ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿಬಿ) ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರನ್ನು ಮತದಾನದಿಂದ ಅನರ್ಹಗೊಳಿಸಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ರಾಜಕೀಯ ಕಾರಣಕ್ಕೆ ಸ್ವಪಕ್ಷೀಯ ಶಾಸಕನನ್ನೇ ಬ್ಯಾಂಕ್ ಆಡಳಿತದಿಂದ ದೂರವಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಡಿಸಿಸಿಬಿ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಸೆ.12ರಂದು ಮತದಾನ ನಿಗದಿಯಾಗಿದೆ. ಸಚಿವ ಡಿ.ಸುಧಾಕರ್ ಅವರು ಚಳ್ಳಕೆರೆ ತಾಲ್ಲೂಕು ನಗರಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯಾದ್ಯಂತ 351 ಸಹಕಾರ ಸಂಘ, ಸೊಸೈಟಿಗಳು ಡಿಸಿಸಿ ಬ್ಯಾಂಕ್ ಅಡಿ ಬರುತ್ತಿದ್ದು ಅವುಗಳಲ್ಲಿ 200 ಬ್ಯಾಂಕ್‌ಗಳ ಪ್ರತಿನಿಧಿಗಳ ಮತದಾನದ ಹಕ್ಕನ್ನು ಅನರ್ಹಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಅನರ್ಹಗೊಂಡ ಸಹಕಾರ ಸಂಘಗಳಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪ್ರತಿನಿಧಿಸುವ ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೂಡ ಒಂದಾಗಿದೆ. ಈಗಾಗಲೇ 4 ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸುಧಾಕರ್ ಮತ್ತೆ ಬ್ಯಾಂಕ್ ಆಡಳಿತವನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಪ್ರತಿಸ್ಪರ್ಧಿಗಳನ್ನು ಹಣಿಯುವ ಉದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ತಂದು ಅನರ್ಹತೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಸ್ವಪಕ್ಷೀಯರೇ ಆರೋಪಿಸುತ್ತಿದ್ದಾರೆ.
ಮತದಾನದ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿ ಟಿ.ರಘುಮೂರ್ತಿ ಸೇರಿ ಹಲವು ಸಹಕಾರ ಸಂಘಗಳ ಪ್ರತಿನಿಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಮೂಲಕ ಮತದಾನದ ಹಕ್ಕನ್ನು ಮತ್ತೆ ಪಡೆಯಲು ಪ್ರಯತ್ನಿಸಿದ್ದಾರೆ. ಮತದಾನಕ್ಕೆ ಎಷ್ಟು ಮಂದಿ ಹಕ್ಕು ಪಡೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
‘ಡಿ.ಸುಧಾಕರ್ ಅವರು 2004ರಿಂದ 2024ರವರೆಗೆ ಮಧ್ಯೆ 2 ವರ್ಷ ಬಿಟ್ಟು 2 ದಶಕಗಳ ಕಾಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಪ್ರತಿಸ್ಪರ್ಧಿಗಳನ್ನು ಬ್ಯಾಂಕ್ ಆಡಳಿತದಿಂದ ದೂರವೇ ಇಟ್ಟಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೀಜ ಬಿತ್ತಿದ್ದಾರೆ. ತಮ್ಮ ರಾಜಕೀಯ ಬೆಳವಣಿಗೆಗೆ ಡಿಸಿಸಿ ಬ್ಯಾಂಕನ್ನು ಅಸ್ತ್ರ ಮಾಡಿಕೊಂಡಿದ್ದಾರೆ’ ಎಂದು ಅನರ್ಹಗೊಂಡ ಸಂಘದ ಪ್ರತಿನಿಧಿಯೊಬ್ಬರು ಆರೋಪಿಸಿದರು.
‘ಸಚಿವ ಸಂಪುಟ ಪರಿಷ್ಕರಣೆಯಲ್ಲಿ ಶಾಸಕ ರಘುಮೂರ್ತಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದೂ ಸೇರಿದಂತೆ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಆಡಳಿತದಲ್ಲಿ ಪ್ರತಿಸ್ಪರ್ಧಿಗಳನ್ನು ದೂರವಿಡಲು ಸುಧಾಕರ್ ಯತ್ನಿಸಿದ್ದಾರೆ. ಕಳೆದ ಬಾರಿಯೂ ಇಂಥದ್ದೇ ಪ್ರಯತ್ನ ಮಾಡಿದ್ದರು. ಆದರೂ ರಘುಮೂರ್ತಿ ಬ್ಯಾಂಕ್ ನಿರ್ದೇಶಕರಾಗುವಲ್ಲಿ ಯಶಸ್ವಿಯಾಗಿದ್ದರು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದರು.
ಅನರ್ಹತೆ ಏಕೆ?: ಸಹಕಾರ ಕಾಯ್ದೆ ಅನುಸಾರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾಗವಹಿಸಲು ಸಹಕಾರ ಸಂಘಗಳ ಪ್ರತಿನಿಧಿಗಳು ಕನಿಷ್ಠ 2 ಸಾಮಾನ್ಯ ಸಭೆಗಳಲ್ಲಿ ಭಾಗವಹಿಸಿರಬೇಕು, 2 ವರ್ಷ ಡಿಸಿಸಿ ಬ್ಯಾಂಕ್‌ನಲ್ಲಿ ವಹಿವಾಟು ನಡೆಸಿರಬೇಕು. ರಘುಮೂರ್ತಿ ಅವರು ಪ್ರತಿನಿಧಿಸುವ ಸಹಕಾರ ಸಂಘ ಡಿಸಿಸಿ ಬ್ಯಾಂಕ್‌ನಲ್ಲಿ ವಹಿವಾಟು ನಡೆಸಿಲ್ಲ ಎಂಬ ಆರೋಪದೊಂದಿಗೆ ಅವರ ಪ್ರಾತಿನಿಧ್ಯವನ್ನು ಅನರ್ಹಗೊಳಿಸಲಾಗಿದೆ.
‘ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿಯಾಗಿದ್ದು ಸಂಘಗಳ ಮತದಾನದ ಹಕ್ಕು ಕಸಿಯುವಂತಿಲ್ಲ ಎಂಬ ಹೊಸ ವಿಷಯ ಸೇರ್ಪಡೆ ಮಾಡಲಾಗಿದೆ. ಆದರೆ ತಿದ್ದುಪಡಿ ಕಾಯ್ದೆಗೆ ಇನ್ನೂ ರಾಜ್ಯಪಾಲರ ಅಂಕಿತ ಸಿಕ್ಕಿಲ್ಲ. ಹೀಗಾಗಿ ಅನರ್ಹತೆ ಅಸ್ತ್ರ ಮುಂದುವರಿದಿದೆ’ ಎಂದು ವಕೀಲರೊಬ್ಬರು ತಿಳಿಸಿದರು.
ಚುನಾವಣೆಯ ಹೊಸ್ತಿಲಲ್ಲಿ ಸಚಿವ ಸುಧಾಕರ್ ಅವರ ಆಪ್ತ ಸಿ.ವೀರಭದ್ರಬಾಬು ಅವರನ್ನು ಡಿಸಿಸಿ ಬ್ಯಾಂಕ್ ನಾಮ ನಿರ್ದೇಶಿತ ನಿರ್ದೇಶಕರನ್ನಾಗಿ ನೇಮಕಗೊಂಡಿರುವುದು ಕೂಡ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಪ್ರತಿಕ್ರಿಯೆ ಪಡೆಯಲು ಸಚಿವ ಡಿ.ಸುಧಾಕರ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರು ಕರೆ ಸ್ವೀಕಾರ ಮಾಡಲಿಲ್ಲ.
‘ನಾಮಪತ್ರ ತಿರಸ್ಕಾರ ಬೇಡ’
‘ಅನರ್ಹತೆ ವಿರುದ್ಧ ಶಾಸಕ ಟಿ.ರಘುಮೂರ್ತಿ ಸೇರಿ ಹಲವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ಪರಿಗಣಿಸಿದ್ದು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಅನರ್ಹತೆ ವಿಷಯವನ್ನು ಪರಿಗಣಿಸಿ ನಾಮಪತ್ರ ತಿರಸ್ಕಾರ ಮಾಡಬಾರದು ನಾಮಪತ್ರವನ್ನು ಪರಿಗಣಿಸಬೇಕು ಎಂದು ಕೋರ್ಟ್ ಸೂಚಿಸಿದೆ’ ಎಂದು ವಕೀಲರೊಬ್ಬರು ತಿಳಿಸಿದರು.
ಕೋವಿಡ್ ಬರದಿಂದಾಗಿ ನಮ್ಮ ಸೊಸೈಟಿ ವಹಿವಾಟು ನಡೆಸಲು ಸಾಧ್ಯವಾಗಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಮತದಾನದ ಹಕ್ಕು ಕಿತ್ತುಕೊಳ್ಳುವುದು ಸರಿಯಲ್ಲ. ನಾವು ಕೋರ್ಟ್‌ಗೆ ಹೋಗುತ್ತೇವೆ ಎಂಬುದನ್ನು ಅರಿತು ಅಧಿಕಾರಿಗಳು ಕೇವಿಯಟ್ ಸಲ್ಲಿಸಿರುವುದು ಆಶ್ಚರ್ಯ ತರಿಸಿದೆ.ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕ
ಕಾನೂನಾತ್ಮಕವಾಗಿ ವಹಿವಾಟು ನಡೆಸದ ಸೊಸೈಟಿಗಳ ಪ್ರತಿನಿಧಿಗಳ ಮತದಾನದ ಹಕ್ಕು ರದ್ದುಗೊಳಿಸಲಾಗಿದೆ. ಇದರಲ್ಲಿ ಯಾವ ರಾಜಕೀಯ ಉದ್ದೇಶವೂ ಇಲ್ಲ.ಇಲ್ಯಾಸ್ ಉಲ್ಲಾ ಷರೀಫ್, ಸಿಇಒ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.