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕೊಳವೆ ಬಾವಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಒಳಚರಂಡಿ ನಿರ್ಮಾಣ ಮತ್ತು ನಿರ್ವಹಣೆಗೆ ₹ 5 ಕೋಟಿ, ತ್ಯಾಗರಾಜ ಮಾರುಕಟ್ಟೆ ಮತ್ತು ಮಾಂಸ ಮಾರುಕಟ್ಟೆಯಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ₹ 9 ಕೋಟಿ, ಕಸ ಸಂಗ್ರಹ, ವಿಂಗಡಣೆ, ವಿಲೇವಾರಿ ಸೇರಿ ನೈರ್ಮಲೀಕರಣಕ್ಕೆ ₹ 12 ಕೋಟಿ ವೆಚ್ಚ ಮಾಡಲಾಗುತ್ತಿದೆ. ವಿದ್ಯುದ್ದೀಕರಣಕ್ಕೆ ₹ 5 ಕೋಟಿ, ನಗರಸಭೆ ಕಚೇರಿ ಕಟ್ಟಡ ನವೀಕರಣಕ್ಕೆ ₹ 2.5 ಕೋಟಿ, ರಸ್ತೆ, ಚರಂಡಿ ಮತ್ತು ಪಾದಚಾರಿ ಮಾರ್ಗದ ಅಭಿವೃದ್ಧಿಗೆ ₹ 15 ಕೋಟಿ ಅನುದಾನ ವಿನಿಯೋಗ ಮಾಡಲಾಗುತ್ತಿದೆ.

ತೆರಿಗೆ ಏರಿಕೆಗೆ ವಿರೋಧ:ನಗರದಲ್ಲಿ ಆಸ್ತಿ ತೆರಿಗೆ ಏರಿಕೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಇತರ ರಾಜಕೀಯ ಪಕ್ಷಗಳ ಸದಸ್ಯರು ಧ್ವನಿಗೂಡಿಸಿದರು.

‘ಪ್ರತಿವರ್ಷವೂ ಅಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತದೆ. ಸರ್ಕಾರದ ನಿಯಮಾವಳಿ ಪ್ರಕಾರ ಇದು ನಡೆಯುತ್ತದೆ. ಇದಕ್ಕೆ ಅನುಗುಣವಾಗಿ ತೆರಿಗೆ ಪರಿಷ್ಕರಿಸಬೇಕು. ತೆರಿಗೆ ಹೆಚ್ಚು ಅಥವಾ ಕಡಿಮೆ ಆಗಬಹುದು’ ಎಂದು ಪೌರಾಯುಕ್ತ ಹನುಮಂತರಾಜು ಮಾಹಿತಿ ನೀಡಿದರು.

ಸಿಸಿಟಿವಿ ಕ್ಯಾಮೆರಾ ಅಳವಡಿಸಿ:ನಗರದ ಹೊರವಲಯದ ಬಡಾವಣೆಗಳಲ್ಲಿ ಮಹಿಳೆಯರು ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಸರಗಳವು ಹೆಚ್ಚಳವಾಗಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವಾರ್ಡ್‌ಗೆ ಕನಿಷ್ಠ ಐದು ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಎಂದು ನಗರಸಭೆ ಸದಸ್ಯ ಭಾಸ್ಕರ್ ಒತ್ತಾಯಿಸಿದರು.

ಪೌರಾಯುಕ್ತರು ಮಾತನಾಡಿ, ‘₹ 25 ಲಕ್ಷ ವೆಚ್ಚದಲ್ಲಿ ಈಗಾಗಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ನಿರ್ವಹಣೆ ಕೊರತೆ ಇದ್ದರೆ ಸರಿಪಡಿಸಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಸೆಳೆಯಲಾಗುವುದು’ ಎಂದು ಹೇಳಿದರು.

ಬಿಜೆಪಿಗೆ ನಿವೇಶನ: ವಿರೋಧ

ನಗರಸಭೆ ಸ್ವಾಧೀನದಲ್ಲಿರುವ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ (ಸಿಎ) ನಿವೇಶನವನ್ನು ಬಿಜೆಪಿ ಕಚೇರಿ ನಿರ್ಮಾಣಕ್ಕೆ ನೀಡುವುದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯ ಮಂಜುನಾಥ್ ಗೊಪ್ಪೆ, ‘ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ನಿವೇಶನವನ್ನು ರಾಜಕೀಯ ಪಕ್ಷದ ಕಚೇರಿಗೆ ನೀಡಲು ವಿರೋಧವಿದೆ. ಸರ್ಕಾರದ ಉದ್ದೇಶವನ್ನು ದುರುಪಯೋಗ ಮಾಡಿಕೊಂಡು ಹಸ್ತಾಂತರ ಮಾಡಲು ಬಿಡುವುದಿಲ್ಲ’ ಎಂದರು.

ಪೌರಾಯುಕ್ತ ಹನುಮಂತರಾಜು ಮಧ್ಯಪ್ರವೇಶಿಸಿ, ‘ಶಂಕರ್ ಬಡಾವಣೆಯನ್ನು ಖಾಸಗಿಯಾಗಿ ಅಭಿವೃದ್ಧಿಯಾಗಿದೆ. 1985-86ರಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಸ್ಥಿತ್ವಕ್ಕೆ ಬಾರದ ಕಾರಣ ನಗರಸಭೆ ಸುಪರ್ಧಿಯಲ್ಲಿದೆ. 100x151 ವಿಸ್ತೀರ್ಣದ ಈ ನಿವೇಶನವನ್ನು ಸರ್ಕಾರದ ನಿಯಮದ ಪ್ರಕಾರ 30 ವರ್ಷಕ್ಕೆ ಗುತ್ತಿಗೆ ನೀಡಲು ಅವಕಾಶವಿದೆ. ಮಾರ್ಗಸೂಚಿ ದರವನ್ನು ಪಾವತಿಸುವುದು ಕಡ್ಡಾಯ’ ಎಂದು ಹೇಳಿದರು.

'ನಿಮ್ಮ ಮನೆಯವರನ್ನು ಕೇಳಿ..'

'ವಾರ್ಡ್ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ನಿಮ್ಮ ಮನೆಯವರನ್ನು ಕೇಳಿ. ಅವರೇ ಎಲ್ಲ ಹೇಳುತ್ತಾರೆ…'
ನಗರಸಭೆ ಸದಸ್ಯರೊಬ್ಬರಿಗೆ ಪೌರಾಯುಕ್ತರು ನೀಡಿದ ಉತ್ತರವಿದು. ಅನಿರೀಕ್ಷಿತವಾಗಿ ಎದುರಾದ ಈ ಉತ್ತರ ಮಹಿಳಾ ಸದಸ್ಯೆಯನ್ನು ಇಕ್ಕಟ್ಟಿಗೆ ಸಿಲುಕಿಸಿತು.

12ನೇ ವಾರ್ಡ್ ಸದಸ್ಯೆ ಶಕೀಲಾಬಾನು, ‘ನಮ್ಮ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿದರು. ಇದಕ್ಕೆ ಪೌರಾಯುಕ್ತರು ನೀಡಿದ ಉತ್ತರ ಅವರನ್ನು ಮತ್ತಷ್ಟು ಕೆರಳಿಸಿತು.

‘ನಾನು ಮತ್ತು ನಮ್ಮ ಮನೆಯವರು ಬೇರೆಯಲ್ಲ. ನಗರಸಭೆ ಸದಸ್ಯರ ಮಾತಿಗೆ ಬೆಲೆ ಇಲ್ಲವೇ?’ ಎಂದು ಖಾರವಾಗಿ ಪ್ರಶ್ನಿಸಿದರು.

ನಗರದ ವೃತ್ತ, ರಸ್ತೆ ಅಥವಾ ಉದ್ಯಾನಕ್ಕೆ ಪುನೀತ್ ರಾಜ್‍ಕುಮಾರ್ ನಾಮಕರಣ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು. ನಗರಸಭೆ ಉಪಾಧ್ಯಕ್ಷೆ ಅನುರಾಧ ಇದ್ದರು.

* ನಗರದಲ್ಲಿ ಕಾಂಕ್ರೀಟ್ ರಸ್ತೆ ಹೆಚ್ಚಾಗಿವೆ. ಹಲವು ರಸ್ತೆಯಲ್ಲಿ ಸಸಿ ನಡೆಲು ಸಾಧ್ಯವಿಲ್ಲದ ಸ್ಥಿತಿ ಇದೆ. ಬಜೆಟ್‌ನಲ್ಲಿ ಹಸೀರಿಕಣಕ್ಕೆ ಒತ್ತು ನೀಡಿಲ್ಲ. ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಬಳಕೆ ಆಗಿಲ್ಲ.

-ಸೈಯದ್ ನಸ್ರುಲ್ಲಾ,ನಗರಸಭೆ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT