ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ: ಯುವಕರು ಧ್ವನಿ ಎತ್ತಲಿ

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ
Published 22 ಫೆಬ್ರುವರಿ 2024, 16:34 IST
Last Updated 22 ಫೆಬ್ರುವರಿ 2024, 16:34 IST
ಅಕ್ಷರ ಗಾತ್ರ

ಸಿರಿಗೆರೆ: ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ನಿತ್ಯವೂ ಸಾಮಾಜಿಕ ಅಸಮಾನತೆ ಹೆಚ್ಚುತ್ತಿದೆ. ಇದರ ವಿರುದ್ಧ ಯುವಜನರು ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ತರಳಬಾಳು ಹುಣ್ಣಿಮೆ ಅಂಗವಾಗಿ ಗುರುವಾರ ಇಲ್ಲಿ ಏರ್ಪಡಿಸಿದ್ದ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಬಾಹ್ಯಾಕಾಶದಲ್ಲಿನ ಜೀವತಂತುಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮುಂದುವರಿಸಿದ್ದಾರೆ. ಆದರೆ, ಅಜ್ಞಾನಿಗಳು ಭೂಮಿಯ ಮೇಲೆ ನಿತ್ಯವೂ ಜೀವ ಹತ್ಯೆ ಮಾಡುತ್ತಿದ್ದಾರೆ ಎಂದ ಅವರು, ಈ ಮೇಳದ ಕುರಿತು ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದೇಶವು ಅಪೂರ್ವ ಸಾಧನೆ ಮಾಡಿದೆ. ಪರರ ದಾಸ್ಯದಿಂದ ಮುಕ್ತಿ ಪಡೆದು ಸ್ವತಂತ್ರ ಭಾರತ ಆದ ನಂತರ ವಿಜ್ಞಾನಿಗಳು ಬಾಹ್ಯಾಕಾಶ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬೆಂಗಳೂರಿನ ಇಸ್ರೊ ಯು.ಆರ್.‌ರಾವ್‌ ಉಪಗ್ರಹ ಕೇಂದ್ರದ ಜಿ-ವಿಭಾಗದ ಮುಖ್ಯಸ್ಥ ಪಿ. ಜಯಸಿಂಹ ತಿಳಿಸಿದರು.

‘ದಶಕಗಳ ಹಿಂದೆ ಊರಿನ ಪೋಸ್ಟ್‌ ಆಫೀಸಿನಲ್ಲಿ ಮಾತ್ರ ಒಂದು ಫೋನ್‌ ಇರುತ್ತಿತ್ತು. ಈಗ ಮನೆಮಂದಿಯೆಲ್ಲಾ ಒಂದೊಂದು ಫೋನ್‌ ಇಟ್ಟುಕೊಂಡಿದ್ದಾರೆ. ಇಂತಹ ಬೆಳವಣಿಗೆ ವಿಜ್ಞಾನದಿಂದ ಸಾಧ್ಯವಾಗಿದೆ. ರೈತರಿಗೆ, ಮೀನುಗಾರರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಉಪಗ್ರಹಗಳಿಂದ ಅನುಕೂಲವಾಗಿದೆ’ ಎಂದು ಹೇಳಿದರು.

ದೇಶವು ವಿಜ್ಞಾನದಲ್ಲಿ ಮುನ್ನಡೆ ಸಾಧಿಸುತ್ತಿರುವುದು ಜಗತ್ತಿನ ಇತರೆ ದೇಶಗಳಿಗೆ ಅಚ್ಚರಿ ಮೂಡಿಸಿದೆ. ಬಾಹ್ಯಾಕಾಶ ಸಂಶೋಧನೆಯ ವಿಷಯಗಳನ್ನು ಭಾರತದಿಂದ ಪಡೆಯಲು ಮುಂದಾಗಿವೆ ಎಂದು ಹೇಳಿದರು.

‘ಕೊರೊನಾ ಸಂದರ್ಭದಲ್ಲಿ ಅಗತ್ಯ ಲಸಿಕೆಯನ್ನು ಕೆಲವೇ ದಿನಗಳಲ್ಲಿ ಭಾರತವು ಕಂಡುಹಿಡಿಯಿತು. ಈ ಸಾಧನೆಯ ಹಿಂದೆ ಜೈವಿಕ ತಂತ್ರಜ್ಞಾನದ ಕೊಡುಗೆ ಇದೆ’ ಎಂದು ದಾವಣಗೆರೆ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸೀಮಾ ಜೆ. ಪಟೇಲ್‌ ತಿಳಿಸಿದರು.

ಖಗೋಳ ತಜ್ಞ ಎಚ್.‌ಎಸ್.‌ಟಿ. ಸ್ವಾಮಿ, ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.‌ಆರ್.‌ ಬಸವರಾಜಪ್ಪ, ಉಪಾಧ್ಯಕ್ಷ ಶಿವಳ್ಳಿ, ತರಳಬಾಳು ಸಂಸ್ಥೆಯ ಆಡಳಿತಾಧಿಕಾರಿ ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ ಭಾಗವಹಿಸಿದ್ದರು.

ತರಳಬಾಳು ಹುಣ್ಣಿಮೆಗೆ ಚಾಲನೆ

ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): ಸಿರಿಗೆರೆಯ ತರಳಬಾಳು ಮಠದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು. ತರಳಬಾಳು ಸಿಬಿಎಸ್‌ಇ ಶಾಲೆಯ ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಆಕರ್ಷಕವಾದ ಬೃಹತ್‌ ವೇದಿಕೆಯಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ವಿಜಯಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಅವರು ದೀಪ ಬೆಳಗಿಸಿ ಸಾಂಪ್ರದಾಯಿಕವಾಗಿ ಮಹೋತ್ಸವವನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT