ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ವಿದ್ಯಾರ್ಥಿಗಳಿಗೆ ಮರೀಚಿಕೆಯಾದ ವಿಜ್ಞಾನ ಶಿಕ್ಷಣ

ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹೆಣ್ಣುಮಕ್ಕಳ
Published 6 ಮೇ 2024, 6:50 IST
Last Updated 6 ಮೇ 2024, 6:50 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಜಾಗತೀಕರಣದ ಪರಿಣಾಮವಾಗಿ ವಿಜ್ಞಾನ ಶಿಕ್ಷಣ ಮುನ್ನೆಲೆಗೆ ಬಂದಿರುವ ಸಮಯದಲ್ಲಿ ತಾಲ್ಲೂಕಿನಲ್ಲಿ ವಿಜ್ಞಾನ ಕಲಿಕೆಗೆ ಅವಕಾಶವೇ ಇಲ್ಲದಿರುವುದು ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಬೇಸರ ತರಿಸಿದೆ.

ತಾಲ್ಲೂಕಿನಲ್ಲಿ ಪಾಲಕರು ಹೊಟ್ಟೆಪಾಡಿಗಾಗಿ ವಲಸೆ ಹೋಗುವುದು ಅನಿವಾರ್ಯವಾಗಿದೆ. ಅಂತೆಯೇ ಮಕ್ಕಳೂ ವಿಜ್ಞಾನ ಶಿಕ್ಷಣ ಪಡೆಯಲು ದೂರದ ಊರುಗಳಿಗೆ ಹೋಗಬೇಕಿದೆ. ಹೀಗೆ ತೆರಳಲು ಸಾಧ್ಯವಾಗದ ಅನೇಕ ಬಡಮಕ್ಕಳು ಮುಖ್ಯವಾಗಿ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುವುದರಿಂದ ವಂಚಿತರಾಗುವಂತಾಗಿದೆ.

ತಾಲ್ಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೇ 30ಕ್ಕೂ ಹೆಚ್ಚು ಶಿಕ್ಷಕರ ಕೊರತೆ ದಶಕಗಳಿಂದ ಕಾಡುತ್ತಿದೆ. ಅತಿಥಿ ಶಿಕ್ಷಕರ ಮೂಲಕ ಶಿಕ್ಷಣ ನೀಡಲಾಗುತ್ತಿದೆ. 2 ಸರ್ಕಾರಿ ಪಿಯು ಕಾಲೇಜುಗಳಿದ್ದು, ಇಲ್ಲಿಯೂ ಉಪನ್ಯಾಸಕರ ಕೊರತೆ ಇದೆ. ಪಟ್ಟಣದಲ್ಲಿರುವ ತಾಲ್ಲೂಕಿನ ಏಕೈಕ ಪದವಿ ಕಾಲೇಜಿನಲ್ಲಿ ಕಲೆ, ವಾಣಿಜ್ಯ ವಿಭಾಗ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ವಿಜ್ಞಾನ ವಿಭಾಗವನ್ನು ಆರಂಭಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.

ಶಿಕ್ಷಣ ವ್ಯವಸ್ಥೆಯಿಂದ ಬೇಸತ್ತಿರುವ, ಆರ್ಥಿಕವಾಗಿ ಸಬಲವಾಗಿರುವ ಪಾಲಕರು 6, 8ನೇ ತರಗತಿಯಿಂದಲೇ ಮಕ್ಕಳನ್ನು ದೂರದ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಶಿಕ್ಷಣದ ಅವ್ಯವಸ್ಥೆಯನ್ನು ಪ್ರಶ್ನಿಸಬೇಕಾದವರೂ ತಮ್ಮ ಮಕ್ಕಳನ್ನು ಪಟ್ಟಣಗಳ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿರುವ ಕಾರಣ ಸಮಸ್ಯೆ ಜೀವಂತವಾಗಿದೆ. ಬಡ ಪಾಲಕರ ಕಷ್ಟವನ್ನು ಆಲಿಸುವವರು ಯಾರೂ ಇಲ್ಲ ಎಂದು ಜನಸಂಸ್ಥಾನ ಸಂಸ್ಥೆಯ ವಿರೂಪಾಕ್ಷಪ್ಪ ದೂರಿದರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ 2023–24ನೇ ಸಾಲಿನಿಂದ ವಿಜ್ಞಾನ ಪದವಿ ಆರಂಭಿಸುವಂತೆ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಕೆಡಿಪಿ ಸಭೆಯಲ್ಲಿ ಸೂಚಿಸಿದ್ದರು. ಆದರೂ ಕಾರ್ಯರೂಪಕ್ಕೆ ಬಂದಿಲ್ಲ. ಈ ವರ್ಷವೂ ವಿಜ್ಞಾನ ಪದವಿ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎಂದು ಪಾಲಕರು ಮನವಿ ಮಾಡಿದ್ದಾರೆ.

ಇಲ್ಲಿ ವೈದ್ಯಕೀಯ ಶಿಕ್ಷಣದಂಥ ಮೂಲಸೌಕರ್ಯಗಳ ಕೊರತೆಯಿದೆ ಎಂದು ಶಿಕ್ಷಕರು ಉಪನ್ಯಾಸಕರು ವೈದ್ಯರು ವರ್ಗಾವಣೆಯಾಗಿ ಬರುತ್ತಿಲ್ಲ. ಪ್ರತ್ಯೇಕ ನೀತಿ ಮೂಲಕ ಹುದ್ದೆ ತುಂಬುವ ಕಾರ್ಯವಾಗಬೇಕಿದೆ.

-ಜಾಫರ್‌ ಷರೀಫ್‌ ಸಿಪಿಐ ಕಾರ್ಯದರ್ಶಿ ಮೊಳಕಾಲ್ಮುರು

ಸರ್ಕಾರಿ ಪದವಿ ಕಾಲೇಜಿನಲ್ಲಿ 2006ರಲ್ಲಿ ಬಿಎಸ್‌ಸಿ ಆರಂಭಕ್ಕೆ ಸಿದ್ಧತೆ ನಡೆದು ಪ್ರಯೋಗಾಲಯ ತೆರೆಯಲಾಗಿತ್ತು. ಆದರೆ ವಿದ್ಯಾರ್ಥಿಗಳು ದಾಖಲಾಗಲಿಲ್ಲ ಎಂಬ ಕಾರಣದಿಂದ ಕೋರ್ಸ್‌ ಸ್ಥಗಿತವಾಯಿತು. ಪ್ರಯೋಗಾಲಯವನ್ನು ಸ್ಥಳಾಂತರಿಸಲಾಗಿದೆ.

- ಸೂರಯ್ಯ ಪ್ರಾಂಶುಪಾಲರು ಸರ್ಕಾರಿ ಪದವಿ ಕಾಲೇಜು

ಪಾಠಕ್ಕೆ ಅತಿಥಿ ಉಪನ್ಯಾಸಕರೇ ಆಧಾರ ಇಲ್ಲಿನ ಸರ್ಕಾರಿ ಪಿಯು ಕಾಲೇಜು ತಾಲ್ಲೂಕಿನ ಪ್ರಮುಖ ಕಾಲೇಜಾಗಿದ್ದು ‘ಎ’ ಶ್ರೇಣಿ ಪಡೆದುಕೊಂಡಿತ್ತು. ಪರಿಣಾಮವಾಗಿ ಉಪನ್ಯಾಸಕರ ಕಡ್ಡಾಯ ವರ್ಗಾವಣೆಯಾಯಿತು. ಈಗ ‘ಬಿ’ ಶ್ರೇಣಿಗೆ ಸೇರಿಸಿದ್ದರೂ ಸಾಮಾನ್ಯ ವರ್ಗಾವಣೆಯಲ್ಲಿ ಉಪನ್ಯಾಸಕರು ಈ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಮಂಜೂರಾಗಿರುವ 16 ಉಪನ್ಯಾಸಕರ ಪೈಕಿ 4 ಮಂದಿ ಮಾತ್ರ ಇದ್ದಾರೆ. ವಿದ್ಯಾರ್ಥಿಗಳಿಗೆ ಪಾಠಕ್ಕೆ ಅತಿಥಿ ಉಪನ್ಯಾಸಕರರೇ ಆಧಾರವಾಗಿದ್ದಾರೆ. ಎಸ್‌ಸಿ ಎಸ್‌ಟಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಭಾಗದಲ್ಲಿ ಕಾಲೇಜಿನ ಶ್ರೇಣಿ ಬದಲಾವಣೆ ಮಾಡಿದ್ದು ಸಮಸ್ಯೆಗೆ ಕಾರಣವಾಗಿದೆ. ಕಾಲೇಜನ್ನು ಮೊದಲಿನಂತೆ  ‘ಎ’ ಶ್ರೇಣಿಗೆ ಸೇರಿಸಬೇಕು ಎಂದು ಪಾಲಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT