ಶುಕ್ರವಾರ, ಮೇ 20, 2022
19 °C
ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದವರಿಗೆ, ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ ಪೊಲೀಸರು

‘ವಾರಾಂತ್ಯದ ಕರ್ಫ್ಯೂ’ನಲ್ಲಿ ಭರ್ಜರಿ ಬಾಡೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ- ಓಮೈಕ್ರಾನ್ ಸೋಂಕು ನಿಯಂತ್ರಣಕ್ಕೆ ಸರ್ಕಾರದ ವಿಧಿಸಿದ್ದ ‘ವಾರಾಂತ್ಯದ ಕರ್ಫ್ಯೂ’ಗೆ ಭಾನುವಾರ ಜಿಲ್ಲೆಯ ಜನರು ಮಿಶ್ರ ಪ್ರತಿಕ್ರಿಯೆ ತೋರಿದರು.

ಜಿಲ್ಲೆಯಲ್ಲಿ ಸತತ ಎರಡನೇ ವಾರ ನಿಷೇಧಾಜ್ಞೆ ಮುಂದುವರಿದಿದ್ದು, ಅಗತ್ಯ ಸೇವೆಗಳ ಅಂಗಡಿಗಳು ಹೊರತುಪಡಿಸಿ ಉಳಿದವು ಬಂದ್ ಆಗಿದ್ದವು. ಆದರೂ ಜನರ ಸಂಚಾರ ಮಾತ್ರ ಎಂದಿನಂತೆ ಕಂಡುಬಂದಿತು.

ನಗರದ ಮುಖ್ಯ ರಸ್ತೆಯಲ್ಲಿ ಜನರ ಸಂಚಾರ ಕೊಂಚ ವಿರಳವಾಗಿತ್ತು. ಪೊಲೀಸರ ಗಸ್ತು ಮುಖ್ಯ ರಸ್ತೆಗೆ ಸೀಮಿತಗೊಂಡಿದ್ದ ಕಾರಣ ಬಡಾವಣೆಗಳಲ್ಲಿ ಸಾರ್ವಜನಿಕರು ನಿರ್ಭೀತಿಯಿಂದ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಳಿಗ್ಗೆ 10ರವರೆಗೆ ಗಾಂಧಿವೃತ್ತ, ಸಂತೆಹೊಂಡ, ಖಾಸಗಿ ಬಸ್ ನಿಲ್ದಾಣದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂದಿತು. ಮಧ್ಯಾಹ್ನವಾಗುತ್ತ ಜನರ ದಟ್ಟಣೆ ಕ್ಷೀಣಿಸಿತು. ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದವರಿಗೆ, ಮಾಸ್ಕ್ ಹಾಕದವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು.

ಕೋಟೆ ಹಾಗೂ ಚಂದ್ರವಳ್ಳಿಗೆ ಪ್ರವೇಶ ನಿಷೇಧಿಸಿದ್ದರಿಂದ ಜನರು ತಿಮ್ಮಣ್ಣ ನಾಯಕನ ಕೆರೆಯ ಮಾವಿನ ತೋಪಿನಲ್ಲಿ ಭಾನುವಾರ ಕುಟುಂಬ ಸಮೇತ ಕಳೆದರು. ಕೆಲವರು ಅಲ್ಲಿಯೇ ಅಡುಗೆ ಸಿದ್ಧಗೊಳಿಸಿದರೆ, ಮತ್ತೆ ಕೆಲವರು ಊಟವನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಸ್ವಚ್ಛಂದ ಪರಿಸರದಲ್ಲಿ ಊಟ ಸವಿದು ಸಂಜೆಯವರೆಗೂ ವಿಶ್ರಾಂತಿ ತೆಗೆದುಕೊಂಡರು. ಪಡ್ಡೆ ಹುಡುಗರ, ಮದ್ಯಪ್ರಿಯರ ಹಾವಳಿ ತಡೆಯಲು ತಿಮ್ಮಣ್ಣನಾಯಕನ ಕೆರೆಯ ಪ್ರವೇಶ ದ್ವಾರದಲ್ಲಿ ಆಡುಮಲ್ಲೇಶ್ವರ ಕಿರುಮೃಗಾಲಯದ ವಾಚರ್‌ಗಳು ಬೀಡು ಬಿಟ್ಟಿದ್ದರು. ಇದರಿಂದ ಬಹುತೇಕರು ಹಿಂತಿರುಗಿದರು.

ಖಾಸಗಿ ಬಸ್‌ಗಳು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಖಾಸಗಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಆದರೂ ಬಸ್‌ಗಳು ಬರುವ ನಿರೀಕ್ಷೆಯಲ್ಲಿ ಕಾದು ಕುಳಿತ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿದರು. ಆಟೊಗಳ ಸಂಚಾರ ಸಹ ವಿರಳವಾಗಿತ್ತು.

ಹೊಳಲ್ಕೆರೆ ರಸ್ತೆಯ ಕನಕ ವೃತ್ತ, ಚಳ್ಳಕೆರೆ ಟೋಲ್‌ಗೇಟ್, ಚಿನ್ಮೂಲಾದ್ರಿ, ಮೇದೆಹಳ್ಳಿ ಅಂಡರ್‌ಪಾಸ್‌ಗಳಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು. ಎಳನೀರು, ಕಡಲೆ ಹಾಗೂ ಹಣ್ಣಿನ ವ್ಯಾಪಾರಸ್ಥರು ಒಂದಿಷ್ಟು ದುಡಿಮೆ ಮಾಡಿಕೊಂಡು ಸಂಜೆಯ ವೇಳೆಗೆ ಮನೆಗಳತ್ತ ಹೆಜ್ಜೆ ಹಾಕಿದರು.

ಮಾಂಸ ಖರೀದಿಗೆ ಮುಗಿಬಿದ್ದ ಜನತೆ

ಸಂಕ್ರಾಂತಿ ಹಬ್ಬ ಮುಗಿದ ಬೆನ್ನಲ್ಲೇ ಭಾನುವಾರ ಬಂದ ಕಾರಣ ಜನರು ‘ಭಾನುವಾರ ಬಾಡೂಟ’ಕ್ಕೆ ಸಿದ್ಧತೆ ನಡೆಸಿದ್ದರು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಜೋಗಿಮಟ್ಟಿ ರಸ್ತೆ ಹಾಗೂ ಸಂತೆ ಹೊಂಡದ ರಸ್ತೆಯ ಮಟನ್, ಚಿಕನ್ ಹಾಗೂ ಫಿಶ್ ಸ್ಟಾಲ್‌ಗಳ ಮುಂದೆ ನಾನ್‌ವೆಜ್ ಪ್ರಿಯರು ಜಮಾಯಿಸಿದ್ದರು.

ಬಹುತೇಕ ಅಂಗಡಿಗಳ ಮುಂದೆ ಕೊರೊನಾ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿತ್ತು. ನೆಪ ಮಾತ್ರಕ್ಕೆ ಮಾಸ್ಕ್‌ಗಳನ್ನು ಕೊರಳಿಗೆ ಹಾಕಿಕೊಂಡಿದ್ದರು. ಅಂತರ ಕಾಯ್ದು ಕೊಳ್ಳುವುದನ್ನು ಮರೆತು ಮಾಂಸ ಖರೀದಿಯಲ್ಲಿ ತಲ್ಲೀನರಾಗಿದ್ದರು.

...........

ಕೊರೊನಾ ನಿಯಂತ್ರಣ ಜನರ ಕೈಯಲ್ಲಿದೆ. ವಾರಾಂತ್ಯದ ಕರ್ಫ್ಯೂ ಕಾರಣಕ್ಕೆ ಯುವಕರ ಗುಂಪು ತಿಮ್ಮಣ್ಣ ನಾಯಕನ ಕೆರೆಯ ಪ್ರದೇಶಕ್ಕೆ ಆಗಮಿಸಿ ಮೋಜು ಮಸ್ತಿ ಮಾಡುತ್ತಾರೆ. ಅಂತಹವರನ್ನು ಈ ಪ್ರದೇಶದಲ್ಲಿ ನಿಯಂತ್ರಿಸಲಾಗುತ್ತಿದೆ.

- ಎಸ್. ಮಂಜುನಾಥ್, ವಾಯುವಿಹಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.