ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಮಾರಾಟ: ಅಡ್ಡಿ ನಿವಾರಣೆ

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ
Last Updated 2 ಜನವರಿ 2021, 14:47 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರೈತರು ಬೆಳೆಯನ್ನು ದೇಶದ ಯಾವುದೇ ಮೂಲೆಯಲ್ಲಾದರೂ ತಮಗೆ ಸೂಕ್ತ ಎನಿಸಿದ ದರ ಯಾರು ನೀಡುತ್ತಾರೆ ಅವರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಜಿಲ್ಲೆಯಲ್ಲಿ ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅದನ್ನು ಬೇರೆ ರಾಜ್ಯಕ್ಕೆ ಕೊಂಡೊಯ್ಯಲು ಇದ್ದ ಅಡ್ಡಿಗಳೆಲ್ಲವನ್ನೂ ನಿವಾರಣೆ ಮಾಡಲಾಗಿದೆ. ಇದು ಸಾಧ್ಯವಾಗಿದ್ದು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಯಿಂದ ಎಂಬುದನ್ನು ರೈತರು ಮೊದಲು ಅರ್ಥಮಾಡಿಕೊಳ್ಳಬೇಕು’ ಎಂದರು.

‘ಗುಜರಾತ್‌, ಉತ್ತರಪ್ರದೇಶ ಸೇರಿ ಯಾವುದೇ ರಾಜ್ಯಕ್ಕೆ ಬೆಳೆಗಳನ್ನು ದಾಖಲೆ ಇದ್ದರೂ ತೆಗೆದುಕೊಂಡು ಹೋಗಲು ಈ ಹಿಂದೆ ರೈತರಿಗೆ ಸಾಧ್ಯವಾಗುತ್ತಿರಲಿಲ್ಲ. ಗುಜರಾತ್‌ನಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಿದ್ದು, ರಾಜ್ಯದ ಪುತ್ತೂರಿನಿಂದ ಈಚೆಗೆ 100 ಜನ ಬೆಳೆಗಾರರ ಅಡಿಕೆಯನ್ನು ಕಿಸಾನ್‌ ಟ್ರೈನ್‌ ಮೂಲಕ ಉಚಿತವಾಗಿ ಕಳುಹಿಸಿಕೊಡಲಾಗಿದೆ’ ಎಂದು ಹೇಳಿದರು.

‘ದೇಶದ ರೈತರಿಗೆ ಸಬ್ಸಿಡಿ ನೀಡಲು ₹ 1.10 ಲಕ್ಷ ಕೋಟಿ ಅನುದಾನ ಬೇಕು. ಈಚೆಗೆ ₹ 73 ಸಾವಿರ ಕೋಟಿ ಅಗತ್ಯವಿದೆ ಎಂಬ ಬೇಡಿಕೆ ಇಡಲಾಗಿತ್ತು. ರೈತರ ಹಿತ ಹೊಂದಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಗೊಬ್ಬರಕ್ಕಾಗಿ ₹ 65 ಸಾವಿರ ಕೋಟಿ ಸಬ್ಸಿಡಿ ನೀಡುವ ಮೂಲಕ ತೊಂದರೆ ಉಂಟಾಗದಂತೆ ನೋಡಿಕೊಂಡಿದೆ’ ಎಂದರು.

‘ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರೈತ ಮುಖವಾಡ ಧರಿಸಿರುವ ಬಿಜೆಪಿ ವಿರೋಧಿ ನಾಯಕರೇ ಇದಕ್ಕೆ ಕಾರಣ. ಉಳಿದ ರಾಜ್ಯಗಳಲ್ಲಿ ಕಾಯ್ದೆ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ಮಾತ್ರ ನಡೆಯುತ್ತಿವೆ. ರೈತ ವಿರೋಧಿ ಧೋರಣೆಯುಳ್ಳವರ ಮಾತಿಗೆ ಮನ್ನಣೆ ನೀಡದೇ ಸರ್ಕಾರದೊಂದಿಗೆ ಸ್ಪಂದಿಸಿ’ ಎಂದು ರೈತರಿಗೆ ಮನವಿ ಮಾಡಿದರು.

‘ಅತಿ ಹೆಚ್ಚು ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಅದಕ್ಕಾಗಿ ಸಾವಯವ ಗೊಬ್ಬರಕ್ಕೆ ಉತ್ತೇಜನ ನೀಡಲಾಗುತ್ತಿದೆ. ಜಮೀನು, ಬಂಡವಾಳ, ಶ್ರಮ ಎಲ್ಲವೂ ರೈತ ಸಮುದಾಯದ್ದೇ ಆಗಿರುವುದರಿಂದ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರಮಿಸಲಿದ್ದೇವೆ’ ಎಂದು ಭರವಸೆ ನೀಡಿದರು.

ವರಿಷ್ಠರ ನಿರ್ಧಾರ ಅಂತಿಮ: ‘ಸಚಿವ ಸಂಪುಟ ರಚನೆ ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿದ್ದು. ಈ ಕುರಿತು ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ರಮೇಶ್‌ ಜಾರಕಿಹೊಳಿ ಅವರು ಹಲವು ಬಾರಿ ನನ್ನನ್ನು ಭೇಟಿಯಾಗಿದ್ದಾರೆ. ಆದರೆ, ಲಾಬಿ ಮಾಡುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕೆಲವರು ತ್ಯಾಗ ಮಾಡಿದ್ದಾರೆ. ಅವರಿಗೂ ಆದ್ಯತೆ ನೀಡಬೇಕಿದೆ. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೇರಿ ಪಕ್ಷದೊಳಗಿನ ಅನೇಕರು ಆಕಾಂಕ್ಷಿಗಳಿದ್ದಾರೆ. ಒಳಗೆ ನೋವಿದ್ದರೂ ಬಹಿರಂಗವಾಗಿ ತೋಡಿಕೊಳ್ಳದೆ ಪಕ್ಷನಿಷ್ಠೆ ತೋರುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪಕ್ಷದ ಆಂತರಿಕ ವಿಚಾರ ಬಹಿರಂಗಪಡಿಸುವಂತಿಲ್ಲ. ಆದರೂ ಕೆಲವರು ಬಾಹ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆಯೂ ಶಿಸ್ತಿನ ಸಿಪಾಯಿಗಳು ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಕ್ಷಕ್ಕೆ ವಿಧಾನಪರಿಷತ್‌ನಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಜೆಡಿಎಸ್‌ ಬೆಂಬಲ ನೀಡುವ ವಿಶ್ವಾಸ ವ್ಯಕ್ತಪಡಿಸಿದೆ. ನಮಗೆ ಸಭಾಪತಿ, ಅವರಿಗೆ ಉಪಸಭಾಪತಿ ಸ್ಥಾನ ಹಂಚಿಕೆಯ ಕುರಿತು ಚರ್ಚೆಗಳು ನಡೆದಿವೆ. ಬಿಜೆಪಿ ತತ್ವ, ಸಿದ್ಧಾಂತ ಒಪ್ಪಿ ಯಾರೇ ಬಂದರೂ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ’ ಎಂದು ಹೇಳಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಇದ್ದರು.

ಶೇ 40ರಷ್ಟು ಗೊಬ್ಬರ ಮಾರಾಟ

‘ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ನಿರಂತರ ಚಟುವಟಿಕೆಯಲ್ಲಿ ಇದ್ದದು ಕೃಷಿ ಕ್ಷೇತ್ರ ಮಾತ್ರ. ಈ ಅವಧಿಯಲ್ಲಿ ಹಿಂದಿಗಿಂತಲೂ ಶೇ 40ರಷ್ಟು ಗೊಬ್ಬರ ಮಾರಾಟವಾಗಿದೆ. ಗೊಬ್ಬರದ ಕೊರತೆ ಉಂಟಾಗದಂತೆ 12.7 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಉತ್ಪಾದಿಸಲು ಸರ್ಕಾರ ಮುಂದಾಗಿದೆ’ ಎಂದು ಡಿ.ವಿ. ಸದಾನಂದಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT