ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪೋಷಕಾಂಶ ಸಿಂಪಡಣೆಯ ಡ್ರೋಣ್‌ ಪ್ರಾತ್ಯಕ್ಷಿಕೆ

ಕೃಷಿ, ತೋಟಗಾರಿಕೆ ಬೆಳೆಗಳಿಗೆ ನ್ಯಾನೋ ರಸಗೊಬ್ಬರ ನೀಡಲು ಅನುಕೂಲ
Published 22 ಮೇ 2024, 15:24 IST
Last Updated 22 ಮೇ 2024, 15:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ದ್ರವ ರೂಪದ ರಸಗೊಬ್ಬರ ಹಾಗೂ ಕೀಟನಾಶಕ ಸಿಂಪಡಣೆಗೆ ಇಫ್ಕೊ ಕಂಪನಿ ಸಿದ್ಧಪಡಿಸಿದ ಸುಧಾರಿತ ಡ್ರೋಣ್‌ ಸ್ಪ್ರೇಯರ್‌ಗಳ ಪ್ರಾತ್ಯಕ್ಷಿಕೆ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆಯಿತು. ಜಿಲ್ಲೆಗೆ ಹಂಚಿಕೆಯಾಗಿರುವ ನಾಲ್ಕು ಡ್ರೋಣ್‌ಗಳಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಚಾಲನೆ ನೀಡಿದರು.

ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಿಗೆ (ಟಿಎಪಿಸಿಎಂಎಸ್‌) ತಲಾ ಒಂದು ಹಾಗೂ ಇಬ್ಬರು ಉದಯೋನ್ಮುಖ ಕೃಷಿ ಉಪಕರಣಗಳ ಬಳಕೆದಾರರಿಗೆ ತಲಾ ಒಂದೊಂದು ಡ್ರೋಣ್‌ ಹಂಚಿಕೆ ಮಾಡಲಾಗಿದೆ. ಬೇಡಿಕೆ ಆಧರಿಸಿ ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಡ್ರೋಣ್‌ ನೀಡಲು ‘ಇಫ್ಕೊ’ ಸಿದ್ಧತೆ ಮಾಡಿಕೊಂಡಿದೆ.

‘₹ 12 ಲಕ್ಷ ಮೌಲ್ಯದ ಡ್ರೋಣ್‌ ಸ್ಪ್ರೇಯರ್‌ ಜತೆಗೆ ಎಲೆಕ್ಟ್ರಿಕಲ್‌ ವಾಹನ, ಐದು ಬ್ಯಾಟರಿ ಹಾಗೂ ಒಂದು ಜನರೇಟರ್‌ ನೀಡಲಾಗುತ್ತದೆ. ಡ್ರೋಣ್‌ ನಿರ್ವಹಣೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಚೆನ್ನೈನಲ್ಲಿ ತರಬೇತಿ ನೀಡಲಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪರವಾನಗಿ ನೀಡುತ್ತದೆ. ಪರವಾನಗಿ ವಿತರಣೆಯನ್ನು ರೈತ ಸ್ನೇಹಿಯಾಗಿ ರೂಪಿಸಲಾಗಿದೆ’ ಎಂದು ಇಫ್ಕೊ ಕಂಪೆನಿಯ ಜಿಲ್ಲಾ ಕ್ಷೇತ್ರಾಧಿಕಾರಿ ಚಿದಂಬರಮೂರ್ತಿ ಮಾಹಿತಿ ನೀಡಿದರು.

ನ್ಯಾನೋ ರಸಗೊಬ್ಬರ, ಕೀಟನಾಶಕಗಳ ಸಿಂಪಡಣೆಗೆ ಈ ಡ್ರೋಣ್‌ ಬಳಸಬಹುದಾಗಿದೆ. ಕೀಟನಾಶಕಕ್ಕಿಂತ ಪೋಷಕಾಂಶ ನಿರ್ವಹಣೆಗೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಶೇಂಗಾ, ಮೆಕ್ಕೆಜೋಳ, ರಾಗಿ, ಹತ್ತಿ, ಅಡಿಕೆ, ದಾಳಿಂಬೆ ಸೇರಿ ಎಲ್ಲ ಬೆಳೆಗಳಿಗೆ ಸಿಂಪಡಣೆ ಮಾಡಬಹುದಾಗಿದೆ. ರಾಜ್ಯದಲ್ಲಿ ಈ ಡ್ರೋಣ್‌ ಅನ್ನು ಭತ್ತದ ಬೆಳೆಗಳಿಗೆ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

‘500 ಮೀಟರ್‌ ಎತ್ತರದವರೆಗೆ ಹಾರಾಡುವ ಸಾಮರ್ಥ್ಯವನ್ನು ಡ್ರೋಣ್‌ ಹೊಂದಿವೆ. ಹತ್ತು ಲೀಟರ್‌ ಕ್ಯಾನ್‌ ಹೊತ್ತೊಯುತ್ತದೆ. ಹೀಗಾಗಿ, ಅಡಿಕೆ ತೋಟಗಳಲ್ಲಿ ಕೂಡ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಯಾವುದೇ ಬೆಳೆಯ ಒಂದು ಮೀಟರ್‌ ಎತ್ತರದಿಂದ ಪೋಷಕಾಂಶ ಸಿಂಪಡಿಸಲಾಗುತ್ತದೆ. ಪ್ರತಿ ಎಕರೆಗೆ 7ರಿಂದ 10 ನಿಮಿಷ ಕಾಲಾವಕಾಶ ಹಿಡಿಯುತ್ತದೆ’ ಎಂದು ಮಾಹಿತಿ ನೀಡಿದರು.

‘ಇಫ್ಕೊ ಕಿಸಾನ್ ಉದಯ್’ ಎಂಬ ಮೊಬೈಲ್‌ ಫೋನ್‌ ಆ್ಯಪ್‌ ಮೂಲಕ ರೈತರು ಮುಂಗಡ ನೋಂದಣಿ ಮಾಡಿಕೊಳ್ಳಬಹುದು. ಸಮೀಪದ ಡ್ರೋಣ್‌ ನಿರ್ವಾಹಕರಿಗೆ ಈ ಮಾಹಿತಿ ರವಾನಿಸಲಾಗುತ್ತದೆ.
-ಚಿದಂಬರಮೂರ್ತಿ ಜಿಲ್ಲಾ ಕ್ಷೇತ್ರಾಧಿಕಾರಿ ಇಫ್ಕೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT