ಚಿತ್ರದುರ್ಗ: 90 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ -ಈಶ್ವರಪ್ಪ

ಚಿಕ್ಕಜಾಜೂರು: 2022–23ರ ವೇಳೆಗೆ ರಾಜ್ಯದ 90 ಲಕ್ಷ ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನಲ್ಲಿ ಸಂಪರ್ಕ ನೀಡಿ ಕುಡಿಯುವ ನೀರು ಒದಗಿಸುವ ಗುರಿ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸಮೀಪದ ಮುತ್ತುಗದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಳಬಾಳು ನಗರ (ಸಾಸಲುಹಳ್ಳ)ದಲ್ಲಿ ಜಲಜೀವನ್ ಯೋಜನೆ ಅಡಿಯಲ್ಲಿ ಮನೆ ಮನೆಗಳಿಗೆ ನಲ್ಲಿ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕುಗಳಿಗೆ ಈ ಯೋಜನೆ ಅಡಿಯಲ್ಲಿ ₹ 514 ಕೋಟಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 3,46,186 ಮನೆಗಳಿಗೆ ನೀರಿನ ನಲ್ಲಿ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. 2020–21ನೇ ಸಾಲಿನಲ್ಲಿ 6,865 ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗುತ್ತಿದೆ. 2022–23ರ ವೇಳೆಗೆ ರಾಜ್ಯದಾದ್ಯಂತ 90 ಲಕ್ಷ ಮನೆಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವರು, ತರಳಬಾಳು ನಗರದಲ್ಲಿನ ಜಲಜೀವನ್ ಯೋಜನೆಯ ಸಾಧಕ–ಭಾದಕಗಳ ಬಗ್ಗೆ ಸದಸ್ಯರಿಂದ ಮಾಹಿತಿ ಪಡೆದರು.
ಸದಸ್ಯರೊಬ್ಬರು ಗುತ್ತಿಗೆದಾರರು ಪೈಪ್‌ಗಳನ್ನು ಮುಖ್ಯ ರಸ್ತೆಯ ಪಕ್ಕದಲ್ಲಿ ಆಳದಲ್ಲಿ ಹಾಕದ ಬಗ್ಗೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆದಾರರು ಮನೆಗಳಿಗೆ ನಲ್ಲಿ ಸಂಪರ್ಕ ನೀಡಲು ಆಳಕ್ಕೆ ಪೈಪ್‌ಗಳನ್ನು ಹಾಕಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದರು. ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ. ಸಿದ್ಧೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರವೀಣ ಗೋಡೆಮನೆ, ಉಪಾಧ್ಯಕ್ಷೆ ಗಿರಿಜಮ್ಮ ಮಹೇಶ್, ಅಂದನೂರು ಗ್ರಾಮ ಪಂಚಾಯಿತಿ ಸಾಕಮ್ಮ, ವಿಶೇಷಾಧಿಕಾರಿ ಜೆ.ಜಯರಾಂ, ಓಂಕಾರಪ್ವ, ಪಿಡಿಒಗಳಾದ ನಟರಾಜ್, ಶಿವಕುಮಾರ್, ಪುನೀತ್, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.