ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವುಗಳಿಗೆ ಬುದ್ದನ ಪಂಚಶೀಲಗಳಲ್ಲಿದೆ ಉತ್ತರ: ಸಿ.ಕೆ.ಮಹೇಶ್‌

ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸಿ.ಕೆ.ಮಹೇಶ್‌ ಅಭಿಪ್ರಾಯ
Published 14 ಜನವರಿ 2024, 15:53 IST
Last Updated 14 ಜನವರಿ 2024, 15:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಗತ್ತಿಗೆ ಅತ್ಯಂತ ಶ್ರೇಷ್ಠ ವಿಚಾರಗಳನ್ನು ನವಯಾನ ಬುದ್ದ ಧಮ್ಮ ಕೊಟ್ಟಿದೆ. ದೇಶದಲ್ಲಿ ಬದಲಾವಣೆಯಾಗಬೇಕಾದರೆ ಬುದ್ದ ಧಮ್ಮ ಆಚರಣೆಗೆ ಬರಬೇಕು ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನವಯಾನ ಬುದ್ದ ಧಮ್ಮ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ನವಯಾನ ಮುಂದಿನ ಹೆಜ್ಜೆಗಳ ನಿರ್ಧರಿಸುವ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಬುದ್ದ, ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ‘ಅಸಮಾನತೆ, ಜಾತೀಯತೆ, ಅಸ್ಪೃತೆಗೆ ಬುದ್ದನ ಪಂಚಶೀಲಗಳಲ್ಲಿ ಉತ್ತರ ಕಂಡುಕೊಳ್ಳಬಹುದು’ ಎಂದರು.

‘ಬುದ್ದನ ಆಲೋಚನೆಗೆ ಅಂಬೇಡ್ಕರ್ ಬೇರೆ ಬೇರೆ ಮೆರಗನ್ನು ಕೊಟ್ಟಿದ್ದಾರೆ. ಬುದ್ದನ ನವಯಾನ ಬೇರೆ ನವಯಾನಕ್ಕಿಂತ ಭಿನ್ನವಾಗಿದೆ. ಮದ್ಯಪಾನ, ಕಳ್ಳತನ, ಸುಳ್ಳು ಹೇಳುವುದು, ಹಿಂಸೆ, ಅಸಮಾನತೆ ಇವುಗಳ ವಿರುದ್ದ ಬುದ್ದ ಮಾತನಾಡಿದ್ದಾನೆ’ ಎಂದು ತಿಳಿಸಿದರು.

‘ಅಸ್ಪೃಶ್ಯತೆ ಆಚರಿಸುವುದು, ಜಾತಿ, ವರ್ಗ ಅಸಮಾನತೆಯನ್ನು ವಿರೋಧಿಸುತ್ತಿದ್ದ ಬುದ್ದ ಯಜ್ಞ ಯಾಗಾದಿಗಳ ಹೆಸರಿನಲ್ಲಿ ವೈದ್ಧಿಕ ಧರ್ಮದವರು ಪ್ರಾಣಿ ಹಿಂಸೆ ಮಾಡುತ್ತಿದ್ದುದನ್ನು ಬಲವಾಗಿ ಖಂಡಿಸುತ್ತಿದ್ದರು. ಅಹಿಂಸಾತ್ಮಕವಾದ ಜಗತ್ತನ್ನು ಬುದ್ದ ನೀಡಿದ್ದಾನೆ’ ಎಂದರು.

‘ಅವಮಾನ, ತಿರಸ್ಕಾರ, ಜಾತಿಯತೆ, ಶೋಷಣೆ ಎಲ್ಲಿ ನಡೆಯುತ್ತದೋ ಅಂತಹ ಕಡೆ ಹೋಗಬೇಡಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಮಗಿರುವ ನೋವುಗಳಿಗೆ ಬುದ್ದನ ಪಂಚಶೀಲಗಳಲ್ಲಿ ಉತ್ತರ ಕಂಡುಕೊಳ್ಳಬೇಕಿದೆ’ ಎಂದು ತಿಳಿಸಿದರು.

ನಿವೃತ್ತ ತಹಶೀಲ್ದಾರ್‌ ಮಲ್ಲಿಕಾರ್ಜುನ್ ಮಾತನಾಡಿ, ‘ನವಯಾನ ಬುದ್ದ ಧಮ್ಮ ಆಚರಣೆಯಲ್ಲಿದೆಯೇ ವಿನಃ ಅನುಸರಣೆಯಲ್ಲಿಲ್ಲ. ಅಂಬೇಡ್ಕರ್‌ ವಿಚಾರಧಾರೆ ಹಿನ್ನೆಲೆಯಲ್ಲಿ ನವಯಾನ ಬುದ್ದ ಧಮ್ಮ ಸಾಮಾಜಿಕರಣಗೊಳ್ಳಬೇಕಿದೆ’ ಎಂದು ಹೇಳಿದರು.

ಲೇಖಕ ಎಚ್‌.ಆನಂದ್‌ ಕುಮಾರ್ ಮಾತನಾಡಿ, ‘ಎಲ್ಲಾ ಜಾತಿ ಧರ್ಮದವರು ಸಮಾನವಾಗಿ ಬಾಳುವ ಹಕ್ಕನ್ನು ಸಂವಿಧಾನ ನೀಡಿದೆ. ಅಂಬೇಡ್ಕರ್‌ ದೃಷ್ಠಿಕೋನದಲ್ಲಿ ನವಯಾನ ಬುದ್ದ ಧಮ್ಮವನ್ನು ಆಚರಿಸುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಿ ವಿಚಾರ, ವಿಶಾಲತೆಗೆ ಒಳಗಾಗಿ ಸದೃಢತೆ ಗಳಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಚಿಂತಕರಾದ ವಿ.ಬಸವರಾಜ್, ಡಿ.ದುರುಗೇಶಪ್ಪ, ಚಿಕ್ಕಣ್ಣ, ಕೆ.ಕುಮಾರ್‌, ರಾಮು ಗೋಸಾಯಿ, ಹನುಮಂತಪ್ಪ ದುರ್ಗ, ಬಿ.ರಾಜಣ್ಣ, ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT