ಸೋಮವಾರ, ಆಗಸ್ಟ್ 8, 2022
21 °C
ಸೋಂಕು ಪತ್ತೆಹಚ್ಚಲು ವಿನೂತನ ಪ್ರಯೋಗ, ಸರಪಳಿ ತುಂಡರಿಸುವ ಪ್ರಯತ್ನ

ಚಿತ್ರದುರ್ಗ: ಮಾರುಕಟ್ಟೆಗೆ ಬರುವವರಿಗೆ ಕೋವಿಡ್‌ ಪರೀಕ್ಷೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಪರೀಕ್ಷೆ–ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌ ತೀವ್ರತೆ ಕಡಿಮೆಯಾದ ಬೆನ್ನಲ್ಲೇ ಲಾಕ್‌ಡೌನ್‌ ನಿಯಮಗಳು ಸಡಿಲಗೊಂಡಿವೆ. ರೋಗಿಗಳ ಶೀಘ್ರ ಪತ್ತೆ ಹಾಗೂ ಕೊರೊನಾ ಸೋಂಕಿನ ಸರಪಳಿಯನ್ನು ತಂಡರಿಸುವ ಪ್ರಯತ್ನದಲ್ಲಿ ನಿರತವಾಗಿರುವ ಆರೋಗ್ಯ ಇಲಾಖೆ, ಮಾರುಕಟ್ಟೆಗೆ ಬರುವ ಗ್ರಾಹಕರು, ವ್ಯಾಪಾರಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ.

ನಗರ ವ್ಯಾಪ್ತಿಯ ಮಾರುಕಟ್ಟೆ, ಜನಸಂದಣಿ ಪ್ರದೇಶದಲ್ಲಿ ಕೋವಿಡ್‌ ಪರೀಕ್ಷೆ ನಡೆಸಲು ತಂಡಗಳನ್ನು ರಚಿಸಲಾಗಿದೆ. ನಾಲ್ಕು ತಂಡಗಳು ಚಿತ್ರದುರ್ಗ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕು ಕೇಂದ್ರಗಳಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ. ‍ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಿ ಸೋಂಕಿತರನ್ನು ಪತ್ತೆ ಮಾಡುವ ಕಾರ್ಯವನ್ನು ಆರೋಗ್ಯ ಇಲಾಖೆ ಚುರುಕುಗೊಳಿಸಿದೆ.

ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸಲು ಮುಂಬೈ ಮಹಾನಗರದಲ್ಲಿ ಕೂಡ ಇದೇ ಮಾದರಿಯನ್ನು ಅನುಸರಿಸಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇಂತಹದೊಂದು ಪ್ರಯತ್ನ ಜಿಲ್ಲೆಯಲ್ಲಿಯೂ ನಡೆಯುತ್ತಿದೆ. ಹತ್ತು ದಿನಗಳಲ್ಲಿ 29,868ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ಮೂರು ದಿನಗಳಲ್ಲೇ 9,471 ಪರೀಕ್ಷೆ ನಡೆಸಲಾಗಿದೆ. ಹೀಗೆ ಪರೀಕ್ಷೆಗೆ ಒಳಗಾದವರಲ್ಲಿ ಸೋಂಕಿತರೂ ಪತ್ತೆಯಾಗಿದ್ದಾರೆ.

‘ನಾಲ್ಕು ತಂಡಗಳು ನಗರದ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡುತ್ತಿವೆ. ನಿತ್ಯ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಜನರನ್ನು ಪರೀಕ್ಷೆಗೆ ಒಳಪಡಸುತ್ತಿವೆ. ಕನಿಷ್ಠ 200 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿ ಪರೀಕ್ಷಿಸುವಂತೆ ಪ್ರತಿ ತಂಡಕ್ಕೆ ಗುರಿ ನೀಡಲಾಗಿದೆ. ಆ್ಯಂಟಿಜನ್ ಕಿಟ್‌ ಪರೀಕ್ಷೆಯಿಂದ ಸ್ಥಳದಲ್ಲೇ ಫಲಿತಾಂಶ ಲಭ್ಯವಾಗುತ್ತದೆ. ಸೋಂಕು ಪತ್ತೆಯಾದವರನ್ನು ಆಸ್ಪತ್ರೆ ಅಥವಾ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮ ಸಡಿಲಗೊಂಡಿದ್ದು, ಬೆಳಿಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ ಜನಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೋಂಕಿನ ಲಕ್ಷಣ ಇರುವವರೂ ಹೊರಗೆ ಸಂಚರಿಸುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಹೆಚ್ಚು ಜನ ಸೇರುವುದರಿಂದ ಸೋಂಕು ತ್ವರಿತಗತಿಯಲ್ಲಿ ಹರಡಬಹುದು ಎಂಬುದನ್ನು ಜಿಲ್ಲಾಡಳಿತ ಅರಿತಿದೆ. ರ‍್ಯಾಂಡಮ್‌ ಮಾದರಿಯಲ್ಲಿ ಜನರನ್ನು ಪರೀಕ್ಷೆಗೆ ಒಳಪಡಿಸುವುದರಿಂದ ಸೋಂಕಿತರನ್ನು ಪ್ರತ್ಯೇಕಿಸಲು ಅನುಕೂಲವಾಗಲಿದೆ.

‘ಕೋವಿಡ್‌ ಪರೀಕ್ಷೆಗೆ ಜಿಲ್ಲೆಯಲ್ಲಿ ಸದ್ಯ 25 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸಿ ಗುರುತಿಸಿದ ವ್ಯಕ್ತಿಗಳ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರಯಾಣ ಮಾಡಿದವರು, ಸೋಂಕಿತರ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಸಿರು ವಲಯದಲ್ಲಿರುವ ಹಳ್ಳಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಫಾಲಾಕ್ಷ ವಿವರಿಸಿದರು.

ಸಕ್ರಿಯ ಪ್ರಕರಣಗಳಿರುವ ಗ್ರಾಮಗಳಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಕೂಂಬಿಂಗ್‌ ಮಾದರಿಯಲ್ಲಿ ತಪಾಸಣೆ ಮಾಡಲಾಗುತ್ತಿದೆ. ಮಕ್ಕಳು, ವೃದ್ಧರು ಸೇರಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಚಿತ್ರದುರ್ಗ ತಾಲ್ಲೂಕಿನ ಹತ್ತು ಗ್ರಾಮಗಳಲ್ಲಿ ಈ ಕಾರ್ಯ ಅನುಷ್ಠಾನಕ್ಕೆ ಬಂದಿದೆ. ಜಿಲ್ಲೆಯ ಉಳಿದ ಹಳ್ಳಿಗಳಲ್ಲಿಯೂ ಇದೇ ಮಾದರಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಈ ನಡುವೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್‌ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗಿದೆ. ಕೋವಿಡ್‌ ಪರೀಕ್ಷೆಗೆ ಸರತಿ ಸಾಲಿನಲ್ಲಿ ಕಾಯಬೇಕಾದ ಸ್ಥಿತಿ ದೂರವಾಗಿದೆ. ಸ್ವಯಂ ಪ್ರೇರಿತವಾಗಿ ಸೋಂಕು ಪರೀಕ್ಷೆಗೆ ಬರುವವರ ಪ್ರಮಾಣ ಕಡಿಮೆ ಆಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.

ಖಾಲಿ ಆಗುತ್ತಿವೆ ಆರೈಕೆ ಕೇಂದ್ರ

ಸಕ್ರಿಯ ಪ್ರಕರಣ ಕಡಿಮೆಯಾದ ಪರಿಣಾಮ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿದ್ದ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣಿಸುತ್ತಿದೆ. ಸೋಂಕು ನಿಯಂತ್ರಣಕ್ಕೆ ಬಂದರೆ ಈ ಕೇಂದ್ರಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದ್ದರಿಂದ ಜಿಲ್ಲೆಯಲ್ಲಿ 25 ಆರೈಕೆ ಕೇಂದ್ರಗಳನ್ನು ತೆರೆಯಲಾಗಿತ್ತು. 22 ಸರ್ಕಾರಿ ಹಾಗೂ 3 ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. 1,273 ಹಾಸಿಗೆ ಸಾಮಾರ್ಥ್ಯದ ಕೇಂದ್ರಗಳಲ್ಲಿ 232 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಕೇಂದ್ರಗಳಲ್ಲಿ ಬೆರಳೆಣಿಕೆಯ ಸೋಂಕಿತರಿದ್ದಾರೆ. ಇವರನ್ನು ಒಂದೆಡೆಗೆ ಸ್ಥಳಾಂತರಿಸುತ್ತೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ತಿಳಿಸಿದ್ದಾರೆ.

* ನಗರ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಇಂತಹ ಸ್ಥಳದಲ್ಲಿ ಕೋವಿಡ್‌ ಪರೀಕ್ಷೆ ನಡೆಸಿದರೆ ಸೋಂಕಿತರನ್ನು ಪತ್ತೆ ಮಾಡಲು ಸಾಧ್ಯವಾಗಲಿದೆ. ಹೀಗೆ ಮಾಡುವ ಪರೀಕ್ಷೆಯಲ್ಲಿ ಸೋಂಕಿತರು ಪತ್ತೆ ಆಗುತ್ತಿದ್ದಾರೆ.

- ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು