ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಸಂಕಷ್ಟದಲ್ಲಿ ತರಕಾರಿ ಮಾರಾಟಗಾರರು

ರದ್ದಾದ ವಾರದ ಸಂತೆಗಳು: ಕುಳಿತು ಮಾರಾಟಕ್ಕೂ ಅವಕಾಶವಿಲ್ಲ
ಅಕ್ಷರ ಗಾತ್ರ

ಮೊಳಕಾಲ್ಮುರು: ಕೋವಿಡ್‌ ಲಾಕ್‌ ಡೌನ್ ಪರಿಣಾಮವಾಗಿ ವಾರದ ಸಂತೆ ರದ್ದಾಗಿರುವುದರಿಂದ ಮಾರಾಟಗಾರರು ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ.

ತಾಲ್ಲೂಕಿನಲ್ಲಿ 134 ಜನವಸತಿ ಪ್ರದೇಶಗಳಿದ್ದು, ರಾಂಪುರ, ಮೊಳಕಾಲ್ಮುರು, ನಾಗಸಮುದ್ರ, ತಮ್ಮೇನಹಳ್ಳಿ, ಕೋನಸಾಗರ, ಕೊಂಡ್ಲಹಳ್ಳಿ, ಬಿ.ಜಿ.ಕೆರೆಯಲ್ಲಿ ವಾರದ ಸಂತೆಗಳನ್ನು ನಡೆಸಲಾಗುತ್ತಿದೆ. ವಾರಕ್ಕೊಮ್ಮೆ ಹೊಂದಿಕೊಂಡಿರುವ ಗ್ರಾಮಸ್ಥರು ಸಂತೆಗಳಲ್ಲಿ ತರಕಾರಿ, ಅಗತ್ಯ ವಸ್ತುಗಳನ್ನು ಕೊಳ್ಳುವುದು ಹಲವು ಕಾಲದಿಂದ ನಡೆದುಕೊಂಡು ಬಂದಿದೆ. ಆದರೆ, ಕೊರೊನಾ ಪರಿಸ್ಥಿತಿ ಇದನ್ನು ಬುಡಮೇಲು ಮಾಡಿದೆ ಎಂದು ಗ್ರಾಮಸ್ಥರಾದ ಮಾರಪ್ಪ, ಹನುಮಂತಪ್ಪ ದೂರುತ್ತಾರೆ.

ತರಕಾರಿ ಬೆಳೆಗಾರ ನಾರಾಯಣಪ್ಪ, ‘ನಾನು ಇರುವ ಒಂದು ಎಕರೆಯಲ್ಲಿ 3–4 ಬಗೆಯ ತರಕಾರಿ ಬೆಳೆದು ವಾರದ ಸಂತೆಗಳಿಗೆ ಕಳಿಸುತ್ತಿದ್ದೆ. ಇದು ವಾರದ ಖರ್ಚಿಗೆ ಕೈ ಹಿಡಿಯುತ್ತಿತ್ತು. ವಾರದ ಸಂತೆಯಲ್ಲಿ ಖರೀದಿಸುವವರು ನಮ್ಮ ಗ್ರಾಹಕರಾಗಿದ್ದರು. ಈಗ ಸಂತೆ ರದ್ದಾಗಿರುವ ಪರಿಣಾಮ ಅವರೇ ಸಂತೆಗೆ ಬರುತ್ತಿಲ್ಲ, ನಾವು ಬೆಳೆದಿರುವ ತರಕಾರಿಯನ್ನು ಎಲ್ಲಿಗೆ ಹೋಗಿ ಮಾರಾಟ ಮಾಡಬೇಕು’ ಎಂದು ಅಳಲು ತೋಡಿಕೊಂಡರು.

ರೈತ ನಾಗಭೂಷಣ ಮಾತನಾಡಿ, ‘ನಾನು 3 ಎಕರೆಯಲ್ಲಿ ಟೊಮೆಟೊ ಬೆಳೆಸಿದ್ದೇನೆ. ಇತ್ತ ವಾರದ ಸಂತೆಗಳೂ ಇಲ್ಲ. ಕೋಲಾರ, ಬಳ್ಳಾರಿ ಮಾರುಕಟ್ಟೆಗಳಿಗೆ ಕಳಿಸಲೂ ಆಗುತ್ತಿಲ್ಲ. ಹಣ್ಣು ಬಿಡಿಸಿದ ಕೂಲಿಯಾದರೂ ಸಿಗಲಿ ಎಂದು ಲಗೇಜ್ ಆಟೊದಲ್ಲಿ ಹಳ್ಳಿಗಳನ್ನು ಸುತ್ತಿ ಮಾರುತ್ತಿದ್ದೇನೆ. 15 ಕೆ.ಜಿ ಟೊಮೆಟೊ ಬಾಕ್ಸ್ ಅನ್ನು₹ 40–50ಕ್ಕೆ ಮಾರಲಾಗುತ್ತಿದೆ’ ಎಂದರು.

ತರಕಾರಿ ವ್ಯಾಪಾರ ಮಾಡುವ ತಿಪ್ಪಮ್ಮ ಮಾತನಾಡಿ, ‘ಮನೆಯಲ್ಲಿರುವ ಎತ್ತಿನ ಬಂಡಿಯಲ್ಲಿ ಹಳ್ಳಿಗಳಿಗೆ ಹೋಗಿ ತರಕಾರಿ ಮಾರುತ್ತಿದ್ದೇನೆ. ಒಂದು ಜೊತೆ ಎತ್ತು, ಗಾಡಿ ಹೊಡೆಯುವ ಒಬ್ಬರ ಖರ್ಚು ನಿಭಾಯಿಸಿಕೊಂಡು ವ್ಯಾಪಾರ ಮಾಡಬೇಕು. ಮೊದಲಿನ ತರಹ ವ್ಯಾಪಾರವಿಲ್ಲ, ಕೈಸುಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇನೆ. ಹೀಗೆಯೇ ಮುಂದುವರಿದಲ್ಲಿ ವ್ಯಾಪಾರ ನಿಲ್ಲಿಸುತ್ತೇನೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳು ಸ್ಥಳೀಯವಾಗಿ ತರಕಾರಿ ಮಾರಾಟಕ್ಕೆ ಸ್ಥಳ ಮತ್ತು ಕೋವಿಡ್ ಪರೀಕ್ಷೆಗೆ ಒಳಗಾಗಿರುವ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT