ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಶಿಕ್ಷಕ ಹುದ್ದೆ, ವಸತಿ ಶಾಲೆ ಪ್ರವೇಶ ಕೊಡಿಸಿ: ಸಚಿವರ ಮೇಲೆ ಒತ್ತಡ

ಹಿರಿಯೂರು: ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ಸಚಿವ ಸುಧಾಕರ್
Published 18 ಜೂನ್ 2023, 16:22 IST
Last Updated 18 ಜೂನ್ 2023, 16:22 IST
ಅಕ್ಷರ ಗಾತ್ರ

ಹಿರಿಯೂರು: ಅತಿಥಿ ಉಪನ್ಯಾಸಕರ ಹುದ್ದೆ ಕೊಡಿಸಿ, ಮೊರಾರ್ಜಿ ದೇಸಾಯಿ, ಏಕಲವ್ಯ, ಕಿತ್ತೂರು ಚನ್ನಮ್ಮ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಿ, ಮಕ್ಕಳ ಓದಿಗೆ ನೆರವು ನೀಡಿ, ಕುಟುಂಬದ ಸದಸ್ಯರ ಆರೋಗ್ಯ ತಪಾಸಣೆಗೆ ಹಣ ಕೊಡಿ ಎಂಬಿತ್ಯಾದಿ ಅರ್ಜಿಗಳನ್ನು ಹಿಡಿದು ನೂರಾರು ಜನರು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಕಚೇರಿ ಮುಂದೆ ಭಾನುವಾರ ಜಮಾಯಿಸಿದ್ದರು.

ಸಾರ್ವಜನಿಕರಿಂದ ಕುಂದು–ಕೊರತೆ ಅರ್ಜಿ ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಚಿವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

‘ಶಾಲೆಗಳು ಆರಂಭವಾಗಿವೆ. ಕೆಲವು ಕಡೆ ಶಾಲಾ ಕಾಲೇಜುಗಳ ಮುಖ್ಯಸ್ಥರೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಮಗೆ ಕೆಲಸ ಕೊಡಲಿಲ್ಲ. ನೀವು ನಮ್ಮನ್ನು ಕೈಬಿಡಬೇಡಿ’ ಎಂದು ಪದವೀಧರರು ಹಾಗೂ ಅವರ ಪೋಷಕರು ಮನವಿ ಮಾಡಿದರು. ವಸತಿ ಶಾಲೆಗಳಲ್ಲಿ ತಮ್ಮ ಮಗುವಿಗೆ ಪ್ರವೇಶಾತಿ ದೊರಕಿಸಲು ಶಿಫಾರಸು ಪತ್ರ ಕೊಡಿ ಎಂದು ಪೋಷಕರು ಕೋರಿದರು. 

‘ಅತಿಥಿ ಶಿಕ್ಷಕರ ಆಯ್ಕೆಗೂ ಕೌನ್ಸೆಲಿಂಗ್ ಮಾಡಲಾಗುತ್ತದೆ. ಹಿಂದಿನ ಸರ್ಕಾರದಲ್ಲಿ ನೇಮಕಾತಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಕೆಲವರು ಜೈಲು ಪಾಲಾಗಿದ್ದಾರೆ. ಸರ್ಕಾರದ ನಿಯಮ ಮೀರಿ ನೇಮಕ ಅಸಾಧ್ಯ. ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತದೆ. ಪರೀಕ್ಷೆ ತೆಗೆದುಕೊಳ್ಳಲು ಮಕ್ಕಳಿಗೆ ಹೇಳಿ. ಈಗ ಕಷ್ಟಪಟ್ಟರೆ ಭವಿಷ್ಯದಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬಹುದು’ ಎಂದು ತಿಳಿ ಹೇಳಿದ ಸುಧಾಕರ್ ಅವರು ಶಿಕ್ಷಣ ಮುಂದುವರಿಕೆಗೆ, ಆರೋಗ್ಯ ತಪಾಸಣೆಗೆ ಕೈಲಾದ ನೆರವು ನೀಡುವ ಭರವಸೆ ನೀಡಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಎಂದಾಕ್ಷಣ ಜಿಲ್ಲೆಯಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಸರ್ಕಾರದ ನಿಯಮಗಳನ್ನು ಮೀರಿ ನಡೆಯಲು ಸಾಧ್ಯವಿಲ್ಲ. ಕೆಲವರು ಗ್ರಾಮ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ಇಂತಹ ಮೀಸಲಾತಿಯೇ ಬರುವಂತೆ ಮಾಡಿ ಎಂದು ಕೇಳುತ್ತಾರೆ. ಅದೆಲ್ಲ ಸಾಧ್ಯವೇ. ಲಾಟರಿ ಮೂಲಕ ಮೀಸಲಾತಿ ನಿರ್ಧರಿಸಲಾಗುತ್ತದೆ ಎಂದರೂ ಬೇಸರ ವ್ಯಕ್ತಪಡಿಸುವುದುಂಟು. ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ನೆರವು ನೀಡಲು ಸದಾ ಸಿದ್ಧನಿರುವೆ’ ಎಂದು ಸುಧಾಕರ್ ಹೇಳಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಮುಖಂಡರಾದ ದಿಂಡಾವರ ಶಿವಣ್ಣ, ಚಿಗಳಿಕಟ್ಟೆ ಕಾಂತರಾಜ್, ಈ. ಮಂಜುನಾಥ್, ಬಿ.ಎನ್. ಪ್ರಕಾಶ್, ಅಜ್ಜಪ್ಪ, ಅನಿಲ್ ಕುಮಾರ್, ಸುರೇಖಾಮಣಿ, ಮಮತಾ, ಶಿವರಂಜಿನಿ, ಕಂದಿಕೆರೆ ಸುರೇಶಬಾಬು, ವಕೀಲ ಶಿವಕುಮಾರ್, ಶಿವಣ್ಣ, ಮಸ್ಕಲ್ ಶ್ರೀನಿವಾಸ್, ಉಡುವಳ್ಳಿ ಶಮ್ಮು, ಜ್ಞಾನೇಶ್, ವಿ. ಶಿವಕುಮಾರ್, ಗುರುಪ್ರಸಾದ್, ಹೇಮಂತ್ ಯಾದವ್, ವೆಂಕಟೇಶ್ ಅವರು ಕಾರ್ಯಕ್ರಮದಲ್ಲಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT