ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯರಾತ್ರಿ ಆಮ್ಲಜನಕ ತಂದ ಡಿಸಿ

ತಪ್ಪಿದ ಸಂಭವನೀಯ ಅನಾಹುತ, ಕರಗಿದ ಆತಂಕದ ಕಾರ್ಮೋಡ
Last Updated 19 ಮೇ 2021, 16:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಮ್ಲಜನಕ ಹೊತ್ತು ತರುತ್ತಿದ್ದ ಟ್ಯಾಂಕರ್‌ ಮಾರ್ಗಮಧ್ಯೆಯೇ ಕೆಟ್ಟುನಿಂತ ಪರಿಣಾಮ ಮಂಗಳವಾರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯರಾತ್ರಿ ಸ್ಥಳಕ್ಕೆ ತೆರಳಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಟ್ಯಾಂಕರ್‌ ಸರಿಪಡಿಸಿ ಆಮ್ಲಜನಕ ತರುತ್ತಿದ್ದಂತೆ ಆತಂಕದ ಕಾರ್ಮೋಡ ನಿಧಾನವಾಗಿ ಕರಗಿ ಹೋಯಿತು.

ಜಿಲ್ಲಾಧಿಕಾರಿಯ ಸಮಯ ಪ್ರಜ್ಞೆಗೆ ಸಂಭವನೀಯ ಅನಾಹುತವೊಂದು ತಪ್ಪಿದಂತಾಗಿದೆ. ಆಮ್ಲಜನಕ ಹೊಂದಿಸಲು, ಅದನ್ನು ಜೋಪಾನವಾಗಿ ತರಲು ಶ್ರಮಿಸುತ್ತಿರುವ ಪರಿಗೆ ಖಾಸಗಿ ಆಸ್ಪತ್ರೆಯ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಬಳ್ಳಾರಿ ಜಿಲ್ಲೆಯ ತೋರಣಗಲ್‌ನಿಂದ ಆಮ್ಲಜನಕ ಪೂರೈಕೆ ಆಗುತ್ತದೆ. 9 ಸಾವಿರ ಲೀಟರ್‌ ಆಮ್ಲಜನಕ ಹೊತ್ತು ಬರುತ್ತಿದ್ದ ಟ್ಯಾಂಕರ್‌, ಚಿತ್ರದುರ್ಗ– ಹೊಸಪೇಟೆ ಮಾರ್ಗದ ದೊಣ್ಣೆಹಳ್ಳಿ ಬಳಿ ಕೆಟ್ಟು ನಿಂತಿದೆ. ಸಕಾಲಕ್ಕೆ ಚಿತ್ರದುರ್ಗ ತಲುಪುವುದು ಅನುಮಾನವಾಗಿದ್ದರಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಅವರು ಜಿಲ್ಲಾಧಿಕಾರಿಗೆ ಮಧ್ಯರಾತ್ರಿ 1.30ಕ್ಕೆ ಮಾಹಿತಿ ನೀಡಿದ್ದಾರೆ.

‘ಆಮ್ಲಜನಕ ಪೂರೈಕೆಗೆ ಪರ್ಯಾಯ ವ್ಯವಸ್ಥೆಯನ್ನು ರಾತ್ರಿಯೇ ಮಾಡಿಕೊಳ್ಳಲಾಯಿತು. ಅಗತ್ಯ ಇರುವ ಜಂಬೂ ಸಿಲಿಂಡರ್‌ ಹೊಂದಿಸಿ ಆಸ್ಪತ್ರೆಗೆ ನೀಡಲಾಯಿತು. ಮೆಕ್ಯಾನಿಕ್‌, ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ರಾತ್ರಿಯೇ ಸ್ಥಳಕ್ಕೆ ತೆರಳಿ ಟ್ಯಾಂಕರ್‌ ದುರಸ್ತಿ ಮಾಡಲಾಯಿತು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾತ್ರಿ 2.30ಕ್ಕೆ ಅಲ್ಲಿಂದ ಹೊರಟ ಟ್ಯಾಂಕರ್‌ ನಸುಕಿನ 4ಕ್ಕೆ ಬಸವೇಶ್ವರ ಆಸ್ಪತ್ರೆ ತಲುಪಿದೆ. ನಾಲ್ಕು ಸಾವಿರ ಲೀಟರ್ ಆಮ್ಲಜನಕವನ್ನು ಪೂರೈಸಿ ದಾವಣಗೆರೆಯತ್ತ ಸಾಗಿದೆ. ಇಡೀ ರಾತ್ರಿ ಅಧಿಕಾರಿಗಳು ನಿದ್ದೆಗೆಟ್ಟು ಆಮ್ಲಜನಕಕ್ಕೆ ಪರದಾಡಿದ್ದಾರೆ.

ಡಿಸಿ ಕುಟುಂಬ ಬಾಧಿಸಿದ ಸೋಂಕು

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರ ಕುಟುಂಬವನ್ನೂ ಕೋವಿಡ್‌ ಬಾಧಿಸಿದೆ. ಕವಿತಾ ಹಾಗೂ ಅವರ 80 ವರ್ಷದ ತಂದೆ ಹೊರತುಪಡಿಸಿ ಕುಟುಂಬದ ನಾಲ್ವರು ಸೋಂಕಿನಿಂದ ಗುಣಮುಖ ಆಗುತ್ತಿದ್ದಾರೆ.

ಬೆಂಗಳೂರಿನಿಂದ ಮರಳಿದ ಜಿಲ್ಲಾಧಿಕಾರಿ ಅವರ ಪತಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಪರೀಕ್ಷೆ ಒಳಪಡಿಸಿದಾಗ ಪತಿ, ಅವರ ಇಬ್ಬರು ಪುತ್ರರು ಹಾಗೂ 69 ವರ್ಷದ ತಾಯಿಯಲ್ಲಿ ಸೋಂಕು ಇರುವುದು ಗೊತ್ತಾಗಿದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಪತಿ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಉಳಿದ ಮೂವರು ಮನೆಯಲ್ಲೇ ಪ್ರತ್ಯೇಕವಾಗಿದ್ದು ಕೋವಿಡ್‌ ಗೆದ್ದಿದ್ದಾರೆ.

‘ಕಳೆದ ವಾರ ಕುಟುಂಬವನ್ನು ಕೋವಿಡ್‌ ಬಾಧಿಸಿತು. ಕಾರ್ಯದೊತ್ತಡದ ನಡುವೆ ಕುಟುಂಬದತ್ತ ಗಮನ ಕೊಡುವುದು ಕಷ್ಟವಾಗಿತ್ತು. ಮನೆಯಲ್ಲಿ ಪ್ರತ್ಯೇಕವಾಗಿದ್ದ ಮೂವರಿಗೂ ನಾನೇ ಊಟ ನೀಡುತ್ತಿದ್ದೆ. ಈಗ ಎಲ್ಲರೂ ಗುಣಮುಖರಾಗುತ್ತಿದ್ದಾರೆ’ ಎಂದರು ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT