ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಘೋಷಿಸಿ: ಬಿಜೆಪಿಗೆ ಕಾಂಗ್ರೆಸ್‌ ಸವಾಲು

Last Updated 17 ಆಗಸ್ಟ್ 2021, 13:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಲ್ಲಿ ನನೆಗುದಿಗೆ ಬಿದ್ದಿರುವ ಪ್ರಸ್ತಾವಕ್ಕೆ ಅನುಮೋದನೆ ನೀಡಲು ಎಷ್ಟು ಕಾಲ ಬೇಕಾಗಬಹುದು ಎಂಬುದನ್ನು ‘ಜನಾಶೀರ್ವಾದ ಯಾತ್ರೆ’ಯಲ್ಲಿ ಬಹಿರಂಗಪಡಿಸಿ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಎಂ.ಹಾಲೇಶ್‌ ಬಿಜೆಪಿಗೆ ಸವಾಲು ಹಾಕಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಹಮ್ಮಿಕೊಂಡಿರುವ ಜನಾಶೀರ್ವಾದ ಯಾತ್ರೆಗೆ ಜನರನ್ನು ಕರೆತರಲು ತಪ್ಪು ಮಾಹಿತಿ ನೀಡಲಾಗುತ್ತಿದೆ. ಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಆಮಿಷವೊಡ್ಡಿ ಹಟ್ಟಿಗಳಿಂದ ಜನರನ್ನು ಕರೆತರಲಾಗುತ್ತಿದೆ. ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಬಿಜೆಪಿ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಯಿತು. ಪರಿಶಿಷ್ಟ ಪಂಗಡದ ಪಟ್ಟಿಗೆ ಗೊಲ್ಲ ಸಮುದಾಯ ಸೇರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈವರೆಗೆ ಇದಕ್ಕೆ ಅನುಮೋದನೆ ನೀಡಿಲ್ಲ’ ಎಂದು ಟೀಕಿಸಿದರು.

‘ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಮುದಾಯದ ಮತ ಸೆಳೆಯಲು ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲಾಯಿತು. ಆದರೆ, ಈವರೆಗೆ ಈ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಬಜೆಟ್‌ನಲ್ಲಿ ಅನುದಾನವನ್ನೂ ಮೀಸಲಿಟ್ಟಿಲ್ಲ. ಆದರೆ, ಬ್ರಾಹ್ಮಣರ ಅಭಿವೃದ್ಧಿ ನಿಗಮಕ್ಕೆ ₹ 10 ಕೋಟಿ ಅನುದಾನ ನೀಡಲಾಗಿದೆ. ತಳಸಮುದಾಯವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ದೂರಿದರು.

‘ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಏರಿಕೆ ಮಾಡುವಂತೆ ನಾಯಕ ಸಮುದಾಯ ಬೇಡಿಕೆ ಮುಂದಿಟ್ಟಿದೆ. ಬಿ.ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವ ಆಮಿಷ ತೋರಿಸಿ ಸಮುದಾಯದ ಮತ ಸೆಳೆದಿದೆ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವುದಾಗಿ ಮಾದಿಗ ಸಮುದಾಯದ ದಿಕ್ಕು ತಪ್ಪಿಸುತ್ತಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್‌, ನಗರ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ್‌, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎನ್‌.ಡಿ.ಕುಮಾರ್‌, ಮುಖಂಡರಾದ ಡಿ.ಎನ್.ಮೈಲಾರಪ್ಪ, ಆರ್‌.ಕೆ.ನಾಯ್ಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT