ಚಿತ್ರದುರ್ಗ: ಜಿಲ್ಲೆಯಲ್ಲಿ ಗುರುವಾರ 67 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,712ಕ್ಕೆ ಏರಿಕೆಯಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿ ವಿವಿಧ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 14, ಹಿರಿಯೂರು 7, ಚಳ್ಳಕೆರೆ 4, ಹೊಸದುರ್ಗ 3, ಮೊಳಕಾಲ್ಮುರು 28 ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 11 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 25 ಜನ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಈಗಾಗಲೇ 1,167 ಜನರು ಗುಣಮುಖರಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಅಧಿಕಾರಿ ಹಾಗೂ ಕೆಲ ಸಿಬ್ಬಂದಿಗೂ ಸೋಂಕು ಕಾಣಿಸಿಕೊಂಡಿದೆ. ಸದ್ಯ ಜಿಲ್ಲೆಯಲ್ಲಿ 516 ಕಂಟೈನ್ಮೆಂಟ್ ವಲಯಗಳಿವೆ. ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 12,073 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.
1,827 ಜನರ ವರದಿ:
ಗುರುವಾರ ಒಂದೇ ದಿನ 1,827 ಜನರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಯ ವರದಿ ಬಂದಿದೆ. ಇದರಲ್ಲಿ ಬಹುತೇಕರ ವರದಿ ನೆಗೆಟಿವ್ ಎಂದಿದೆ. ಬುಧವಾರ 6,120 ಜನರ ವರದಿ ಬರುವುದು ಬಾಕಿ ಇತ್ತು. ಈಗ ಇನ್ನೂ 4,293 ಜನರ ವರದಿ ಬರುವುದು ಬಾಕಿ ಉಳಿದಿದೆ.