ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಪರಿಹಾರಕ್ಕೆ ಒತ್ತಾಯ

ಬರ ಪರಿಸ್ಥಿತಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಆಕ್ರೋಶ
Last Updated 16 ಜುಲೈ 2019, 17:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ವಿಮೆ ಪರಿಹಾರ ನೀಡಿ, ಬೆಳೆ ನಷ್ಟ ಪರಿಹಾರ ತುಂಬಿಕೊಡಬೇಕು ಎಂದು ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕು ಸೇರಿದಂತೆ ಹಲವೆಡೆಗಳಿಂದ ಬಂದಿದ್ದ ನೂರಾರು ರೈತರು ಸುಡುವ ಬಿಸಿಲಿನಲ್ಲಿಯೇ ಸುಮಾರು ಎರಡು ಗಂಟೆ ಕುಳಿತಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯ ಕಿಟಕಿಗೆ ಮನವಿ ಪತ್ರ ಅಂಟಿಸಿ ಅಸಮಾಧಾನ ಹೊರಹಾಕಿದರು.

2018–19ನೇ ಸಾಲಿನಲ್ಲಿ ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಸೇರಿ ಹಲವು ಬೆಳೆಗಳಿಗೆ ವಿಮೆ ಮಾಡಿಸಿದ್ದೇವೆ. ವಿಮೆ ಕಂತು ಪಾವತಿಸಿ ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ. ಮುಂಗಾರು ಹಂಗಾಮು ಬೆಳೆಗಳಿಗೆ ಮತ್ತೆ ಕಂತು ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಪರಿಹಾರ ಸಿಗದೇ ಇದ್ದರೆ ಕಂತು ಪಾವತಿಸುವುದು ಹೇಗೆ ಎಂದು ಪ್ರಶ್ನಿಸಿದರು.

ಸತತ ಐದು ವರ್ಷಗಳಿಂದ ಜಿಲ್ಲೆ ಬರ ಪರಿಸ್ಥಿತಿ ಎದುರಿಸುತ್ತಿದೆ. ಕಳೆದ ವರ್ಷ ಶೇ 90ರಷ್ಟು ಬೆಳೆ ಒಣಗಿ ಹೋಗಿದೆ. ಆದರೂ, ಬೆಳೆ ವಿಮೆ ಪಾವತಿಸಲು ಕಂಪನಿಗಳು ಸಬೂಬು ನೀಡುತ್ತಿವೆ. ಬೆಳೆ ನಷ್ಟ ಪರಿಹಾರ ಕೂಡ ಬಿಡುಗಡೆ ಮಾಡದೇ ಸರ್ಕಾರ ರೈತರನ್ನು ವಂಚಿಸಲಾಗುತ್ತಿದೆ. ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರದ ಗಮನ ಸೆಳೆದರೂ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆಯಾಗಿಲ್ಲ. ಈವರೆಗೂ ಬಿತ್ತನೆ ಕೂಡ ಮಾಡಿಲ್ಲ. ಬರದ ಭೀತಿ ಮತ್ತೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಳೆದ ವರ್ಷದ ಬೆಳೆ ವಿಮೆ ಪಾವತಿಸಿದರೆ ರೈತರಿಗೆ ಅನುಕೂಲವಾಗಲಿದೆ. ಇಲ್ಲವಾದರೆ, ರೈತರು ಇನ್ನಷ್ಟು ಸಮಸ್ಯೆಗೆ ಸಿಲುಕಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಮುಖಂಡರಾದ ದಯಾನಂದ ಮೂರ್ತಿ, ಆರ್‌.ಎಸ್‌.ಅಮರೇಶ್‌ ಇದ್ದರು.

*
2017–18ನೇ ಸಾಲಿನಲ್ಲಿ ಜಿಲ್ಲೆಯ ರೈತರು ₹ 111 ಕೋಟಿ ಬೆಳೆ ವಿಮೆ ಪಾವತಿಸಿದ್ದಾರೆ. ಆದರೆ, ರೈತರಿಗೆ ಸಿಕ್ಕಿದ್ದು ₹ 21 ಕೋಟಿ ಮಾತ್ರ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ
–ಟಿ.ನುಲೇನೂರು ಶಂಕರಪ್ಪ,ರೈತ ಸಂಘದ ಪ್ರಧಾನ ಕಾರ್ಯದರ್ಶಿ

*
ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಕಣ್ಣಲ್ಲಿ ನೀರಿನ ಬದಲು ರಕ್ತ ಸುರಿಯುತ್ತಿದೆ. ಜಿಲ್ಲಾಡಳಿತ ಕುರುಡರಂತೆ ವರ್ತನೆ ಮಾಡುತ್ತಿರುವುದರಿಂದ ನೋವುಂಟಾಗಿದೆ.
–ಸುರೇಶ್‌ ಬಾಬು, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT